ಭಾನುವಾರ, ಜುಲೈ 3, 2022
23 °C
₹3,164 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಿದ ಕೇಂದ್ರ ಸಚಿವ ನಿತಿನ್‌ ಗಡ್ಕರಿ

ಶಿರಾಡಿ ಸುರಂಗ ಮಾರ್ಗ: ಶೀಘ್ರ ಡಿಪಿಆರ್ ಸಿದ್ಧ ಎಂದ ಸಚಿವ ನಿತಿನ್‌ ಗಡ್ಕರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಶಿರಾಡಿ ಘಾಟಿ ಈ ಮೂಲಕ ಬೆಂಗಳೂರನ್ನು ಸಂಪರ್ಕಿಸುವ ರಸ್ತೆಯು ಈ ಭಾಗದ ಜೀವನಾಡಿಯಾಗಿದ್ದು, ಇದರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸದ್ಯದ ಚತುಷ್ಪಥ ರಸ್ತೆಯ ಜೊತೆಗೆ, ಪ್ರತ್ಯೇಕವಾದ ಶಿರಾಡಿ ಸುರಂಗ ಮಾರ್ಗ ನಿರ್ಮಾಣಕ್ಕೂ ಶೀಘ್ರ ಡಿಪಿಆರ್ ತಯಾರಿಸಲಾಗುವುದು ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದರು.

ನಗರದ ಕುಲಶೇಖರದ ಕೋರ್ಡೆಲ್ ಹಾಲ್‌ನಲ್ಲಿ ಸೋಮವಾರ ಸುಮಾರು ₹3,164 ಕೋಟಿ ವೆಚ್ಚದ 15 ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಇದನ್ನೂ ಓದಿ: 

ಶಿರಾಡಿ ಸುರಂಗ ಮಾರ್ಗ ನಿರ್ಮಾಣದಿಂದ ಇಲ್ಲಿನ ಬಂದರು ವಹಿವಾಟು ಹೆಚ್ಚಾಗಲಿದೆ. ಇದಕ್ಕಾಗಿ ಈಗಾಗಲೇ 7 ಸುರಂಗ, 6 ಸೇತುವೆಗಳನ್ನು ಒಳಗೊಂಡ ₹14 ಸಾವಿರ ಕೋಟಿ ವೆಚ್ಚದ ಸುರಂಗ ಮಾರ್ಗ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗಿದೆ. ಶೀಘ್ರ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲಾಗುವುದು. ರಾಜ್ಯ ಸರ್ಕಾರದಿಂದ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅನುಮತಿ ದೊರಕಿಸಿಕೊಟ್ಟಲ್ಲಿ, ಯೋಜನೆಯ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ನಿರಂತರವಾಗಿ ಏಳು ವರ್ಷಗಳಿಂದ ಹೆದ್ದಾರಿ, ಹಡಗು, ಲಘು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ನನ್ನ ಅವಧಿಯಲ್ಲಿ ₹50 ಲಕ್ಷ ಕೋಟಿ ಮೊತ್ತದ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದೇನೆ ಎಂದರು.

ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಇದರಿಂದ ಈ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ದೂರವಾಗಲಿದ್ದು, ಸರ್ಕಾರಕ್ಕೂ ಆದಾಯ ಬರಲಿದೆ. ಈ ಹಿನ್ನೆಲೆಯಲ್ಲಿ ಸಾಗರಮಾಲಾ ಮಾದರಿಯಲ್ಲಿ ಪರ್ವತಮಾಲಾ ಯೋಜನೆಯನ್ನು ರೂಪಿಸಲಾಗಿದ್ದು, ಕರ್ನಾಟಕ ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಬಂದಲ್ಲಿ, ಶೀಘ್ರ ಮಂಜೂರಾತಿ ನೀಡಲಾಗುವುದು ಎಂದು ತಿಳಿಸಿದರು.

ಸಂಪರ್ಕ ಕ್ರಾಂತಿ: ರಸ್ತೆ ಸಂಪರ್ಕ ಸರಿ ಇದ್ದರೆ, ದೇಶದ ಆರ್ಥಿಕತೆ, ಸಾಂಸ್ಕೃತಿಕ ಬಾಂಧವ್ಯ ವೃದ್ಧಿಯಾಗುತ್ತದೆ. ಇದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರ್ಕಾರ ಏಳು ವರ್ಷಗಳಲ್ಲಿ ಸಂಪರ್ಕ ಕ್ರಾಂತಿ ಮಾಡಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ್ ಜೋಷಿ ಹೇಳಿದರು.

2014 ರವರೆಗೆ ಈ ದೇಶದಲ್ಲಿ ಕೇವಲ 91 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಇತ್ತು. ಏಳು ವರ್ಷಗಳಲ್ಲಿ ಈ ಸಂಖ್ಯೆ 1.41 ಲಕ್ಷ ಕಿ.ಮೀ.ಗೆ ಹೆಚ್ಚಿದೆ. 2009 ರಿಂದ 2014 ರವರೆಗೆ ನಿತ್ಯ 2.7 ಕಿ.ಮೀ.ಯಿಂದ 10 ಕಿ.ಮೀ.ವರೆಗೆ ಕಾಮಗಾರಿ ನಡೆಯುತ್ತಿತ್ತು. ಆದರೆ, ಈಗ ಪ್ರತಿನಿತ್ಯ 38 ಕಿ.ಮೀ. ಹೆದ್ದಾರಿ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.

ರಾಜ್ಯಕ್ಕೆ 2004 ರಿಂದ 2014 ರವರೆಗೆ ₹8,809 ಕೋಟಿ ವೆಚ್ಚದ 1,152 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಕಲ್ಪಿಸಲಾಗಿದೆ. ಆದರೆ, 2014ರಿಂದ 2021 ರವರೆಗೆ ಒಟ್ಟು ₹42 ಸಾವಿರ ಕೋಟಿ ವೆಚ್ಚದಲ್ಲಿ 181 ಯೋಜನೆಗಳ ಮೂಲಕ 35 ಸಾವಿರ ಕಿ.ಮೀ. ಹೆದ್ದಾರಿಯನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಭಾರತಮಾಲಾ ಯೋಜನೆಯಡಿ 24 ಸಾವಿರ ಕಿ.ಮೀ. ರಸ್ತೆ ಕಾಮಗಾರಿ ಕೈಗೊಂಡಿದ್ದು, ಈ ಪೈಕಿ ಈಗಾಗಲೇ 19,400 ಕಿ.ಮೀ. ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಸಂಸದರಾದ ಬಿ.ವೈ. ರಾಘವೇಂದ್ರ, ಮುನಿಸ್ವಾಮಿ, ಸಚಿವರಾದ ವಿ. ಸುನಿಲ್‌ಕುಮಾರ್‌, ಕೋಟ ಶ್ರೀನಿವಾಸ ಪೂಜಾರಿ, ಎಸ್‌. ಅಂಗಾರ, ಮೇಯರ್‌ ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಸುಮಂಗಲಾ ರಾವ್, ಶಾಸಕರಾದ ಡಿ.ವೇದವ್ಯಾಸ ಕಾಮತ್‌, ಡಾ.ವೈ.ಭರತ್‌ ಶೆಟ್ಟಿ, ಸಂಜೀವ ಮಠಂದೂರು, ರಾಜೇಶ್‌ ನಾಯ್ಕ್‌, ಉಮಾನಾಥ ಕೋಟ್ಯಾನ್‌, ಹರೀಶ್‌ ಪೂಂಜ, ರೂಪಾಲಿ ನಾಯಕ್‌, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್‌ಸಿಂಹ ನಾಯಕ್‌, ಮಂಜುನಾಥ ಭಂಡಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್‌ ಹೆಗ್ಡೆ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ವೇದಿಕೆಯಲ್ಲಿದ್ದರು.

ಜಲಶಕ್ತಿ ಅಭಿವೃದ್ಧಿಗೆ ಆದ್ಯತೆ

ಕೇಂದ್ರ ಸರ್ಕಾರ ಹೆದ್ದಾರಿ ಪಕ್ಕದ ಜಲಮೂಲಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲು ಜಲಶಕ್ತಿ ಯೋಜನೆ ರೂಪಿಸಿದ್ದು, ಕರಾವಳಿ ಭಾಗದ ನದಿಗಳಿಂದ ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗುವ ನೀರಿನ ಸದ್ಬಳಕೆಗಾಗಿ ರಾಜ್ಯದ ಕರಾವಳಿಯಲ್ಲೂ ಈ ಯೋಜನೆಗೆ ವಿಶೇಷ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೈಪಾಸ್, ವರ್ತುಲ ರಸ್ತೆಗಳ ನಿರ್ಮಾಣಕ್ಕೆ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಕೆಲ ಸಲಹೆಗಳನ್ನು ನೀಡಿದ್ದಾರೆ. ಸರ್ಕಾರಿ ಭೂಮಿಯನ್ನು ಉಚಿತವಾಗಿ ನೀಡಬೇಕು. ಸಿಮೆಂಟ್‌, ಕಬ್ಬಿಣಕ್ಕೆ ಜಿಎಸ್‌ಟಿ ವಿನಾಯಿತಿ ಹಾಗೂ ಮರಳು, ಮಣ್ಣಿಗೆ ರಾಜಸ್ವ ವಿನಾಯಿತಿ ನೀಡಿದಲ್ಲಿ, ರಾಜ್ಯ ಸರ್ಕಾರದಿಂದ ಶೇ 25 ರಷ್ಟು ಅನುದಾನ ನೀಡಬೇಕಾಗುತ್ತದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಜೊತೆಗೆ ಶೀಘ್ರದಲ್ಲಿಯೇ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಸುರತ್ಕಲ್‌ ಟೋಲ್‌: ಶೀಘ್ರ ಸಭೆ

ನಗರದ ಸುರತ್ಕಲ್‌ನಲ್ಲಿರುವ ಟೋಲ್‌ಗೇಟ್‌ ರದ್ದತಿ ಹಾಗೂ ವಿಲೀನದ ಕುರಿತು ಸಂಸದ ನಳಿನ್‌ಕುಮಾರ್ ಕಟೀಲ್‌ ಈಗಾಗಲೇ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಶೀಘ್ರ ನವದೆಹಲಿಯಲ್ಲಿ ಸಭೆ ಕರೆದು ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಿಳಿಸಿದರು.

ಟೋಲ್‌ಗೇಟ್‌ ರದ್ದತಿಯ ಕುರಿತು ಕೆಲವು ಕಾನೂನಾತ್ಮಕ ಸಮಸ್ಯೆಗಳಿವೆ. ಅದಕ್ಕಾಗಿ ಯಾವುದಾದರೂ ಮಾರ್ಗೋಪಾಯ ಕಂಡು ಕೊಳ್ಳಲಾಗುವುದು. ಸುರತ್ಕಲ್‌ ಟೋಲ್ ರದ್ದತಿಯ ಬಹುದಿನದ ಬೇಡಿಕೆಯನ್ನು ಈಡೇರಿಸಲಾಗುವುದು ಎಂದರು.

ಇದರ ಜೊತೆಗೆ ನಗರಕ್ಕೆ ಅಗತ್ಯವಾಗಿರುವ ನಂತೂರು ಫ್ಲೈಓವರ್‌ ನಿರ್ಮಾಣ ಹಾಗೂ ವರ್ತುಲ ರಸ್ತೆ ನಿರ್ಮಾಣಕ್ಕೂ ಮಂಜೂರಾತಿ ನೀಡಲಾಗುವುದು ಎಂದು ಹೇಳಿದರು.

‘ಹೆದ್ದಾರಿ ಕಾಮಗಾರಿಗೆ ಮಾಂತ್ರಿಕ ವೇಗ’

ಆಮೆಗತಿಯಲ್ಲಿದ್ದ ಹೆದ್ದಾರಿ ಕಾಮಗಾರಿಗಳಿಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ನೇತೃತ್ವದಲ್ಲಿ ಕುದುರೆಯ ವೇಗ ನೀಡಲಾಗಿದೆ. ಮಾಂತ್ರಿಕ ವೇಗ ನೀಡುವ ಮೂಲಕ ವಾಜಪೇಯಿ ಅವರ ಕನಸಿಗೆ ರೆಕ್ಕೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಗಡ್ಕರಿ ಅವರು ನೀಡಿದ ಕೊಡುಗೆ ಅಪಾರ ಎಂದು ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಹೇಳಿದರು.

ಬೆಂಗಳೂರು–ಮಂಗಳೂರು ಹೆದ್ದಾರಿ, ಸಾಣೂರು–ಬಿಕರ್ನಕಟ್ಟೆ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕೂಳೂರು ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ. 2014 ರ ನಂತರ ನಗರಕ್ಕೆ ಸ್ಮಾರ್ಟ್‌ ಸಿಟಿ, ಅಮೃತ ಯೋಜನೆಗಳನ್ನು ಕೇಂದ್ರ ಸರ್ಕಾರ ನೀಡಿದೆ. ಪ್ಲಾಸ್ಟಿಕ್‌ ಪಾರ್ಕ್‌, ಕರಾವಳಿ ಕಾವಲು ಪಡೆಯ ತರಬೇತಿ ಕೇಂದ್ರಗಳಿಗೆ ಅವಕಾಶ ಮಾಡಿಕೊಟ್ಟಿದೆ ಎಂದರು.

****

2024 ರ ಡಿಸೆಂಬರ್‌ ಒಳಗೆ ಭಾರತದ ರಸ್ತೆಗಳ ಅಭಿವೃದ್ಧಿಯನ್ನು ಅಮೆರಿಕದ ರಸ್ತೆಗಳಿಗೆ ಸಮನಾಗಿ ಮಾಡಲಾಗುವುದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯಪ್ರವೃತವಾಗಿದೆ.

–ನಿತಿನ್‌ ಗಡ್ಕರಿ, ಕೇಂದ್ರ ಹೆದ್ದಾರಿ ಸಚಿವ

ನಳಿನ್‌ಕುಮಾರ್ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದು, ಪಕ್ಷದ ಸಂಘಟನೆ ಮಾಡುತ್ತಿದ್ದಾರೆ. ಅವರು ಕೇಳಿದ ಕಾಮಗಾರಿಗೆ ಮಂಜೂರಾತಿ ನೀಡಿದಲ್ಲಿ, ಪಕ್ಷದ ಬಲವರ್ಧನೆಗೆ ಅನುಕೂಲ ಆಗಲಿದೆ.

–ಪ್ರಲ್ಹಾದ ಜೋಷಿ, ಕೇಂದ್ರ ಸಂಸದೀಯ ವ್ಯವಹಾರ ಸಚಿವ

ರಾಜ್ಯ ಸರ್ಕಾರ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ. ಈ ಭಾಗದ ಜನರ ಅಗತ್ಯಗಳು, ಜೀವನ ಮಟ್ಟ ಸುಧಾರಣೆಗೆ ಬೇಕಿರುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು.

–ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ನಂತೂರು ಫ್ಲೈಓವರ್‌, ವರ್ತುಲ ರಸ್ತೆ ನಿರ್ಮಾಣ, ಮಾಣಿ–ಮಡಿಕೇರಿ ಚತುಷ್ಪಥ ಕಾಮಗಾರಿ ಹಾಗೂ ಸುರತ್ಕಲ್‌ ಟೋಲ್‌ಗೇಟ್‌ ರದ್ದತಿಗೆ ಕೇಂದ್ರ ಸಚಿವರು ಅಗತ್ಯ ಕ್ರಮ ಕೈಗೊಳ್ಳಬೇಕು.

–ನಳಿನ್‌ಕುಮಾರ್ ಕಟೀಲ್‌, ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

****

₹2802 ಕೋಟಿ ವೆಚ್ಚದಲ್ಲಿ 7 ರಸ್ತೆಗಳ ಕಾಮಗಾರಿಗಳ ಶಂಕು ಸ್ಥಾಪನೆ

₹174.94 ಕೋಟಿ ವೆಚ್ಚದಲ್ಲಿ 9 ಸೇತುವೆಗಳ ನಿರ್ಮಾಣಕ್ಕೆ ಶಿಲಾನ್ಯಾಸ

₹177.22 ಕೋಟಿ ವೆಚ್ಚದ 2 ರಸ್ತೆಗಳು, ₹8.8 ಕೋಟಿ ವೆಚ್ಚದ 3 ಸೇತುವೆ ಉದ್ಘಾಟನೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು