ಸೋಮವಾರ, ಆಗಸ್ಟ್ 15, 2022
28 °C
ಅಶಕ್ತ ಕಲಾವಿದರಿಗೆ ನೆರವು

‘ರಾಜ್ ಸೌಂಡ್ಸ್ ಆಂಡ್ ಲೈಟ್ಸ್’ ತುಳು ಸಿನಿಮಾಕ್ಕೆ 50ರ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ರಾಹುಲ್ ಅಮೀನ್ ನಿರ್ದೇಶನದಲ್ಲಿ ತಯಾರಾದ ‘ರಾಜ್ ಸೌಂಡ್ಸ್ ಆಂಡ್ ಲೈಟ್ಸ್’ ತುಳು ಸಿನಿಮಾ ಕರಾವಳಿಯ 14 ಚಿತ್ರಮಂದಿರಗಳಲ್ಲಿ ಅಪೂತಪೂರ್ವ ಪ್ರದರ್ಶನ ಕಾಣುತ್ತಿದ್ದು, ಇದೇ 8ರಂದು ಐವತ್ತು ದಿನಗಳ ಸಂಭ್ರಮವನ್ನು ಆಚರಿಸಲಿದೆ ಎಂದು ಚಿತ್ರದ ನಿರ್ಮಾಪಕ ಆನಂದ ಎನ್. ಕುಂಪಲ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಸಿನಿಮಾವನ್ನು ದಾಖಲೆ ಸಂಖ್ಯೆಯಲ್ಲಿ ತುಳುವರು ವೀಕ್ಷಿಸಿ, ಬೆನ್ನು ತಟ್ಟಿದ್ದಾರೆ. ಮುಂದಿನ ಶುಕ್ರವಾರದಿಂದ ಸೌದಿ ಅರೇಬಿಯಾದ ಬೇರೆ ಬೇರೆ ಸ್ಥಳಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ.‌ ಮುಂಬೈನಲ್ಲಿ ಮತ್ತೆ ಪ್ರದರ್ಶನಕ್ಕೆ ಬೇಡಿಕೆ ಬಂದಿದೆ ಎಂದು ಮಾಹಿತಿ ನೀಡಿದರು.

ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ತುಳುವಿನಲ್ಲಿ ತಯಾರಾದ ದೊಡ್ಡ ಬಜೆಟ್ ಸಿನಿಮಾ ಆಗಿದೆ. ಸಿನಿಮಾಕ್ಕಾಗಿ ₹ 1.5 ಕೋಟಿ ಬಂಡವಾಳ ಹಾಕಲಾಗಿತ್ತು. ಈಗಾಗಲೇ ಬಂಡವಾಳ ವಾಪಸ್‌ ಬಂದಿದೆ. ಸಿನಿಮಾದ ಯಶಸ್ಸಿಗೆ ಎಲ್ಲರೂ ಒಗ್ಗಟ್ಟಿನಿಂದ ದುಡಿದಿದ್ದಾರೆ. ವೈಭವ್ ಫ್ಲಿಕ್ಸ್ ಅಡಿಯಲ್ಲಿ ಮ್ಯಾಂಗೋ ಪಿಕಲ್ ಬ್ಯಾನರ್‌ನಲ್ಲಿ ಮತ್ತೊಂದು ಹೊಸ ಸಿನಿಮಾ ತಯಾರಾಗಲಿದೆ ಎಂದು ಅವರು ಹೇಳಿದರು.

ಅಶಕ್ತ ಕಲಾವಿದರಿಗೆ ನೆರವು: ‘ಇದೇ 8ರಂದು ಸಿನಿಮಾ 50 ದಿನ ಪೂರೈಸುವ ಸಂದರ್ಭದಲ್ಲಿ ಆ ದಿನದ ಪ್ರದರ್ಶನದಿಂದ ಬರುವ ಎಲ್ಲ ಆದಾಯವನ್ನು ಅಸಕ್ತ ಕಲಾವಿದರಿಗೆ ವಿತರಣೆ ಮಾಡಲಾಗುವುದು. ಹೀಗಾಗಿ, ಸಿನಿಮಾಸಕ್ತರು ಅರ್ಧ ಶತಕದ ಸಂಭ್ರಮದ ನೆಪದಲ್ಲಿ ಚಿತ್ರ ವೀಕ್ಷಿಸಿ ಬಡ ಕಲಾವಿದರಿಗೆ ನೆರವಾಗಬೇಕು’ ಎಂದು ನಾಯಕ ನಟ ವಿನೀತ್‌ ಕುಮಾರ್ ಹೇಳಿದರು.

ಕರಾವಳಿಯಲ್ಲಿ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಎಲ್ಲಾ ಮಾಲ್, ಸೆಂಟರ್‌ಗಳಲ್ಲೂ ತುಂಬಿದ ಪ್ರದರ್ಶನ ಕಾಣುತ್ತಿದೆ. ಮಂಗಳೂರಿನಲ್ಲಿ ಸಿಂಗಲ್ ಥಿಯೇಟರ್ ಸಮಸ್ಯೆ ಇದ್ದರೂ ರೂಪವಾಣಿ ಚಿತ್ರಮಂದಿರದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಉಡುಪಿಯ ಕಲ್ಪನಾ, ಮೂಡುಬಿದಿರೆಯ ಅಮರಶ್ರೀ, ಬೆಳ್ತಂಗಡಿಯ  ಭಾರತ್, ಕಾರ್ಕಳದ ರಾಧಿಕಾ, ಪ್ಲಾನೆಟ್, ಮಣಿಪಾಲದ ಐನಾಕ್ಸ್, ಪುತ್ತೂರಿನ ಅರುಣಾ, ಸುರತ್ಕಲ್‌ನ ನಟರಾಜ್, ಸಿನಿಗ್ಯಾಲಕ್ಸಿ, ಮೂಡಬಿದ್ರೆಯಲ್ಲಿ ಅಮರಶ್ರೀ, ಮುಳ್ಳೇರಿಯಾದ ಕಾವೇರಿ ಮೊದಲಾದ ಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಎಂದು ಹೇಳಿದರು.

ಸಿನಿಮಾದ ಚಿತ್ರಕಥೆಯನ್ನು ರಾಹುಲ್ ಮತ್ತು ವಿನೀತ್ ರಚಿಸಿದ್ದಾರೆ. ಸಂಭಾಷಣೆಯನ್ನು ‘ಗಿರಿಗಿಟ್’ ಚಿತ್ರ ಖ್ಯಾತಿಯ ಪ್ರಸನ್ನ ಶೆಟ್ಪಿ ಬೈಲೂರು ಬರೆದಿದ್ದಾರೆ. ‘ಪಡ್ಡಾಯಿ‘ ಚಿತ್ರ ಖ್ಯಾತಿಯ ಕ್ಯಾಮರಾಮೆನ್ ವಿಷ್ಣುಪ್ರಸಾದ್  ಚಿತ್ರೀಕರಿಸಿದ್ದಾರೆ. ಸಂಗೀತ ನಿರ್ದೇಶಕರಾಗಿ ಸೃಜನ್ ಕುಮಾರ್ ತೋನ್ಸೆ, ನವೀನ್ ಶೆಟ್ಟಿ ನೃತ್ಯ ಸಂಯೋಜನೆ ಮಾಡಿದ್ದಾರೆ. ನಾಯಕರಾಗಿ ವಿನೀತ್ ಕುಮಾರ್, ನಾಯಕಿಯಾಗಿ ಯಶಾ ಶಿವಕುಮಾರ್, ಕರಿಷ್ಮಾ ಅಮೀನ್ ಅಭಿನಯಿಸಿದ್ದಾರೆ. ತಾರಾಗಣದಲ್ಲಿ ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಸತೀಶ್ ಬಂದಲೆ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ, ಮರ್ವಿನ್ ಉಮೇಶ್ ಮಿಜಾರ್, ರವಿ ರಾಮಕುಂಜ, ಚೈತ್ರ ಶೆಟ್ಟಿ (ಚಿಂಪು) ಹಾಗೂ ಇನ್ನಿತರ ಕಲಾವಿದರು ಕಾಣಿಸಿಕೊಂಡಿದ್ದಾರೆ. ಬಿ.ಅಶೋಕ್ ಕುಮಾರ್, ಸುಹಾನ್ ಪ್ರಸಾದ್ ಪವನ್ ಕುಮಾರ್, ನಿತಿನ್ ರಾಜ್ ಶೆಟ್ಟಿ, ಅರ್ಪಿತ್ ಅಡ್ಯಾರ್, ಅಜಯ್ ಬಾಳಿಗ, ಸೀತಾರಾಮ ಶೆಟ್ಟಿ ಸಹ ನಿರ್ಮಾಪಕರಾಗಿದ್ದಾರೆ.

ಗೋಷ್ಠಿಯಲ್ಲಿ ಸಹ ನಿರ್ಮಾಪಕರಾದ ಬಿ.ಅಶೋಕ್ ಕುಮಾರ್, ಸುಹಾನ್ ಪ್ರಸಾದ್, ನಿತಿನ್ ರಾಜ್ ಶೆಟ್ಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು