ಮಂಗಳೂರು: ತುಳುನಾಡಿನ ಗುಳಿಗ ದೈವದ ಬಗ್ಗೆ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಕಾರ್ಯಕ್ರಮವೊಂದರಲ್ಲಿ ಆಡಿರುವ ಮಾತಿಗೆ ತುಳುವರಿಂದ ವಿರೋಧ ವ್ಯಕ್ತವಾಗಿದೆ.
ಆರಗ ಜ್ಞಾನೇಂದ್ರ ಅವರು ಆಡಿರುವ ಮಾತುಗಳ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಜ್ಞಾನೇಂದ್ರ ಅವರು ವಿಜಯಕುಮಾರ್ ಕೊಡಿಯಾಲ್‌ಬೈಲ್ ನಿರ್ದೇಶನದ 'ಶಿವಧೂತೆ ಗುಳಿಗೆ' ನಾಟಕದ ಬಗ್ಗೆ ಪ್ರಸ್ತಾಪಿಸಿ, ‘ಎಂಥದೋ ಗುಳಿಗೆ... ಗುಳಿಗೆ... ಎಂದು ಭಿತ್ತಿಪತ್ರ ಅಂಟಿಸಿದ್ದಾರೆ. ನಿನ್ನೆ ರಾತ್ರಿ ಎಂತದ್ದೋ ನಾಟಕವಂತೆ. ಇವರು ಯಾವ ಗುಳಿಗೆ ಕೊಡ್ತಾರೋ ಗೊತ್ತಿಲ್ಲ. ಬೇಕಾದ್ರೆ ಜಾಪಾಳ ಮಾತ್ರೆ ಕೊಟ್ಟರೂ ಕೊಡಬಹುದು, ಹೇಳಲಿಕ್ಕಾಗುವುದಿಲ್ಲ. ಇವರು ಹೊಸ ಹೊಸ ನಾಟಕಗಳನ್ನು ಪ್ರಾರಂಭ ಮಾಡಿದ್ದಾರೆ’ ಎಂದು ಹೇಳಿರುವುದು ವಿಡಿಯೊದಲ್ಲಿದೆ.
‘ದೈವಾರಾಧನೆ ಎಂದರೆ ತುಳುನಾಡಿನ ಧಾರ್ಮಿಕತೆ ಮತ್ತು ನಂಬಿಕೆ. ಇದು ಕೇವಲ ಆಚರಣೆಯಲ್ಲ; ತುಳುನಾಡಿನ ಬದುಕಿನ ಸಂಸ್ಕೃತಿಯೂ ಹೌದು ಎನ್ನುವುದನ್ನು ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರ ‘ಶಿವಧೂತೆ ಗುಳಿಗೆ’ ನಾಟಕವು ಅದ್ಭುತ ರಂಗಪ್ರಯೋಗದ ಮೂಲಕ ತೋರಿಸಿಕೊಟ್ಟಿದೆ. ಈ ನಾಟಕದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವಹೇಳನ ಮಾಡಿರುವುದು ದೈವಾರಾಧನೆ ಮಾತ್ರವಲ್ಲ ಕೋಟ್ಯಂತರ ಮಂದಿ ದೈವ ಭಕ್ತರಿಗೆ ಮಾಡಿದ ಅಪಮಾನ’ ಎಂದು ಗೋಕರ್ಣನಾಥ ಕ್ಷೇತ್ರದ ಖಜಾಂಚಿ ಪದ್ಮರಾಜ್ ಆರ್. ಟೀಕಿಸಿದ್ದಾರೆ.
‘ತೀರ್ಥಹಳ್ಳಿಯಲ್ಲಿ ಏರ್ಪಡಿಸಲಾಗಿದ್ದ ‘ಶಿವಧೂತ ಗುಳಿಗೆ’ ನಾಟಕವನ್ನು ಸುಮಾರು 16 ಸಾವಿರ ಪ್ರೇಕ್ಷಕರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದೇ ಊರಲ್ಲಿ ಗೃಹಸಚಿವರು ಗುಳಿಗ ದೈವವನ್ನು ಜಾಪಾಳ ಮಾತ್ರೆಗೆ ಹೋಲಿಕೆ ಮಾಡಿರುವುದು ಎಷ್ಟು ಸರಿ. ಕೂಡಲೇ ಗೃಹಸಚಿವರು ತುಳುವರೂ ಸೇರಿದಂತೆ ದೈವ ಭಕ್ತರಲ್ಲಿ ಕ್ಷಮೆಯಾಚಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
‘ತುಳುನಾಡಿನ ದೈವಾರಾಧನೆ ಬಗ್ಗೆ ಆರಗ ಜ್ಞಾನೇಂದ್ರ ಅವರಿಗೇನು ಗೊತ್ತಿದೆ. ರಾಜ್ಯದ ಗೃಹ ಸಚಿವರಾಗಿ ದೈವಾರಾಧನೆ ಬಗ್ಗೆ ವಿವೇಚನೆರಹಿತವಾಗಿ ಮಾತನಾಡುವುದನ್ನು ಬಿಡಬೇಕು. ಇಂತಹ ಅರೆಜ್ಞಾನದ ಮಾತುಗಳನ್ನು ತುಳುವರು ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.