ಮಂಗಳೂರು: ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಇನ್‌ಫ್ರಾಸ್ಟ್ರಕ್ಚರ್ ಮಿಷನ್ ಅಡಿ ದಕ್ಷಿಣ ಕನ್ನಡ ಜಿಲ್ಲೆಗೆ ₹ 25.11 ಕೋಟಿ ಬಿಡುಗಡೆಯಾಗಿದ್ದು, ಅದರಲ್ಲಿ ವೆನ್ಲಾಕ್ ಕ್ರಿಟಿಕಲ್ ಕೇರ್ ಕಟ್ಟಡಕ್ಕೆ₹ 24 ಕೋಟಿ ಬಳಸಲು ಅನುಮೋದನೆ ಸಿಕ್ಕಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
‘ಇಂಟಿಗ್ರೇಟೆಡ್ ಪಬ್ಲಿಕ್ ಹೆಲ್ತ್ ಲ್ಯಾಬ್ (ಐಪಿಎಚ್‌ಎಲ್) ಕಟ್ಟಡ ನಿರ್ಮಾಣಕ್ಕೆ ಈ ಯೋಜನೆಯಡಿ ₹ 1.11 ಕೋಟಿ ಅನುದಾನ ಬಳಸಲಾಗುತ್ತದೆ. ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಅಪಘಾತ ಚಿಕಿತ್ಸಾ ವಿಭಾಗದ ಕಟ್ಟಡದ ಎರಡನೇ ಮಹಡಿಯಲ್ಲಿ ಐಪಿಎಚ್‌ಎಲ್ ನಿರ್ಮಿಸಲಾಗುತ್ತದೆ. ಇದರ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿಯನ್ನು ಪ್ರಾರಂಭಿಸಲಾಗುತ್ತದೆ’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸ್ಮಶಾನಕ್ಕೆ ಭೇಟಿ: ನಗರದ ಬೋಳೂರಿನಲ್ಲಿರುವ ಹಿಂದೂ ವಿದ್ಯುತ್ ಚಿತಾಗಾರಕ್ಕೆ ಶನಿವಾರ ಭೇಟಿ ನೀಡಿದ ಕ್ಯಾ.ಚೌಟ ಅಲ್ಲಿನ ಸಿಬ್ಬಂದಿ ಹಾಗೂ ಸಾರ್ವಜನಿಕರು ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ಪಾಲಿಕೆ ಸದಸ್ಯ ಜಗದೀಶ್ ಶೆಟ್ಟಿ ಮತ್ತು ಬಿಜೆಪಿಯ ಪ್ರಮುಖರು ಜೊತೆಯಲ್ಲಿದ್ದರು.