ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಟರಿಗೆ ಅವಮಾನ: ಚೈತ್ರ ಕುಂದಾಪುರ ವಿರುದ್ಧ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಆರೋಪ

Last Updated 19 ಅಕ್ಟೋಬರ್ 2021, 14:51 IST
ಅಕ್ಷರ ಗಾತ್ರ

ಮಂಗಳೂರು: ‘ಸುರತ್ಕಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಚೈತ್ರಾ ಕುಂದಾಪುರ ಎನ್ನುವವರು ಬಂಟ ಸಮುದಾಯದ ಹೆಣ್ಣಿನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಆಕೆ ಈ ಆರೋಪವನ್ನು ಸಾಬೀತುಪಡಿಸಲಿ ಇಲ್ಲವಾದಲ್ಲಿ, ಜಿಲ್ಲೆಯ ಮಹಿಳೆಯರ ಕ್ಷಮೆ ಕೇಳಲಿ’ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಆಗ್ರಹಿಸಿದರು.

ಮಂಗಳವಾರ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಂಟ ಸಮುದಾಯಕ್ಕೆ ಸೇರಿದವರು ಅವರದೇ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿರುವಾಗ, ಚೈತ್ರಾ ಮಾತನಾಡಿರುವ ಕ್ಷೇತ್ರದ ಶಾಸಕರು ಕೂಡ ಅದೇ ಸಮುದಾಯಕ್ಕೆ ಸೇರಿದವರಾಗಿರುವಾಗ, ಅವರೇನಾದರೂ ಈ ಬಗ್ಗೆ ಮಾತನಾಡಲು ಪ್ರೇರೇಪಿಸಿದರೇ ಎಂಬುದನ್ನು ಚೈತ್ರಾ ಸ್ಪಷ್ಟಪಡಿಸಬೇಕು’ ಎಂದರು.

‘ಹಿಂದೆ ವರದಕ್ಷಿಣೆ ಪಿಡುಗು ಜಾಸ್ತಿ ಇದ್ದಾಗ ಬಹಳಷ್ಟು ಹೆಣ್ಣು ಮಕ್ಕಳು ಮದುವೆ ಆಗದೆ ಬಾಕಿಯಾಗಿದ್ದಾರೆ. ಅಂತಹವರಿಗೆ ಅವಮಾನ ಮಾಡಿದಂತಾಗಿದೆ. ನೀವು ಯಾವಾಗ ಮದುವೆ ಆಗುತ್ತೀರಿ, ಎಷ್ಟು ವರ್ಷದೊಳಗೆ ಆಗುತ್ತೀರಿ ಎನ್ನುವುದನ್ನು ಹೇಳಿ. ಇನ್ನೊಬ್ಬರ ಮಕ್ಕಳ ಬಗ್ಗೆ ನೀವು ನಿರ್ಧರಿಸುವ ಅಗತ್ಯವಿಲ್ಲ. ನಿಮ್ಮ ಬಳಿ ಈ ಮಾತನ್ನು ಯಾರು ಹೇಳಿಸಿದ್ದು ಎಂದು ಬಹಿರಂಗಗೊಳಿಸಿ. ಹಿಂದೂ ಹೆಣ್ಣು ಮಗಳು ಇನ್ನೊಬ್ಬ ಹೆಣ್ಣಿಗೆ ಆರೋಪ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ’ ಎಂದು ತಿರುಗೇಟು ನೀಡಿದರು.

‘ಬಿಲ್ಲವ ಸಮುದಾಯದ ಪೂಜನೀಯ ಕೋಟಿ–ಚನ್ನಯರ ಕೈಯಲ್ಲಿದ್ದ ಆಯುಧ ಸುರ್ಯವನ್ನು ತಲವಾರಿಗೆ ಹೋಲಿಸಿ ಮಾತನಾಡಿದ್ದೀರಿ. ನಿಮಗೆ ಕರಾವಳಿ ಮಣ್ಣಿನ ಗುಣವೇ ಗೊತ್ತಿಲ್ಲ’ ಎಂದು ಆರೋಪಿಸಿದ ಶಕುಂತಳಾ ಶೆಟ್ಟಿ, ಅದೇ ಸಮುದಾಯಕ್ಕೆ ಸೇರಿದ ಇಬ್ಬರು ಸಚಿವರು ಈ ಬಗ್ಗೆ ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.

‘ಮಕ್ಕಳು ದಾರಿ ತಪ್ಪುತ್ತಿದ್ದಾರೆಂಬ ಅನುಮಾನ ಇದ್ದರೆ ಅವರ ಹೆತ್ತವರಿಗೆ ತಿಳಿಸಿ, ಮಕ್ಕಳ ಮೇಲೆ ನಿಗಾ ಇರಿಸಲು ತಿಳಿಸಿ. ತಪ್ಪು ಕಂಡಲ್ಲಿ ಪೊಲೀಸರಿಗೆ ಮಾಹಿತಿ ನೀಡಿ. ಅದನ್ನು ಬಿಟ್ಟು ಲವ್ ಜಿಹಾದ್ ಹೆಸರಿನಲ್ಲಿ ಅನೈತಿಕ ಪೊಲೀಸ್‌ಗಿರಿ ಪ್ರದರ್ಶಿಸಬೇಡಿ’ ಎಂದು ಕಿವಿಮಾತು ಹೇಳಿದರು.

ಅನೈತಿಕ ಪೊಲೀಸ್‌ಗಿರಿಯನ್ನು ಪ್ರಶ್ನಿಸುವ ಮಹಿಳೆಯರನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಅವಮಾನಿಸುವುದು ಹಿಂದೂ ಧರ್ಮದ ಸಂಸ್ಕೃತಿಯಲ್ಲ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೋ ಹೇಳಿದರು.

ಪ್ರಮುಖರಾದ ಮಮತಾ ಗಟ್ಟಿ, ಅಪ್ಪಿ, ಮಲ್ಲಿಕಾ ಪಕ್ಕಳ, ಸುರೇಖಾ ಚಂದ್ರಹಾಸ್, ಚಂದ್ರಕಲಾ ಜೋಗಿ, ತನ್ವೀರ್, ಗೀತಾ ಅತ್ತಾವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT