ಸೋಮವಾರ, ಸೆಪ್ಟೆಂಬರ್ 16, 2019
27 °C

ಐಎಎಸ್‌ ಅಧಿಕಾರಿ ಸೆಂಥಿಲ್‌ ರಾಜೀನಾಮೆ

Published:
Updated:
Prajavani

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಅವರು ಭಾರತೀಯ ಆಡಳಿತ ಸೇವೆಗೆ (ಐಎಎಸ್‌) ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಪ್ರಸಕ್ತ ಸಂದರ್ಭದಲ್ಲಿ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕಾರಣದಿಂದ ರಾಜೀನಾಮೆ ನೀಡಿರುವುದಾಗಿ ಪ್ರಕಟಿಸಿದ್ದಾರೆ.

ಒಂದು ವಾರದಿಂದ ರಜೆಯಲ್ಲಿದ್ದ ಸಸಿಕಾಂತ್‌ ಸೆಂಥಿಲ್‌, ಶುಕ್ರವಾರ ಬೆಳಿಗ್ಗೆ ರಾಜೀನಾಮೆ ನೀಡಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಪತ್ರವೊಂದನ್ನು ಬಿಡುಗಡೆ ಮಾಡಿರುವ ಅವರು, ಪ್ರಜಾಪ್ರಭುತ್ವದ ಆಶಯಗಳಿಗೆ ಅಪಾಯ ಎದುರಾಗಿರುವುದು ತಮ್ಮ ರಾಜೀನಾಮೆಗೆ ಕಾರಣ ಎಂದಿದ್ದಾರೆ.

2008ರಲ್ಲಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 9ನೇ ರ‍್ಯಾಂಕ್‌ ಗಳಿಸಿದ್ದ ಸಸಿಕಾಂತ್‌, ಕರ್ನಾಟಕ ಕೇಡರ್‌ ಆಯ್ಕೆ ಮಾಡಿಕೊಂಡಿದ್ದರು. ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ರಾಯಚೂರು ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ ಸೇರಿದಂತೆ ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದ್ದರು. 2017ರ ಅಕ್ಟೋಬರ್‌ 10ರಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ರಾಜಿಯಾಗಲು ಸಿದ್ಧನಿಲ್ಲ: ಹುದ್ದೆಗೆ ರಾಜೀನಾಮೆ ನೀಡಿರುವ ಕುರಿತು ದೂರವಾಣಿ ಮೂಲಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಪ್ರಸಕ್ತ ಸಂದರ್ಭದಲ್ಲಿ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳೊಂದಿಗೆ ರಾಜಿ ಮಾಡಿಕೊಳ್ಳಲು ಆಗದೆ ರಾಜೀನಾಮೆ ನೀಡಿದ್ದೇನೆ’ ಎಂದರು.

‘ಹುದ್ದೆಯಲ್ಲಿ ಮುಂದುವರಿಯಬೇಕಾದರೆ ನಾನು ನಂಬಿದ ತತ್ವ, ಸಿದ್ಧಾಂತಗಳಿಗೆ ವಿರುದ್ಧವಾಗಿ ರಾಜಿ ಮಾಡಿಕೊಳ್ಳಬೇಕಿತ್ತು. ತತ್ವ, ಸಿದ್ಧಾಂತಕ್ಕೆ ಬದ್ಧನಾಗಿ ಉಳಿಯಬೇಕಿದ್ದರೆ ಐಎಎಸ್‌ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಬೇಕಿತ್ತು. ಎರಡನೆಯದ್ದನ್ನೇ ಆಯ್ಕೆ ಮಾಡಿಕೊಂಡಿದ್ದೇನೆ’ ಎಂದರು.

ವರ್ಗಾವಣೆ ವಿಚಾರವೇ ಇಲ್ಲ: ‘ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಅಥವಾ ರಾಜ್ಯ ಸರ್ಕಾರದಿಂದ ಯಾವ ರೀತಿಯ ಒತ್ತಡವೂ ಇರಲಿಲ್ಲ. ಸ್ಥಳೀಯವಾಗಿಯೂ ಸಂಪೂರ್ಣ ಬೆಂಬಲ ಇತ್ತು. ಈ ಕಾರಣಕ್ಕಾಗಿ ರಾಜೀನಾಮೆ ಪತ್ರದಲ್ಲೇ ಎಲ್ಲರ ಕ್ಷಮೆ ಕೋರಲಾಗಿದೆ. ಅಧಿಕಾರಿಗಳು ಕೆಲಸ ಮಾಡಲು ಕರ್ನಾಟಕಕ್ಕಿಂತ ಉತ್ತಮ ರಾಜ್ಯ ಸಿಗುವುದಿಲ್ಲ’ ಎಂದು ತಿಳಿಸಿದರು.

* ಭೌಗೋಳಿಕವಾಗಿ ದೂರದ ಪ್ರದೇಶದಲ್ಲಿ ಈಗ ನಡೆಯುತ್ತಿರುವ ಘಟನೆಗಳು ನಾಳೆ ನನ್ನ ಮನೆ ಬಾಗಿಲಿನಲ್ಲೂ ನಡೆಯಬಹುದು. ಇದು ನನ್ನನ್ನು ಕಳವಳಕ್ಕೆ ದೂಡಿದೆ

-ಸಸಿಕಾಂತ್‌ ಸೆಂಥಿಲ್‌, ಜಿಲ್ಲಾಧಿಕಾರಿ

ದೀರ್ಘ ಕಾಲದ ಸಿದ್ಧತೆ

ಮಂಗಳವಾರ (ಸೆಪ್ಟೆಂಬರ್‌ 3) ರಜೆ ಮೇಲೆ ತೆರಳಿದ್ದ ಸೆಂಥಿಲ್ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಆರ್‌. ಸೆಲ್ವಮಣಿ ಅವರಿಗೆ ಪ್ರಭಾರ ವಹಿಸಿದ್ದರು. ಮಂಗಳವಾರದಂದೇ ಕುಟುಂಬದವರನ್ನು ತಮಿಳುನಾಡಿಗೆ ಕಳುಹಿಸಿದ್ದರು. ಆ ಬಳಿಕ ತಾವು ಕೂಡ ಮಂಗಳೂರಿನಿಂದ ಹೊರ ಹೋಗಿದ್ದರು. ಶುಕ್ರವಾರ ಬೆಳಿಗ್ಗೆ ರಾಜೀನಾಮೆ ಸಲ್ಲಿಸಿದ ಬಳಿಕ ಸಹೋದ್ಯೋಗಿಗಳ ಜೊತೆ ಈ ವಿಷಯ ಹಂಚಿಕೊಂಡಿದ್ದಾರೆ.

 

Post Comments (+)