ಭಾನುವಾರ, ಜುಲೈ 25, 2021
22 °C
ಮೂರು ದಿನಗಳ ಕಾಲ ಭಾರಿ ಮಳೆಯ ಮುನ್ಸೂಚನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9 ಮನೆಗಳಿಗೆ ಭಾಗಶಃ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸೋಮವಾರವೂ ಮಳೆ ಬಿರುಸಾಗಿತ್ತು. ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದಿದೆ. ಮಳೆಯಿಂದಾಗಿ 24 ಗಂಟೆಯಲ್ಲಿ ಜಿಲ್ಲೆಯ 9 ಮನೆಗಳು ಭಾಗಶಃ ಹಾನಿಗೀಡಾಗಿವೆ. ಇನ್ನೂ ಮೂರು ದಿನಗಳ ಕಾಲ ಭಾರಿ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಮಂಗಳೂರು ಹಾಗೂ ಮೂಡುಬಿದಿರೆ ತಾಲ್ಲೂಕುಗಳಲ್ಲಿ ತಲಾ 2 ಹಾಗೂ ಬಂಟ್ವಾಳ ತಾಲ್ಲೂಕಿನಲ್ಲಿ ಒಂದು ಮನೆಗೆ ಭಾಗಶಃ ಹಾನಿಯಾಗಿದೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಗಾಳಿಯೊಂದಿಗೆ ಭಾರಿ ಮಳೆ ಸುರಿದಿದ್ದು, ಮಧ್ಯಾಹ್ನದ ಬಳಿಕ ಸ್ವಲ್ಪ ಬಿಡುವು ನೀಡಿತ್ತು.

ಮಂಗಳೂರು ನಗರದಲ್ಲೂ ಗಾಳಿಯೊಂದಿಗೆ ಮಳೆ ಸುರಿದಿದೆ. ನಗರದ ಕದ್ರಿ ಶಿವಭಾಗ್‌ನಲ್ಲಿ ಬೆಳಿಗ್ಗೆ ದೊಡ್ಡ ಮರವೊಂದು ನೆಲಕ್ಕೆ ಉರುಳಿತ್ತು. ಲಾಲ್‌ಬಾಗ್‌ನ ಅಪಾರ್ಟ್‌ಮೆಂಟ್‌ ವೊಂದರ ಕಾಂಪೌಂಡ್‌ ಮೇಲೆ ಮರ ಬಿದ್ದಿತ್ತು. ಅಗ್ನಿಶಾಮಕ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿದರು.

ಉಳ್ಳಾಲ, ಸೋಮೇಶ್ವರ ಮತ್ತು ಜಿಲ್ಲೆಯ ಕಡಲ ತೀರದ ಪ್ರದೇಶಗಳ ಲ್ಲಿಯೂ ಸಮುದ್ರ ಪ್ರಕ್ಷುಬ್ಧವಾಗಿದೆ. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಜಾಗರೂಕರಾಗಿರಲು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಕಡಲ ತೀರಗಳಿಗೆ ಭೇಟಿ ನೀಡುವವರು ನೀರಿನಲ್ಲಿ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮೀನುಗಾರರಿಗೂ ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ.

ಜಲಾಶಯಗಳಿಂದ ನೀರು ಹೊರಕ್ಕೆ: ಶಂಭೂರಿನ ಎಎಂಆರ್‌ ಜಲಾಶಯದಿಂದ 20,187 ಕ್ಯೂಸೆಕ್‌, ತುಂಬೆ ಕಿಂಡಿ ಅಣೆಕಟ್ಟೆಯಿಂದ 20,187 ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ.

ಬಂಟ್ವಾಳದಲ್ಲಿ ನೇತ್ರಾವತಿ ನದಿಯ ಗರಿಷ್ಠ ಮಟ್ಟ 8.5 ಮೀಟರ್‌ ಇದ್ದು, ಸೋಮವಾರ 3.5 ಮೀಟರ್‌ ನೀರು ಇತ್ತು. ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯ ಗರಿಷ್ಠ ಮಟ್ಟ 31.5 ಮೀಟರ್‌ ಇದ್ದು, ಸೋಮವಾರ 24.6 ಮೀಟರ್‌ ಎತ್ತರಕ್ಕೆ ನೀರು ಹರಿಯಿತು. ಗುಂಡ್ಯಾ ನದಿಯಲ್ಲಿ ಗರಿಷ್ಠ ಮಟ್ಟ 5 ಮೀಟರ್ ಇದ್ದು, ಸೋಮವಾರ 3.5 ಮೀಟರ್ ನೀರಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು