ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಮಕ್ಕಳ ಸುರಕ್ಷತೆ: ನಿಯಮಗಳ ಬಲ; ಪಾಲನೆ ಗೊಂದಲ

ಇಲಾಖೆಗಳ ಆದೇಶಗಳಿಗೆ ರಾಜ್ಯ ಮಕ್ಕಳ ರಕ್ಷಣಾ ನೀತಿಯ ಬೆಂಬಲ; ಜಾರಿಯಾಗಬೇಕಾದ ಕ್ರಮಗಳು ದೂರ
Published 10 ಜೂನ್ 2024, 7:52 IST
Last Updated 10 ಜೂನ್ 2024, 7:52 IST
ಅಕ್ಷರ ಗಾತ್ರ

ಮಂಗಳೂರು: ಸಂಜೆಯ ಹೊತ್ತು. ಮಳೆನೀರು ನಿಂತು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಕಷ್ಟಪಟ್ಟು ಮುಂದೆಸಾಗುತ್ತಿದ್ದವು. ಆದರೆ ಶಾಲೆಯ ವಾಹನವೊಂದು ಅತಿವೇಗದಲ್ಲಿ ಸಾಗುತ್ತಿತ್ತು. ಮಕ್ಕಳು ನಿರಂತರ ಕುಣಿಯುತ್ತಿದ್ದರು. ಕುಣಿತಕ್ಕೆ ಅವರಿಗೆ ಪ್ರಚೋದನೆಯಾದದ್ದು ಜೋರಾಗಿ ಹಾಕಿದ್ದ ಡಿಜೆ ಶೈಲಿಯ ಹಾಡು. ಮಕ್ಕಳ ‘ಜೋಶ್’ಗೆ ಚಾಲಕನೂ ಸ್ಟಿಯರಿಂಗ್‌ ಹಿಡಿದಲ್ಲಿಂದಲೇ ದೇಹವನ್ನು ಕುಣಿಸುತ್ತಿದ್ದ. ಓಲಾಡುತ್ತ ವಾಹನ ಮುಂದೆ ಓಡುತ್ತಿತ್ತು...

ಇದು ಕೇವಲ ಒಂದು ವಾಹನದ ಕಥೆಯಲ್ಲ. ಮಂಗಳೂರು ನಗರ ಮತ್ತು ಸುತ್ತಮುತ್ತ ಇಂಥ ಅಪಾಯಕಾರಿಯಾಗಿ ‘ಪ್ರಯಾಣ’ ನಿತ್ಯವೂ ನಡೆಯುತ್ತಿರುತ್ತದೆ. ಇದೆಲ್ಲ ಸರಿಯೇ ಎಂದು ಕೇಳಿದರೆ ಅಧಿಕಾರಿಗಳಿಗಾಗಲಿ, ಶಾಲಾ ಆಡಳಿತಕ್ಕಾಗಲಿ, ವಾಹನ ಚಾಲಕರಿಗಾಗಲಿ ಸ್ಪಷ್ಟ ಉತ್ತರ ನೀಡಲು ಆಗುತ್ತಿಲ್ಲ. ಶಾಲಾ ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಇಂಥ ಗೊಂದಲಗಳು ಇದೇ ಮೊದಲಲ್ಲ, ಕೊನೆಯೂ ಅಲ್ಲವೇನೋ...

ಮಕ್ಕಳ, ವಿಶೇಷವಾಗಿ ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಜ್ಯದ ಸಾರಿಗೆ ಇಲಾಖೆ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 2013ರಲ್ಲೇ ಅಧಿಸೂಚನೆ ಹೊರಡಿಸಿದ್ದು ಅದನ್ನು 2019ರಲ್ಲಿ ಪರಿಷ್ಕರಿಸಲಾಗಿದೆ. 2016ರ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿಯ ಬಲವೂ ಅದಕ್ಕಿದೆ. ಇಷ್ಟೆಲ್ಲ ಇದ್ದರೂ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲ.

1989ರ ಕರ್ನಾಟಕ ಮೋಟಾರು ವಾಹನಗಳ ನಿಯಮಕ್ಕೆ ತಿದ್ದುಪಡಿ ತಂದು ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳ ಸ್ಥಿತಿ–ಗತಿ ಎಂದು ಉಲ್ಲೇಖಿಸಿ 2012ರಲ್ಲಿ ಹೊಸ ಆದೇಶ ಹೊರಡಿಸಿತ್ತು. ಇದರಲ್ಲಿದ್ದ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಖಾಸಗಿ ವಾಹನಗಳನ್ನು ‘ಸ್ಕೂಲ್ ಕ್ಯಾಬ್’ ಆಗಿ ಪರಿವರ್ತಿಸುವ ಕುರಿತ ಆದೇಶ ಪಾಲನೆ ಆಗುತ್ತಿಲ್ಲ ಎಂದು ಬೆಂಗಳೂರು ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ದೂರಿದ ಹಿನ್ನೆಲೆಯಲ್ಲಿ 2019ರಲ್ಲಿ ತಿದ್ದುಪಡಿ ಮಾಡಿ ಮರುಆದೇಶ ಹೊರಡಿಸಲಾಗಿತ್ತು.

ಪ್ರತಿ ಶಾಲೆಯಲ್ಲಿ ‘ಸ್ಕೂಲ್ ಕ್ಯಾಬ್ಸ್‌ ಸೇಫ್ಟಿ ಕಮಿಟಿ’ ಇರಬೇಕಾದುದು ಈ ಆದೇಶದ ಪ್ರಮುಖ ಅಂಶ. ಶಾಲೆಯ ಆವರಣದಲ್ಲೇ ವಾಹನ ನಿಲುಗಡೆಗೆ ಸೌಲಭ್ಯ ಇರಬೇಕಾದುದು ಕೂಡ ಮತ್ತೊಂದು ಪ್ರಮುಖ ಅಂಶ. ವೇಗ ನಿಯಂತ್ರಣಕ್ಕೆ ಗುಣಮಟ್ಟದ ‘ಸ್ಪೀಡ್ ಗವರ್ನರ್‌’ ಇರಬೇಕು, ಶಾಲಾ ವಾಹನ ಎಂದು ಪತ್ತೆಹಚ್ಚಲು ನಿರ್ದಿಷ್ಟ ಬಣ್ಣ ಬಳಸಬೇಕು, 12 ವರ್ಷದೊಳಗಿನ ಮಕ್ಕಳನ್ನು ವಾಹನದ ಸಾಮರ್ಥ್ಯಕ್ಕಿಂತ ಒಂದೂವರೆ ಪಟ್ಟು ಸಂಖ್ಯೆಯಲ್ಲಿ ಕರೆದುಕೊಂಡು ಹೋಗಬಹುದು, ಬಾಗಿಲುಗಳು ಭದ್ರವಾಗಿರಬೇಕು ಎಂಬಿತ್ಯಾದಿ ಷರತ್ತುಗಳು ಅದರಲ್ಲಿ ಇವೆ.

ಯಾವ ವಾಹನದಲ್ಲಿ ಎಷ್ಟು ಮಕ್ಕಳನ್ನು ಕರೆದುಕೊಂಡು ಹೋಗಬಹುದು, ವಾಹನದಲ್ಲಿ ಏನೇನು ಸೌಲಭ್ಯಗಳು ಇರಬೇಕು, ಚಾಲಕ ಧರಿಸಬೇಕಾದ ಪೋಷಾಕು ಯಾವುದು,  ವಾಹನದ ಸ್ಥಿತಿ ಹೇಗಿರಬೇಕು ಎಂಬಿತ್ಯಾದಿ ವಿಷಯಗಳನ್ನು ಅದರಲ್ಲಿ ಉಲ್ಲೇಖಿಸಲಾಗಿದೆ.   ಇದೆಲ್ಲವೂ ವಿವಿಧ ಇಲಾಖೆಗಳ ಅಡಿಯಲ್ಲಿ ಬರುವುದರಿಂದ ಪಾಲನೆಯಲ್ಲಿ ಗೊಂದಲ ಕಂಡುಬಂದಿದೆ.

ಇಲಾಖೆಗಳ ಮಾಹಿತಿ ಪ್ರಕಾರ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಲ್ಲಿ ಅಧಿಕೃತವಾಗಿ ಒಟ್ಟು 1060 ಶಾಲಾ ವಾಹನಗಳು ಇವೆ. ಆದರೆ ಪೋಷಕರೇ ಖಾಸಗಿಯಾಗಿ ಏರ್ಪಾಡು ಮಾಡಿರುವ ಆಟೊ, ಕ್ಯಾಬ್ ಇತ್ಯಾದಿಗಳ ಸಂಖ್ಯೆ ಸಾವಿರಾರು ಇದೆ.
‘ವಾಹನಗಳಲ್ಲಿ ತೆರಳುವ ಶಾಲಾ ಮಕ್ಕಳ ಸುರಕ್ಷತೆಗೆ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆಗಳು ಸಂಯುಕ್ತವಾಗಿ ಕೆಲಸ ಮಾಡಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಕೆಲಸ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಆದ್ದರಿಂದ ಇಲ್ಲಿ ನಿಯಮಗಳ ಉಲ್ಲಂಘನೆ, ಅವಘಡಗಳು ಕಡಿಮೆ’ ಎನ್ನುತ್ತಾರೆ ಸಾರಿಗೆ ಅಧಿಕಾರಿ ಶ್ರೀಧರ ಕೆ.ಮಲ್ಲಾಡ.

‘ಕೆಲವು ಶಾಲಾ ವಾಹನಗಳ ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು ಗಮನಕ್ಕೆ ಬಂದಿದೆ. ಸಮಯಕ್ಕೆ ಸರಿಯಾಗಿ ಶಾಲೆ ತಲುಪುವ ಧಾವಂತದಲ್ಲಿ ಕೆಲವೊಮ್ಮೆ ಅಪಘಾತಕ್ಕೆ ಎಡೆ ಮಾಡುವಂಥ ಚಾಲನೆ ಮಾಡುತ್ತಾರೆ. ಇಂಥ ವಾಹನಗಳ ಶಾಲೆಗಳ ಆಡಳಿತಕ್ಕೆ ಎಚ್ಚರಿಕೆ ನೀಡಲಾಗುವುದು’ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೋಸ್ ಆಯುಕ್ತ ದಿನೇಶ್ ಕುಮಾರ್ ತಿಳಿಸಿದರು.

‘ಮಕ್ಕಳ ಸುರಕ್ಷತೆಯ ದೃಷ್ಟಿಯಲ್ಲಿ ಇಲಾಖೆಗಿಂತ ಪೋಷಕರ ಪಾತ್ರ ಮಹತ್ವದ್ದು. ಖಾಸಗಿಯಾಗಿ ವಾಹನ ವ್ಯವಸ್ಥೆ ಮಾಡುವ ಪೋಷಕರು ಎಚ್ಚರವಾಗಿರಬೇಕು. ಲೈಂಗಿಕ ದೌರ್ಜನ್ಯಗಳು ಆಗಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಲು ಮಕ್ಕಳ ಮೇಲೆ ನಿಗಾ ಇರಿಸಬೇಕು, ಅವರೊಂದಿಗೆ ಪ್ರತಿದಿನ ಮಾತುಕತೆ ನಡೆಸಬೇಕು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ವೆಂಕಟೇಶ ಪಟಗಾರ ಸಲಹೆ ನೀಡಿದರು.

ಮಂಗಳೂರು ನಗರದ ಶಾಲೆಯೊಂದರ ಬಳಿ ವಾಹನದಿಂದ ಇಳಿಯುತ್ತಿರುವ ವಿವಿಧ ವಯೋಮಾನದ ವಿದ್ಯಾರ್ಥಿಗಳು –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್ 
ಮಂಗಳೂರು ನಗರದ ಶಾಲೆಯೊಂದರ ಬಳಿ ವಾಹನದಿಂದ ಇಳಿಯುತ್ತಿರುವ ವಿವಿಧ ವಯೋಮಾನದ ವಿದ್ಯಾರ್ಥಿಗಳು –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್ 

ಫೋನ್ ಬಳಕೆ ಬೇಡ; ಮಕ್ಕಳ ಮೇಲೆ ಕಣ್ಣಿರಲಿ

ಆಟೊಗಳಲ್ಲಿ ತೆರಳುವ ಶಾಲಾ ಮಕ್ಕಳ ಸುರಕ್ಷತೆಗೆ ಹೆಚ್ಚು ಗಮನ ನೀಡಲಾಗುತ್ತಿದೆ. ಆದರೂ ಕೆಲವರು ಅಪಾಯಕಾರಿ ರೀತಿಯಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಅವರಲ್ಲಿ ಅರಿವು ಮೂಡಿಸಲು ಪ್ರಯತ್ನಿಸಲಾಗುವುದು ಎಂದು ಮಂಗಳೂರು ಆಟೊ ಚಾಲಕರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಮಂಗಳಾದೇವಿ ತಿಳಿಸಿದರು.
‘ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ಮಕ್ಕಳು ಮನೆಯಲ್ಲಿ ಪೋಷಕರ ಪಾಲನೆಯಲ್ಲಿರುತ್ತಾರೆ. ಶಾಲೆಯ ಒಳಗೆ ತಲುಪಿದ ನಂತರ ಅವರನ್ನು ನೋಡಿಕೊಳ್ಳುವುದು ಶಿಕ್ಷಕರ ಜವಾಬ್ದಾರಿ. ಇದರ ಮಧ್ಯೆ ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ತಲುಪುವ ವರೆಗೂ ವಾಹನದವರ ಜವಾಬ್ದಾರಿ. ಆಟೊದಲ್ಲಿ ತೆರಳುವ ಮಕ್ಕಳನ್ನು ಸುರಕ್ಷಿತವಾಗಿ ತಲುಪಿಸಲು ಕಾಳಜಿ ವಹಿಸಬೇಕು’ ಎಂದು ಅವರು ಹೇಳಿದರು.

ಮಂಗಳೂರು ನಗರದ ಶಾಲೆಯೊಂದರ ಬಳಿ ವಾಹನದಿಂದ ಇಳಿದು ಬ್ಯಾಗ್‌ಗಳನ್ನು ಹೆಗಲಿಗೇರಿಸಿಕೊಳ್ಳುವ ಧಾವಂತದಲ್ಲಿ ವಿದ್ಯಾರ್ಥಿಗಳು –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್ 
ಮಂಗಳೂರು ನಗರದ ಶಾಲೆಯೊಂದರ ಬಳಿ ವಾಹನದಿಂದ ಇಳಿದು ಬ್ಯಾಗ್‌ಗಳನ್ನು ಹೆಗಲಿಗೇರಿಸಿಕೊಳ್ಳುವ ಧಾವಂತದಲ್ಲಿ ವಿದ್ಯಾರ್ಥಿಗಳು –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್ 
ಭರತ್ ಕುಮಾರ್
ಭರತ್ ಕುಮಾರ್
ಅಬ್ಬರದ ಸಂಗೀತ ಹಾಕಬಾರದು ಶಾಲಾ ವಾಹನದಲ್ಲಿ ವಿಶೇಷವಾಗಿ ಸಣ್ಣ ಮಕ್ಕಳು ಪ್ರಯಾಣಿಸುವ ವಾಹನದಲ್ಲಿ ಅಬ್ಬರದ ಸಂಗೀತ ಹಾಕುವುದು ಸರಿಯಲ್ಲ. ಚಾಲಕನಿಗೆ ಇಷ್ಟ ಎಂಬ ಕಾರಣಕ್ಕೆ ಅದನ್ನು ಹಾಕಿದರೆ ವಾಹನದ ನಿಯಂತ್ರಣದ ಮೇಲೆ ನಿಗಾ ಇಲ್ಲದೆ ಅಪಘಾತ ಆಗುವ ಸಾಧ್ಯತೆ ಇದೆ. ಬೇರೆ ವಾಹನಗಳ ಹಾರನ್ ಕೇಳಿಸದೇ ತೊಂದರೆಯಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಹೊಡಿಬಡಿ ಹಾಡುಗಳನ್ನು ಹಾಕಿಕೊಂಡು ವಾಹನ ಚಾಲನೆ ಮಾಡದಂತೆ ಸಂಬಂಧಪಟ್ಟವರು ಚಾಲಕರಿಗೆ ಸೂಚಿಸಬೇಕು. ಇಲಾಖೆ ಈ ಬಗ್ಗೆ ಗಮನಹರಿಸಲಿದೆ.
–ವೆಂಕಟೇಶ ಪಟಗಾರ ಡಿಡಿಪಿಐ
ಶ್ರೀಧರ್ ಮಲ್ಲಾಡ್
ಶ್ರೀಧರ್ ಮಲ್ಲಾಡ್
ಇಲಾಖೆ ಜಾಗರೂಕವಾಗಿದೆ ನಿಯಮಗಳ ಪಾಲನೆಯ ದೃಷ್ಟಿಯಿಂದ ಸಲಹೆ ನೀಡುವುದು ದಂಡ ಹಾಕುವುದು  ಇತ್ಯಾದಿ ನಡೆಯುತ್ತಲೇ ಇರುತ್ತದೆ. ಇದೆಲ್ಲದರ ಜೊತೆಯಲ್ಲಿ ಪೋಷಕರು ಮತ್ತು ಶಾಲಾ ಆಡಳಿತದವರು ಹೆಚ್ಚು ಕಾಳಜಿಯಿಂದ ವರ್ತಿಸಬೇಕು. ಒಟ್ಟಿನಲ್ಲಿ ಮಕ್ಕಳು ಶಾಲೆಗೆ ತಲುಪಿದರೆ ಸಾಕು ಅಥವಾ ಸಂಜೆ ಮನೆ ಸೇರಿದರಾಯಿತು ಎಂಬ ಭಾವನೆ ಬಿಡಬೇಕು. ವಾಹನಗಳ ಗುಣಮಟ್ಟ ಪಾಲನೆಯಲ್ಲಿ ಸಾರಿಗೆ ಇಲಾಖೆ ಜಾಗರೂಕವಾಗಿದೆ. ಈ ಭಾಗದಲ್ಲಿ ಹೆಚ್ಚು ತೊಂದರೆಗಳು ಅನುಭವಕ್ಕೆ ಬರಲಿಲ್ಲ.
–ಶ್ರೀಧರ ಕೆ.ಮಲ್ಲಾಡ ಸಾರಿಗೆ ಅಧಿಕಾರಿ
ದಿನೇಶ್ ಕುಮಾರ್‌
ದಿನೇಶ್ ಕುಮಾರ್‌
ಅಗತ್ಯ ಇರುವಲ್ಲಿ ಪೊಲೀಸರ ನಿಯೋಜನೆ ಕರ್ನಾಟಕ ಮೋಟಾರು ವಾಹನಗಳ ನಿಯಮ ಎಲ್ಲ ವಾಹನಗಳಿಗೂ ಅನ್ವಯವಾಗುತ್ತವೆ. ಆದರೂ ಮಕ್ಕಳು ಪ್ರಯಾಣಿಸುವುದರಿಂದ ಶಾಲಾ ವಾಹನಗಳ ಬಗ್ಗೆ ಹೆಚ್ಚು ಗಮನ ಬೇಕು. ವಾಹನ ವ್ಯವಸ್ಥೆ ಇರುವ ಶಾಲೆಗಳ ಪೈಕಿ ಬಹುತೇಕ ಕಡೆಗಳಲ್ಲಿ ನಿಯಮಗಳ ಪಾಲನೆ ಆಗುತ್ತಿದೆ. ಅನಿವಾರ್ಯ ಇರುವ ಪ್ರದೇಶಗಳ ಶಾಲೆಗಳ ಬಳಿ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಎಲ್ಲ ಕಡೆಗಳಲ್ಲಿ ಇಂಥ ವ್ಯವಸ್ಥೆ ಮಾಡಲು ಕಷ್ಟಸಾಧ್ಯ. ಆದ್ದರಿಂದ ಶಾಲಾ ಆಡಳಿತದವರೂ ಸ್ವಲ್ಪ ಹೆಚ್ಚು ಕಾಳಜಿ ವಹಿಸಬೇಕು.
–ದಿನೇಶ್ ಕುಮಾರ್‌ ಡಿಸಿಪಿ

ವಾಹನ ಟ್ರ್ಯಾಕಿಂಗ್‌ಗೆ ವ್ಯವಸ್ಥೆ

ಮಂಗಳೂರು ನಗರದ ಅನೇಕ ಆಟೊ ಚಾಲಕರು ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವಾಗ ವಾಹನ ಎಲ್ಲಿದೆ ಎಂದು ಪಾಲಕರಿಗೆ ತಿಳಿಯಲು ಲೈವ್ ಲೊಕೇಷನ್ ಹಾಕಿ ಟ್ರ್ಯಾಕ್ ಮಾಡುವ ಸೌಲಭ್ಯ ಒದಗಿಸಿದ್ದಾರೆ. ಮಕ್ಕಳ ಪೋಷಕರನ್ನು ಸಂಪರ್ಕ ಸಂಖ್ಯೆಗಳ ವಾಟ್ಸ್ ಆ್ಯಪ್ ಗ್ರೂಪ್ ಮಾಡಿ ಬೆಳಿಗ್ಗೆ ಶಾಲೆಯತ್ತ ಹೋಗುವಾಗ ಮತ್ತು ಸಂಜೆ ಶಾಲೆಯಿಂದ ಹೊರಡುವಾಗ ಲೊಕೇಷನ್ ಆನ್ ಮಾಡಿ ಅದರ ಲಿಂಕ್ ಕಾಪಿ ಮಾಡಿ ಗ್ರೂಪಿಗೆ ಹಾಕಲಾಗುತ್ತದೆ. ಇದರಿಂದ ಪೋಷಕರಿಗೆ ಮಕ್ಕಳು ಶಾಲೆಗೆ ತಲುಪದ್ದಾರಾ ಎಂದು ತಿಳಿಯಲು ಮತ್ತು ವಾಪಸ್ ಬರುವಾಗ ಎಲ್ಲಿದ್ದಾರೆ ಎಂದು ತಿಳಿದುಕೊಂಡು ಗೇಟ್ ಬಳಿ ಕಾಯಲು ಅನುಕೂಲ ಆಗುತ್ತದೆ. ಎಲ್‌ಕೆಜಿ ಮತ್ತು ಯುಕೆಜೆ ಮಕ್ಕಳನ್ನು ಕರೆದುಕೊಂಡು ಹೋಗುವ ಆಟೊದವರು ಕೆಲವು ದೊಡ್ಡ ಮಕ್ಕಳನ್ನೂ ಅದರಲ್ಲಿ ಕೂರಿಸುತ್ತಾರೆ. ‘ಸಣ್ಣ ಮಕ್ಕಳು ತುಂಬ ತುಂಟಾಟ ಆಡುತ್ತಿರುತ್ತಾರೆ. ಅವರಿಗೆ ತಾವು ಏನು ಮಾಡುತ್ತಿದ್ದೇವೆ ಎಂಬುದರ ಅರಿವೂ ಇರುವುದಿಲ್ಲ. ಅಂಥವರ ಬಳಿ ದೊಡ್ಡ ಮಕ್ಕಳು ಇದ್ದರೆ ಅವರನ್ನು ನೋಡಿಕೊಳ್ಳುತ್ತಾರೆ. ಜೊತೆಗೆ ಚಾಲಕನ ಕಣ್ಣು ಕೂಡ ಮಕ್ಕಳ ಮೇಲೆ ಇರಬೇಕು’ ಎಂದು ಆಟೊ ಮಾಲೀಕ ಭರತ್ ಕುಮಾರ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT