ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಜಾಗೃತಿ- ಎಸ್ಪಿ ಋಷಿಕೇಶ್‌ ಸೋನಾವಣೆ

ಎಸ್‌ಸಿ, ಎಸ್‌ಟಿ ಕುಂದುಕೊರತೆ ಸಭೆ
Last Updated 30 ಮಾರ್ಚ್ 2022, 16:02 IST
ಅಕ್ಷರ ಗಾತ್ರ

ಮಂಗಳೂರು: ಶಾಲೆ–ಕಾಲೇಜುಗಳ ವಿದ್ಯಾರ್ಥಿಗಳಿಗೆ ಲೈಂಗಿಕ ದೌರ್ಜನ್ಯ ತಡೆಯ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ್‌ ಭಗವಾನ್‌ ಸೋನಾವಣೆ ಹೇಳಿದರು.

ಇಲ್ಲಿನ ಎಸ್ಪಿ ಕಚೇರಿಯಲ್ಲಿ ಬುಧವಾರ ನಡೆದ ಎಸ್‌ಸಿ, ಎಸ್‌ಟಿ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಖಂಡ ಅಶೋಕ್‌ ನಾಯ್ಕ್‌ ಮಾತನಾಡಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಪೋಕ್ಸೊ ಕಾಯ್ದೆ, ಲೈಂಗಿಕ ದೌರ್ಜನ್ಯ ತಡೆಯುವ ಕುರಿತು ದಲಿತ ಕಾಲೊನಿಗಳಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಈಗಾಗಲೇ ಶಾಲಾ–ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು ಎಂದರು.

ಶೇಖರ್‌ ಲಾಯಿಲ್‌ ಮಾತನಾಡಿ, ಕನ್ಯಾಡಿಯ ದಿನೇಶ್‌ ಕೊಲೆ ಪ್ರಕರಣದ ತನಿಖೆಯನ್ನು ಧರ್ಮಸ್ಥಳ ಪೊಲೀಸರು ಸರಿಯಾಗಿ ನಡೆಸುತ್ತಿಲ್ಲ. ಆರೋಪಿಗೆ ಜಾಮೀನು ಸಿಕ್ಕಿದೆ. ಈ ಜಾಮೀನು ರದ್ದುಗೊಳಿಸಬೇಕು. ದಿನೇಶ್ ಕುಟುಂಬಕ್ಕೆ ಸರ್ಕಾರ ₹25 ಲಕ್ಷ ಪರಿಹಾರ ನೀಡಬೇಖು ಎಂದು ಆಗ್ರಹಿಸಿದರು. ಇನ್ನೊಬ್ಬ ಮುಖಂಡ ಆನಂದ್‌ ಮಾತನಾಡಿ, ದಿನೇಶ್ ಕುಟುಂಬಕ್ಕೆ ಬೆದರಿಕೆ ಕರೆಗಳು ಬರುತ್ತಿದ್ದು, ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದರು.

ಇದಕ್ಕೆ ಉತ್ತರಿಸಿದ ಎಸ್ಪಿ ಋಷಿಕೇಶ್‌ ಸೋನಾವಣೆ, ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಲು ಬ್ಯಾಂಕ್‌ಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕೆಲ ಮುಖಂಡರು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಲೀಡ್‌ ಬ್ಯಾಂಕ್ ಮ್ಯಾನೇಜರ್‌ ಪ್ರವೀಣ್‌. ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ದೇಶನದ ಪ್ರಕಾರ, ಅರ್ಜಿಗಳನ್ನು 30 ದಿನಗಳಲ್ಲಿ ವಿಲೇವಾರಿ ಮಾಡಬೇಕು. ಯಾವುದೇ ತೊಂದರೆ ಆದಲ್ಲಿ ಬ್ಯಾಂಕಿನ ಮೇಲಧಿಕಾರಿಗಳ ಗಮನಕ್ಕೆ ತರಬಹುದು. ಅರ್ಹರಿಗೆ ಸಾಲ ನೀಡಲು ನಿರಾಕರಿಸಿದಲ್ಲಿ, ಆನ್‌ಲೈನ್‌ ಮೂಲಕ ಒಂಬುಡ್ಸ್‌ಮನ್‌ಗೆ ದೂರು ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT