ಸೋಮವಾರ, ನವೆಂಬರ್ 30, 2020
26 °C
ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ನಿಯಂತ್ರಿಸಲು ಕ್ರಮ: ಜಿಲ್ಲಾಧಿಕಾರಿ

ಗ್ರಾಮೀಣ ಟಾಸ್ಕ್‌ಫೋರ್ಸ್ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ, ಪಿಡಿಒ ಒಳಗೊಂಡ ಗ್ರಾಮೀಣ ಟಾಸ್ಕ್‌ಫೋರ್ಸ್ ರಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ತಿಳಿಸಿದರು.

ಶನಿವಾರ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ‘ಮಾಧ್ಯಮ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸರ್ಕಾರಿ ಜಾಗದಲ್ಲಿ ಕೆಂಪುಕಲ್ಲು ತೆಗೆಯಲು ಅವಕಾಶವಿಲ್ಲ. ಪಟ್ಟಾ ಜಾಗದಲ್ಲಿ ತೆಗೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆಯಬೇಕು. ಜಿಲ್ಲೆಯಲ್ಲಿರುವ ಕೆಂಪುಕಲ್ಲು ಗಣಿಗಾರಿಕೆ ಪ್ರದೇಶವನ್ನು ಪತ್ತೆ ಮಾಡಲು ಪ್ರತ್ಯೇಕ್ಷ ಸಮೀಕ್ಷೆ ನಡೆಸಲಾಗುತ್ತದೆ. ಅನಧಿಕೃತ ಕ್ವಾರಿಗಳು ಕಂಡಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುತ್ತದೆ. ಅನಧಿಕೃತ ಕ್ವಾರಿ ನಿಯಂತ್ರಿಸಲು ಎಡವಿದಲ್ಲಿ ಗ್ರಾಮ ಲೆಕ್ಕಾಧಿಕಾರಿ, ಪಿಡಿಒ ಮೇಲೆ ಸಹ ಶಿಸ್ತು ಕ್ರಮ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಕೆ ನೀಡಲಾಗುವುದು ಎಂದರು.

ಜಿಲ್ಲೆಯಲ್ಲಿ ಈಗಾಗಲೇ ಸುಮಾರು 15 ಸಾವಿರ ಮೆಟ್ರಿಕ್ ಟನ್ ಮರಳು ಸಾರ್ವಜನಿಕರ ಕಾರ್ಯಕ್ಕೆ ಲಭ್ಯವಿದೆ. ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಿಸಲು ಎಲ್ಲ ದಕ್ಕೆ ಹಾಗೂ ಮರಳು ದಿಬ್ಬಗಳಿರುವ ಪ್ರದೇಶದಲ್ಲಿ ಹೆಚ್ಚುವರಿ ಸಾಮರ್ಥ್ಯದ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಪೊಲೀಸ್ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಜಂಟಿ ಸಹಭಾಗಿತ್ವದಲ್ಲಿ ಚೆಕ್‌ಪೋಸ್ಟ್ ತೆರೆಯಲು ಯೋಜಿಸಲಾಗಿದೆ. ಸೆಂಟ್ರ
ಲೈಸ್ಡ್‌ ಮಾನಿಟರಿಂಗ್ ಕಮಿಟಿ ರಚಿಸಿ, ಅಕ್ರಮ ಮರಳು ಗಣಿಗಾರಿಕೆ ಗುರುತಿಸಿ, ಪ್ರಕರಣ ದಾಖಲಿಸಲಾಗುತ್ತದೆ. ಅಧಿಕಾರಿಗಳು ಅಕ್ರಮ ಮರಳು ಸಾಗಾಟಕ್ಕೆ ನೆರವಾದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಇನ್ನು ಮೂರು ದಿನಗಳಲ್ಲಿ ಕಂದಾಯ, ಪೊಲೀಸ್, ಗಣಿ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಸಭೆ ಕರೆದು ಸಮನ್ವಯದಿಂದ ಕೆಲಸ ಮಾಡುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಹೆಲಿ ಟೂರಿಸಂ ಪ್ರಾರಂಭಿಸಲು ಯೋಚಿಸಲಾಗಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರು, ಧಾರ್ಮಿಕ ಕ್ಷೇತ್ರ, ಪ್ರಕೃತಿ
ರಮ್ಯ ತಾಣಗಳ ವಿವರ ಒಳಗೊಂಡ ಕೈಪಿಡಿಯನ್ನು ನಗರದ ಹೋಟೆಲ್‌ಗಳಲ್ಲಿ ಇಡಲು ಯೋಚಿಸಲಾಗಿದೆ. ಕಾಫಿಟೇಬಲ್‌ ಬುಕ್ ಕೂಡ ಸಿದ್ಧಪಡಿಸ
ಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ಉಪ ವಿಭಾಗಾಧಿಕಾರಿ ಮದನ್‌ಮೋಹನ್, ತಹಶೀಲ್ದಾರ್ ಟಿ.ಜಿ. ಗುರುಪ್ರಸಾದ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ ನಾಯ್ಕ ಇಂದಾಜೆ ಇದ್ದರು.

‘ನಾಲ್ಕು ಭಾನುವಾರ ಮತದಾರರ ಮಿಂಚಿನ ನೋಂದಣಿ’

ಮತದಾರರ ಕರಡುಪಟ್ಟಿಯನ್ನು ಪ್ರಕಟಿಸಲಾಗಿದ್ದು, ಹಕ್ಕು ಮತ್ತು ಆಕ್ಷೇಪಣೆಗೆ ಅವಕಾಶ ಕಲ್ಪಿಸಲಾಗಿದೆ. ಮತದಾರರ ಯಾದಿಯಲ್ಲಿ ಹೆಸರು ನೋಂದಣಿ, ಬದಲಾವಣೆ ಇದ್ದಲ್ಲಿ ಸಾರ್ವಜನಿಕರು ಈ ಸಂದರ್ಭ ಸದುಪಯೋಗಪಡಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ 17ರವರೆಗೆ ಮತದಾರರ ಹೆಸರು ತಿದ್ದುಪಡಿ, ಸೇರ್ಪಡೆಗೆ ಕಾಲಾವಕಾಶವಿದೆ. ಇದೇ 22ರಿಂದ ಮುಂದಿನ ನಾಲ್ಕು ಭಾನುವಾರಗಳಲ್ಲಿ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಮಿಂಚಿನ ನೋಂದಣಿ ನಡೆಸಲಾಗುವುದು. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ನೋಂದಣಾಧಿಕಾರಿ, ಸಹಾಯಕ ನೋಂದಣಾಧಿಕಾರಿಯನ್ನು ನೇಮಿಸಲಾಗಿದೆ. ಬರುವ ಜನವರಿ 18ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ’ ಎಂದರು.

ಜಿಲ್ಲೆಯಲ್ಲಿ ಈವರೆಗೆ 12,571 (18ರಿಂದ 19ವರ್ಷದೊಳಗಿನ) ಯುವ ಮತದಾರರು, 12,027 ಅಂಗವಿಕಲ ಮತದಾರರನ್ನು ಗುರುತಿಸಲಾಗಿದೆ. 2021 ಜನವರಿ 1ಕ್ಕೆ 18 ವರ್ಷ ತುಂಬುವ ಯುವಜನರು ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬಹುದು. ವೆಬ್ ಪೋರ್ಟಲ್: www.ceokarnataka.kar.nic.in, www.nvsp.in ಇಲ್ಲಿ ಮಾಹಿತಿ ಪಡೆಯಬಹುದು. ಮತದಾರರ ಸಹಾಯವಾಣಿ 1950ಕ್ಕೆ ಕೂಡ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.