ಭಾನುವಾರ, ಮೇ 9, 2021
25 °C
‘ಆಶಾಕಿರಣ’ ಯೋಜನೆಯಡಿ ಕೌಶಲ ಅಭಿವೃದ್ಧಿ ತರಬೇತಿಗೆ ಜನರ ಆಸಕ್ತಿ

ಐ.ಟಿ., ಟ್ಯಾಲಿಯತ್ತ ರೌಡಿ ಕುಟುಂಬಗಳು!

ವಿ.ಎಸ್‌.ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಮಂಗಳೂರು: ರೌಡಿಗಳಿಗೆ ನಿಶ್ಚಿತ ಆದಾಯದ ಮೂಲವನ್ನು ಕಲ್ಪಿಸಿ ಅಪರಾಧ ಜಗತ್ತಿನಿಂದ ದೂರ ಕರೆತರುವ ಮಹತ್ವಾಕಾಂಕ್ಷೆಯಿಂದ ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ನ ಆರಂಭಿಸುತ್ತಿರುವ ‘ಆಶಾಕಿರಣ’ ಯೋಜನೆಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಟ್ಯಾಲಿ ತರಬೇತಿಗೆ ಹೆಚ್ಚು ಮಂದಿ ಆಸಕ್ತಿ ತೋರುತ್ತಿದ್ದಾರೆ.

ಆರ್ಥಿಕ ಸಂಕಷ್ಟದ ಕಾರಣಕ್ಕಾಗಿಯೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ, ಅದನ್ನೇ ಮುಂದುವರಿಸಿಕೊಂಡು ಹೋಗುವವರನ್ನು ಹೊಸ ದಿಕ್ಕಿಗೆ ಕರೆತರಲು ಮುಂದಾಗಿರುವ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಅವರು ಖುದ್ದಾಗಿ ಮುತುವರ್ಜಿ ವಹಿಸಿ ‘ಆಶಾಕಿರಣ’ ಯೋಜನೆ ರೂಪಿಸಿದ್ದಾರೆ. ಮುಂದಿನ ವಾರ ಯೋಜನೆಗೆ ಅಧಿಕೃತವಾಗಿ ಚಾಲನೆ ದೊರೆಯಲಿದೆ.

ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸುಮಾರು 3,000 ಮಂದಿ ರೌಡಿಗಳಿ ದ್ದಾರೆ. ರೌಡಿಗಳು ಮತ್ತು ಅವರ ಕುಟುಂಬದ ಸದಸ್ಯರು ‘ಆಶಾಕಿರಣ’ ಯೋಜನೆಯಡಿ ಕೌಶಲ ಅಭಿವೃದ್ಧಿ ಯೋಜನೆಯಡಿ ತರಬೇತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈವರೆಗೆ 103 ಮಂದಿ ತರಬೇತಿಗೆ ಆಸಕ್ತಿ ತೋರಿದ್ದಾರೆ.

‘103 ಮಂದಿಯಿಂದ ಆಸಕ್ತಿ ವ್ಯಕ್ತವಾಗಿದ್ದರೂ, 41 ಮಂದಿ ಅರ್ಜಿ ಸಲ್ಲಿಸಿದ್ದಾರೆ. 32 ಜನರು ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಆಶಾಕಿರಣ ವಿಭಾಗವು 12 ಅರ್ಜಿಗಳ ಪರಿಶೀಲನೆಯನ್ನು ಪೂರ್ಣಗೊಳಿಸಿದೆ. ಈ ‍ಪೈಕಿ ಎಂಟು ಮಂದಿ ಕರ್ನಾಟಕ ಜರ್ಮನ್‌ ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ (ಕೆಜಿಟಿಟಿಐ) ತರಬೇತಿಗೆ ಅರ್ಹತೆ ಪಡೆದಿದ್ದಾರೆ’ ಎಂದು ಕಮಿಷನರ್‌ ಡಾ.ಪಿ.ಎಸ್‌.ಹರ್ಷ ‘ಪ್ರಜಾವಾಣಿ’ಗೆ ತಿಳಿಸಿದರು.

ತರಬೇತಿಗೆ ಸಿದ್ಧತೆ: ಸಿಸ್ಕೋ ಟೆಕ್ನಾಲಜೀಸ್‌ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೌಶಲ ವೃದ್ಧಿ ತರಬೇತಿ ನೀಡಲಿದೆ. ಹೆಚ್ಚು ಮಂದಿ ಈ ವಿಭಾಗದಲ್ಲೇ ತರಬೇತಿ ಪಡೆಯಲು ಆಸಕ್ತಿ ತೋರುತ್ತಿದ್ದಾರೆ. ಲೆಕ್ಕಪತ್ರ ನಿರ್ವಹಣೆ ಕ್ಷೇತ್ರದಲ್ಲಿಯೂ ಹೆಚ್ಚಿನ ಒಲವು ಕಂಡುಬಂದಿದೆ. ‘ಟ್ಯಾಲಿ’ ತಂತ್ರಾಂಶ ಬಳಕೆ ಕುರಿತ ತರಬೇತಿಗೆ ಹಲವರು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಹೆಚ್ಚಿನ ವಿದ್ಯಾರ್ಹತೆ ಹೊಂದಿ ದವರನ್ನು ಮಾಹಿತಿ ತಂತ್ರಜ್ಞಾನ ತರಬೇತಿಗೆ ಆಯ್ಕೆ ಮಾಡಲಾಗುವುದು. ವಾಣಿಜ್ಯ ವಿಭಾಗದಲ್ಲಿ ಶಿಕ್ಷಣ ಪಡೆದಿರುವವರಿಗೆ ‘ಟ್ಯಾಲಿ’ ತಂತ್ರಾಂಶ ತರಬೇತಿಗೆ ವ್ಯವಸ್ಥೆ ಮಾಡಲಾಗುವುದು. ಕಡಿಮೆ ಶಿಕ್ಷಣ ಪಡೆದವರಿಗೆ ರೆಫ್ರಿಜರೇಷನ್‌ ಸರ್ವಿಸ್‌, ವೆಲ್ಡಿಂಗ್‌ನಂತಹ ಕೆಲಸಗಳಲ್ಲಿ ತರಬೇತಿ ಕೊಡಿಸಲಾಗುವುದು ಎಂದರು. ಮೊದಲ ಹಂತದ ತರಬೇತಿ ಈ ತಿಂಗಳ ಅಂತ್ಯದಿಂದ ಪ್ರಾರಂಭವಾಗಲಿದೆ. ಒಂದೆರಡು ತಂಡಗಳ ತರಬೇತಿ ಮುಗಿದು, ಅವರಿಗೆ ಉದ್ಯೋಗ ಲಭಿಸಿದ ಬಳಿಕ ರೌಡಿಗಳು, ಅವರ ಕುಟುಂಬದವರಿಂದ ಕೌಶಲ ಅಭಿವೃದ್ಧಿ ತರಬೇತಿಗೆ ಹೆಚ್ಚಿನ ಬೇಡಿಕೆ ಬರಬಹುದು ಎಂಬ ನಿರೀಕ್ಷೆ ಪೊಲೀಸ್‌ ಅಧಿಕಾರಿಗಳಲ್ಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು