ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳಾಲ: ಭಾರೀ ಮಳೆಗೆ ವ್ಯಾಪಕ ಹಾನಿ 

Last Updated 15 ಜೂನ್ 2021, 2:45 IST
ಅಕ್ಷರ ಗಾತ್ರ

ಉಳ್ಳಾಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸೋಮೇಶ್ವರ ಮತ್ತು ಉಳ್ಳಾಲದಲ್ಲಿ ಸಮುದ್ರ ಅಬ್ಬರ ಹೆಚ್ಚಿದ್ದು, ಗಾಳಿಮಳೆಗೆ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಳ್ಳಾಲ ಹೋಬಳಿ ವ್ಯಾಪ್ತಿಯಲ್ಲಿ ಐದು ಮನೆಗಳಿಗೆ ಹಾನಿಯಾಗಿದೆ.

ಸೋಮೇಶ್ವರದಲ್ಲಿ ಸಮುದ್ರದ ಅಬ್ಬರ ಹೆಚ್ಚಿದೆ. ಅಲೆಗಳು ದಡಕ್ಕಪ್ಪಳಿಸುತ್ತಿದ್ದು ಯಾವುದೇ ಹಾನಿ ವರದಿಯಾಗಿಲ್ಲ, ಉಳ್ಳಾಲದಲ್ಲಿಯೂ ಸಮುದ್ರದ ಅಬ್ಬರ ಹೆಚ್ಚಾಗಿದ್ದು , ಯಾವುದೇ ಹಾನಿಯಾಗಿಲ್ಲ. ಸಮುದ್ರ ತೀರದಲ್ಲಿ ಗೃಹರಕ್ಷಕ ಸಿಬ್ಬಂದಿಯನ್ನು ನಿಯುಕ್ತಿ ಮಾಡಿದ್ದು, ಪ್ರಾಕೃತಿಕ ವಿಕೋಪ ಎದುರಿಸಲು ಸೋಮೇಶ್ವರ ಪುರಸಭೆ ಮತ್ತು ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಉಳ್ಳಾಲ ನಗರಸಭಾ ವ್ಯಾಪ್ತಿಯ ಸುಂದರಿಭಾಗ್ ನಿವಾಸಿ ಲೀಲಾವತಿ ಅವರ ಮನೆ ಗಾಳಿಮಳೆಗೆ ಹಾನಿಯಾಗಿದ್ದು, ಕೃಷ್ಣನಗರದಲ್ಲಿ ಜಾನಕಿ ಅವರ ಮನೆಗೆ ಹಾನಿಯಾಗಿದೆ. ನಗರಸಭಾ ವ್ಯಾಪ್ತಿಯ ಪೆರ್ಮನ್ನೂರು ಗ್ರಾಮದ ವ್ಯಾಪ್ತಿಯ ಕೆರೆಬೈಲು ಗುಡ್ಡೆ ಬಳಿ ಕ್ರಿಸ್ತಿನಾ ಡಿಸೋಜಾ ಅವರ ಮನೆಯ ಚಾವಣಿಗೆ ತೆಂಗಿನ ಮರದ ಗರಿ ಬಿದ್ದು ಹಾನಿಯಾಗಿದೆ. ಅಂಬ್ಲಮೊಗರು ಗ್ರಾಮದ ಎಲಿಯಾರ್‍ಪದವು ನಿವಾಸಿ ಇಸ್ಮಾಯಿಲ್ ಅವರ ಮನೆಗೆ ಹಾನಿಯಾಗಿದೆ. ಕಿನ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನಕಮುಗೇರು ಬಳಿ ಮನೆಯೊಂದಕ್ಕೆ ಹಾನಿಯಾಗಿದೆ.

ಕಿನ್ಯ ಪ್ರಗತಿಪರ ಕೃಷಿಕ ಮಹಮ್ಮದ್ ಬಶೀರ್ ಎಂಬುವರ ತೋಟಕ್ಕೆ ಅಪಾರ ಹಾನಿಯಾಗಿದೆ. 60 ಅಡಿಕೆ ಮರಗಳು ಸೇರಿದಂತೆ 30ಕ್ಕೂ ಅಧಿಕ ಬಾಳೆಗಿಡಗಳು ನೆಲಸಮವಾಗಿದೆ. ₹ 1 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.

ಸೋಮೇಶ್ವರ ಪುರಸಭಾ ವ್ಯಾಪ್ತಿಯ ಅಡ್ಕ ಪ್ರದೇಶದಲ್ಲಿ ರಸ್ತೆಗೆ ಉರುಳಿ ಬಿದ್ದ ಮರ ಬಿದ್ದು ಒಂದು ಗಂಟೆಯ ಕಾಲ ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು. ಘಟನೆಯಿಂದಾಗಿ ಏಳು ವಿದ್ಯುತ್ ಕಂಬಗಳು ಮುರಿದುಬಿದ್ದು, ಅಪಾರ ನಷ್ಟ ಉಂಟಾಗಿದೆ.

ಸ್ಥಳಕ್ಕೆ ಅಗ್ನಿ ಶಾಮಕ ದಳ , ಮೆಸ್ಕಾಂ ಸಿಬ್ಬಂದಿ ಹಾಗೂ ಸೋಮೇಶ್ವರ ಪುರಸಭಾ ಪೌರಕಾರ್ಮಿಕರು ಮರ ತೆರವುಗೊಳಿಸುವಲ್ಲಿ ಸಹಕರಿಸಿದರು. ಪೌರಾಯುಕ್ತೆ ವಾಣಿ ಆಳ್ವ ಮಾರ್ಗದರ್ಶನ ನೀಡಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ ಪೈಪ್‌ಲೈನ್ ಕಾಮಗಾರಿಗೆ ಅಲ್ಲಲ್ಲಿ ಅಗೆತ ನಡೆಸಿರುವುದರಿಂದ ಮಣ್ಣು ದಾಸ್ತಾನುಗೊಂಡು ರಸ್ತೆಯಲ್ಲೇ ಮಳೆ ನೀರು ಹರಿದು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಈ ಕುರಿತು ಗುತ್ತಿಗೆದಾರರು ಹಾಗೂ ಅಧಿಕಾರಿಗಳು ತಕ್ಷಣ ಕ್ರಮಕೈಗೊಳ್ಳುವಂತೆ ಆಗ್ರಹ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT