ಶುಕ್ರವಾರ, ಡಿಸೆಂಬರ್ 2, 2022
20 °C

ಸುರತ್ಕಲ್‌ ಜಂಕ್ಷನ್‌ಗೆ ಸಾವರ್ಕರ್‌ ಹೆಸರು: ಪ್ರಸ್ತಾವ ಅಂಗೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಸುರತ್ಕಲ್ ಜಂಕ್ಷನ್‌ ವೃತ್ತಕ್ಕೆ ವೀರ ಸಾವರ್ಕರ್‌ ಹೆಸರನ್ನು ಇಡುವ ಪ್ರಸ್ತಾವವನ್ನು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಸ್ಥಿರೀಕರಿಸಲಾಯಿತು.

ಈ ವೃತ್ತಕ್ಕೆ ಸಾವರ್ಕರ್ ಹೆಸರು ಇಡಲು ಕ್ರಮವಹಿಸುವಂತೆ ಶಾಸಕ ವೈ.ಭರತ ಶೆಟ್ಟಿ ಮನವಿ ಸಲ್ಲಿಸಿದ್ದರು. 2021ರ ಅ. 3ರಂದು ನಡೆದಿದ್ದ ಸಭೆಯಲ್ಲಿ ಪರಿಷತ್ತಿನ ಸಭೆಯಲ್ಲಿ ಈ ಕುರಿತ ಕಾರ್ಯಸೂಚಿಯನ್ನು ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿಯ ವರದಿಗಾಗಿ ಕಳುಹಿಸಿಕೊಡಲು ನಿರ್ಧರಿಸಲಾಗಿತ್ತು. ಆಗ ಪಾಲಿಕೆ ಸದಸ್ಯರಾದ ಎ.ಸಿ.ವಿನಯರಾಜ್‌, ಶಂಶಾದ್‌ ಅಬೂಬಕ್ಕರ್‌, ಮುನೀಬ್‌ ಬೆಂಗ್ರೆ ಹಾಗೂ ವರುಣ್‌ ಚೌಟ ಅವರು ಈ ಪ್ರಸ್ತಾವನೆಯನ್ನು ವಿರೋಧಿಸಿದ್ದರು. ಸ್ಥಾಯಿ ಸಮಿತಿಯು ಸ್ಥಳ ಪರಿಶೀಲನೆ ನಡೆಸಿ ಈ ಪ್ರಸ್ತಾವನೆಗೆ ಸಹಮತ ಸೂಚಿಸಿ ಪರಿಷತ್ತಿನ ಸಭೆಯಲ್ಲಿ ಮಂಡಿಸಿತ್ತು. ಸಮಿತಿಯಲ್ಲಿದ್ದ ಪಾಲಿಕೆ ಸದಸ್ಯರಾದ ಕೇಶವ ಹಾಗೂ ಶಂಶುದ್ದೀನ್‌ ಈ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. 

ಪಾಲಿಕೆಯು ಈ ಪ್ರಸ್ತಾವನೆ ಬಗ್ಗೆ ದಿನಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ, ಸಾರ್ವಜನಿಕರಿಂದ ಆಕ್ಷೇಪಣೆ ಅಥವಾ ಸಲಹೆಗಳನ್ನು ಆಹ್ವಾನಿಸಿ ಬಳಿಕ ಅಂತಿಮ ನಿರ್ಣಯ ಕೈಗೊಳ್ಳಲಿದೆ.

ಕೆಲ ತಿಂಗಳುಗಳ ಹಿಂದೆ ಈ ಜಂಕ್ಷನ್‌ನಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸಲಾಗಿತ್ತು. ಇದಕ್ಕೆ ಕೆಲವು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಪಾಲಿಕೆ ಅಧಿಕಾರಿಗಳು ಭಾವಚಿತ್ರವನ್ನು ತೆರವುಗೊಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು