ಪುತ್ತೂರು (ದಕ್ಷಿಣ ಕನ್ನಡ): ‘ರೈ ಎಸ್ಟೇಟ್ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ದೀಪಾವಳಿ ಪ್ರಯುಕ್ತ ಈ ಬಾರಿ ಸುಮಾರು ₹1.70 ಕೋಟಿ ವೆಚ್ಚದಲ್ಲಿ 50 ಸಾವಿರ ಮಂದಿಗೆ ವಸ್ತ್ರದಾನ, ಸಹಭೋಜನ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಟ್ರಸ್ಟ್ ಪ್ರವರ್ತಕ, ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ನ.13ರಂದು ಪುತ್ತೂರು ತಾಲ್ಲೂಕು ಕ್ರೀಡಾಂಗಣದಲ್ಲಿ ಸಮಾರಂಭ ನಡೆಯಲಿದೆ. 60 ಸಾವಿರ ಮಂದಿಗೆ ವಿತರಣೆ ಮಾಡಲು ಬೇಕಾಗುವಷ್ಟು ವಸ್ತ್ರಗಳನ್ನು ಸೂರತ್‌ನಿಂದ ತರಿಸಲಾಗುತ್ತಿದೆ ಎಂದರು.
ಟ್ರಸ್ಟ್ ವತಿಯಿಂದ 10 ವರ್ಷಗಳಿಂದ ದೀಪಾವಳಿ ಸಂದರ್ಭದಲ್ಲಿ ವಸ್ತ್ರದಾನ ಮತ್ತು ಸಹಭೋಜನ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಳೆದ ವರ್ಷ 35 ಸಾವಿರ ಮಂದಿಗೆ ವಸ್ತ್ರದಾನ ಮಾಡಲಾಗಿತ್ತು. ಈ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯವರಿಗೆ ಆದ್ಯತೆ ನೀಡಲಾಗುವುದು. ಬೇರೆ ಕಡೆಯಿಂದ ಬಂದವರಿಗೂ ವಸ್ತ್ರದಾನ ಮಾಡಲಾಗುವುದು. ಮಹಿಳೆಯರಿಗೆ ಸೀರೆ, ಪುರುಷರಿಗೆ ಮತ್ತು ಮಕ್ಕಳಿಗೆ ಬೆಡ್‌ಶೀಟ್ ನೀಡಲಾಗುವುದು. ಸ್ವಂತ ಉದ್ಯಮದ ಲಾಭದ ಒಂದಂಶವನ್ನು ಇದಕ್ಕಾಗಿ ಬಳಸಲಾಗುತ್ತಿದೆ. ಈ ಕಾರ್ಯಕ್ರಮ ರಾಜಕೀಯ ರಹಿತವಾಗಿ ನಡೆಯಲಿದೆ ಎಂದು ಹೇಳಿದರು.
20 ಮಂದಿ ಬಡ ಸಾಧಕರಿಗೆ ಸನ್ಮಾನ: ಬೀಡಿಕಟ್ಟುವ, ಕೂಲಿ ಕೆಲಸ ಮಾಡುವ, ತಮ್ಮ ಕಷ್ಟದ ನಡುವೆಯೂ ಇತರರಿಗೆ ಸಹಾಯಹಸ್ತ ನೀಡಿರುವ, ಕಷ್ಟಕರ ಪರಿಸ್ಥಿತಿಯಲ್ಲಿಯೂ ಮಕ್ಕಳ ಶಿಕ್ಷಣವನ್ನು ಉತ್ತೇಜಿಸಿ ತಳಮಟ್ಟದಲ್ಲಿ ಸಾಧನೆ ಮಾಡಿರುವ 20 ಮಂದಿಯನ್ನು ಗೌರವಿಸಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.