ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತ್ರಾವತಿ ಸೇತುವೆ– ಸೆಂಟ್ರಲ್‌ ನಿಲ್ದಾಣಗಳ ನಡುವೆ ದ್ವಿಪಥ ಹಳಿ

ಸುರಕ್ಷತೆ ಪರಿಶೀಲಿಸಿದ ಅಧಿಕಾರಿಗಳ ತಂಡ
Last Updated 10 ಫೆಬ್ರುವರಿ 2021, 3:16 IST
ಅಕ್ಷರ ಗಾತ್ರ

ಮಂಗಳೂರು: ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ನೇತ್ರಾವತಿ ಸೇತುವೆ–ಮಂಗಳೂರು ಸೆಂಟ್ರಲ್‌ ದ್ವಿಪಥ ರೈಲು ಮಾರ್ಗದ ಕಾಮಗಾರಿ ಪೂರ್ಣಗೊಂಡಿದ್ದು, ರೈಲ್ವೆ ಸುರಕ್ಷತಾ ಆಯುಕ್ತ ಎ.ಕೆ. ರೈ ನೇತೃತ್ವದ ತಂಡ ಮಂಗಳವಾರ ಪರಿಶೀಲನೆ ನಡೆಸಿದೆ.

ನೇತ್ರಾವತಿ ಸೇತುವೆಯಿಂದ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದವರೆಗಿನ ಒಂದೂವರೆ ಕಿ.ಮೀ. ಉದ್ದದ ಬಹುನಿರೀಕ್ಷಿತ ರೈಲು ಹಳಿ ದ್ವಿಗುಣ ಕಾಮಗಾರಿಗೆ 2016 -17ರಲ್ಲಿ ಅನುಮೋದನೆ ನೀಡಲಾಗಿತ್ತು. 2017ರ ಆ. 18ರಂದು ಅಂದಿನ ರೈಲ್ವೆ ಸಚಿವ ಸುರೇಶ್‌ ಪ್ರಭು ಅವರು ನವದೆಹಲಿಯಿಂದಲೇ ವಿಡಿಯೊ ಕಾನ್ಫರೆನ್ಸ್‌ ಮೂಲಕ ಶಿಲಾನ್ಯಾಸ ನಡೆಸಿದ್ದರು. ಆರಂಭದಲ್ಲಿ ₹28.05 ಕೋಟಿ ವೆಚ್ಚ ಅಂದಾಜಿಸಿದ್ದರೂ, ಕಾಮಗಾರಿಗೆ ಒಟ್ಟಾರೆ ₹38 ಕೋಟಿಗೂ ಅಧಿಕ ಖರ್ಚಾಗಿದೆ.

ನೇತ್ರಾವತಿ ಸೇತುವೆಯಿಂದ ಬಲಭಾಗದ ರೈಲು ಹಳಿಯು ಮಂಗಳೂರು ಜಂಕ್ಷನ್‌ವರೆಗೆ ದ್ವಿಗುಣಗೊಂಡಿದೆ. ಆದರೆ ನೇತ್ರಾವತಿ ಸೇತುವೆಯಿಂದ ಮಂಗಳೂರು ಸೆಂಟ್ರಲ್‌ ಹಾಗೂ ಸೆಂಟ್ರಲ್‌ನಿಂದ– ಮಂಗಳೂರು ಜಂಕ್ಷನ್‌ ಮಧ್ಯೆ ರೈಲು ಹಳಿ ದ್ವಿಗುಣ ಆಗಿರಲಿಲ್ಲ.

ರೈಲು ಹಳಿ ದ್ವಿಗುಣಗೊಂಡಿದ್ದರಿಂದ ರೈಲುಗಳ ಸಂಖ್ಯೆ ಅಧಿಕವಾಗಲಿದ್ದು, ಮಂಗಳೂರು ಸೆಂಟ್ರಲ್‌ ನಿಲ್ದಾಣದಲ್ಲಿ ಇನ್ನೆರಡು ಫ್ಲಾಟ್‌ಫಾರಂ ಕೂಡ ನಿರ್ಮಾಣ ಆಗುತ್ತಿವೆ. ಜೊತೆಗೆ ಸೆಂಟ್ರಲ್‌ ನಿಲ್ದಾಣದಲ್ಲಿರುವ ಪಿಟ್‌ಲೈನ್‌ ಸಾಮರ್ಥ್ಯವನ್ನೂ ಹೆಚ್ಚಿಸಲಾಗುತ್ತಿದೆ.

ಎ.ಕೆ. ರೈ ನೇತೃತ್ವದ ತಂಡ ಮಂಗಳವಾರ ನೇತ್ರಾವತಿ ಸೇತುವೆ–ಮಂಗಳೂರು ಸೆಂಟ್ರಲ್‌ ನಿಲ್ದಾಣಗಳ ನಡುವಿನ ದ್ವಿಪಥ ಮಾರ್ಗದ ಸುರಕ್ಷತೆಯನ್ನು ಪರಿಶೀಲಿಸಿತು.

1.663 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಆಧುನಿಕ ಕ್ರಾಸಿಂಗ್, ಸಿಗ್ನಲ್‌ ವ್ಯವಸ್ಥೆ, ಸೇತುವೆಗಳು, ಲೆವೆಲ್‌ ಕ್ರಾಸಿಂಗ್‌ಗಳು, ರೈಲ್ವೆ ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ಇದರ ಜೊತೆಗೆ ಮಂಗಳೂರು ಸೆಂಟ್ರಲ್‌ ನಿಲ್ದಾಣದಲ್ಲಿ ರೈಲು ನಿರ್ವಹಣಾ ವ್ಯವಸ್ಥೆಯನ್ನೂ ಮೇಲ್ದರ್ಜೆಗೆ ಏರಿಸಲಾಗಿದೆ. ರಿಲೆ ಇಂಟರಲಾಕಿಂಗ್‌ ಬದಲು ಎಲೆಕ್ಟ್ರಾನಿಕ್‌ ಇಂಟರಲಾಕಿಂಗ್‌ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.

ರೈಲು ಮಾರ್ಗ, ಕ್ರಾಸಿಂಗ್‌ಗಳು, ಸಿಗ್ನಲ್‌ ವ್ಯವಸ್ಥೆಯನ್ನು ಪರಿಶೀಲಿಸಿದ ತಂಡ, ಈ ಬಗ್ಗೆ ಸಮಗ್ರವಾದ ವರದಿಯನ್ನು ರೈಲ್ವೆ ಇಲಾಖೆಗೆ ಸಲ್ಲಿಸಲಿದೆ. ರೈಲ್ವೆ ಮಂಡಳಿಯ ಒಪ್ಪಿಗೆಯ ನಂತರ ದ್ವಿಪಥ ಮಾರ್ಗ ರೈಲು ಸಂಚಾರಕ್ಕೆ ಮುಕ್ತವಾಗಲಿದೆ.

ರೈಲ್ವೆ ಸುರಕ್ಷತಾ ಉಪ ಆಯುಕ್ತ ಇ. ಶ್ರೀನಿವಾಸ, ದಕ್ಷಿಣ ರೈಲ್ವೆ ಮುಖ್ಯ ಆಡಳಿತಾಧಿಕಾರಿ ಪ್ರಫುಲ್‌ ವರ್ಮಾ, ಪಾಲ್ಘಾಟ್‌ ವಿಭಾಗದ ಮಹಾಪ್ರಬಂಧಕ ತ್ರಿಲೋಕ ಕೊಠಾರಿ, ಮುಖ್ಯ ಎಂಜಿನಿಯರ್ ಶಾಜಿ ಝಕರಿಯ, ಉಪ ಮುಖ್ಯ ಎಂಜಿನಿಯರ್ ಎಸ್. ವಿನೋದಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT