ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಸ್ಟಾಡೋಮ್‌: ಪ್ರಕೃತಿಯ ರಸದೌತಣ

ಮೂರು ರೈಲುಗಳಿಗೆ ವಿಶೇಷ ಬೋಗಿ ಅಳವಡಿಕೆ
Last Updated 10 ಜುಲೈ 2021, 4:19 IST
ಅಕ್ಷರ ಗಾತ್ರ

ಮಂಗಳೂರು: ಹಚ್ಚ ಹಸಿರಿನ ಬೆಟ್ಟ–ಗುಡ್ಡ, ವಿಶಾಲವಾದ ಕಡಲತೀರದಿಂದಾಗಿ ಕಂಗೊಳಿಸುವ ಕರಾವಳಿ ಹಾಗೂ ಪಶ್ಚಿಮ ಘಟ್ಟದ ಸೌಂದರ್ಯವನ್ನು ಆಸ್ವಾದಿಸಲು ಇದೀಗ ರೈಲು ಪ್ರಯಾಣಿಕರು ತುದಿಗಾಲಲ್ಲಿ ನಿಂತಿದ್ದಾರೆ. ಪಶ್ಚಿಮಘಟ್ಟ ಮತ್ತು ಕರಾವಳಿ ಭಾಗದಲ್ಲಿ ಸಂಚರಿಸುವ ಮೂರು ರೈಲುಗಳ ದ್ವಿತೀಯ ದರ್ಜೆಯ ಒಂದು ಸಾಮಾನ್ಯ ಬೋಗಿಯನ್ನು ತೆಗೆದು ತಲಾ ಎರಡು ವಿಸ್ಟಾಡೋಮ್‌ ಕೋಚ್‌ಗಳನ್ನು ಜೋಡಿಸಲಾಗುತ್ತಿದೆ.

ಮಂಗಳೂರು–ಬೆಂಗಳೂರು ಮಧ್ಯೆ ಸುಬ್ರಹ್ಮಣ್ಯದಿಂದ ಸಕಲೇಶಪುರದವರೆಗೆ ಹಾದು ಹೋಗುವ 55 ಕಿ.ಮೀ. ರೈಲು ಮಾರ್ಗ ಪ್ರಯಾಣಿಕರ ಕಣ್ಣಿಗೆ ಹಬ್ಬ. ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ಗಾಜಿನ ಚಾವಣಿ, ಕಿಟಕಿಗಳಿರುವ ವಿಸ್ಟಾಡೋಮ್‌ ಬೋಗಿ ಅಳವಡಿಸುವಂತೆ ಹಲವಾರು ಜನರು ಮಂದಿ ಮನವಿ ಮಾಡುತ್ತಲೇ ಬಂದಿದ್ದರು. ಎರಡು ಬಾರಿ ಮುಂದೂಡಿದರೂ, ಇದೀಗ ಅದು ಕಾರ್ಯರೂಪಕ್ಕೆ ಬರುತ್ತಿದ್ದು, ರೈಲು ಸಂಚಾರಕ್ಕೆ ಕ್ಷಣಗಣನೆ ಆರಂಭವಾಗಿದೆ.

ಪಶ್ಚಿಮ ಘಟ್ಟವನ್ನು ಸೀಳಿಕೊಂಡು ಹೋಗುವ ಈ ರೈಲುಮಾರ್ಗದಲ್ಲಿ ಸಂಚರಿಸುವವರಿಗೆ ಶಿರಾಡಿ ಘಾಟಿಯ ಸೌಂದರ್ಯವನ್ನು ರೈಲಿನೊಳಗೆ ಕುಳಿತು ಸವಿಯುವ ಭಾಗ್ಯ ಸಿಗಲಿದೆ. ಮಾರ್ಗ ಮಧ್ಯದಲ್ಲಿ ಸಿಗುವ ಅರಣ್ಯ, ಜಲಪಾತ, ಸುರಂಗ, ಸೇತುವೆಗಳ ರಮಣೀಯ ದೃಶ್ಯವನ್ನು ಪ್ರಯಾಣಿಕರು ಆಸ್ವಾದಿಸಬಹುದು. ಸದ್ಯ ಮಳೆಗಾಲವೂ ಇರುವುದರಿಂದ ವಿಸ್ಟಾಡೋಮ್‌ ಪ್ರಯಾಣ ಮತ್ತಷ್ಟು ಆಹ್ಲಾದಕರವಾಗಲಿದೆ ಎನ್ನುವುದು ಜನರ ನಿರೀಕ್ಷೆ.

ಶಿರಾಡಿ ಘಾಟಿಯ ಸೌಂದರ್ಯ ಸವಿಯಲು ಬೆಂಗಳೂರು-ಮಂಗಳೂರು ರೈಲಿಗೆ ಗಾಜಿನ ಚಾವಣಿ, 180 ಡಿಗ್ರಿ ತಿರುಗುವ 44 ಆಸನ, ಚಾರ್ಜರ್, ಜಿಪಿಎಸ್ ವ್ಯವಸ್ಥೆ, ಫ್ರಿಡ್ಜ್‌, ಮೈಕ್ರೋವೆವ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ಈ ಬೋಗಿಗಳು ಹೊಂದಿವೆ. ಬೋಗಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಅಗ್ನಿ ಸುರಕ್ಷತಾ ಸಾಧನ, ಎಲ್‌ಇಡಿ ಪರದೆ, ಲಗೇಜ್ ಬಾಕ್ಸ್, ಪ್ರತಿ ಸೀಟ್‌ಗೂ ಮೊಬೈಲ್‌ ಚಾರ್ಜರ್‌ ವ್ಯವಸ್ಥೆ, ಸೀಟ್‌ಗಳಿಗೆ ಮಡಚುವ ಟೇಬಲ್‌ ವ್ಯವಸ್ಥೆಯನ್ನೂ ಮಾಡಲಾಗಿದೆ. ಅಂಗವಿಕಲರಿಗೆ ಬ್ರೈಲ್‌ ಸಿಗ್ನಲ್‌ ವ್ಯವಸ್ಥೆಯೂ ಇದೆ.

ಯಾವ ರೈಲುಗಳಲ್ಲಿ ವ್ಯವಸ್ಥೆ?: ವಾರಕ್ಕೆ 3 ಬಾರಿ ಚಲಿಸುವ ಯಶವಂತಪುರ- ಕಾರವಾರ ವಿಶೇಷ ರೈಲು (ರೈ.ಸಂ. 06211 /06212), ವಾರಕ್ಕೆ 3 ಬಾರಿ ಚಲಿಸುವ ಯಶವಂತಪುರ- ಮಂಗಳೂರು ಜಂಕ್ಷನ್‌ ವಿಶೇಷ ರೈಲು (ರೈ.ಸಂ. 06575/06576), ಯಶವಂತಪುರ -ಮಂಗಳೂರು (ರೈ.ಸಂ. 06539) ಹಾಗೂ ಮಂಗಳೂರು ಜಂಕ್ಷನ್‌-ಯಶವಂತಪುರ ಎಕ್ಸ್‌ಪ್ರೆಸ್‌ನಲ್ಲಿ (ರೈ.ಸಂ. 06540 ) ವಿಸ್ಟಾಡೋಮ್‌ ಬೋಗಿ ಸೇರ್ಪಡೆಯಾಗಲಿವೆ.

ಭಾನುವಾರದಿಂದ ಆರಂಭ

ಮಂಗಳೂರು ಜಂಕ್ಷನ್‌–ಯಶವಂತಪುರ ರೈಲಿಗೆ ಇದೇ 11 ರಿಂದ ವಿಸ್ಟಾಡೋಮ್‌ ಬೋಗಿ ಅಳವಡಿಸಲಾಗುತ್ತಿದ್ದು, ಈಗಾಗಲೇ ಬಹುತೇಕ ಸೀಟ್‌ಗಳನ್ನು ಮುಂಗಡವಾಗಿ ಕಾದಿರಿಸಲಾಗಿದೆ. ದಕ್ಷಿಣ ಭಾರತದಲ್ಲಿಯೇ ಪ್ರಥಮ ಬಾರಿಗೆ ಈ ಮಾರ್ಗದಲ್ಲಿ ವಿಸ್ಟಾಡೋಮ್‌ ಬೋಗಿ ಅಳವಡಿಸಲಾಗಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

ಅಂದು ಬೆಳಿಗ್ಗೆ 9.15ಕ್ಕೆ ಮಂಗಳೂರು ಜಂಕ್ಷನ್‌ ನಿಲ್ದಾಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‌ಕುಮಾರ್‌ ಕಟೀಲ್‌, ಮೇಯರ್‌ ಪ್ರೇಮಾನಂದ ಶೆಟ್ಟಿ, ಶಾಸಕ ಡಿ.ವೇದವ್ಯಾಸ್‌ ಕಾಮತ್‌ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT