ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅನ್ಯ ಧರ್ಮಗಳನ್ನು ಗೌರವಿಸಿದ್ದ ಛತ್ರಪತಿ: ಗಣಪಯ್ಯ ಭಟ್‌

Published 20 ಫೆಬ್ರುವರಿ 2024, 3:04 IST
Last Updated 20 ಫೆಬ್ರುವರಿ 2024, 3:04 IST
ಅಕ್ಷರ ಗಾತ್ರ

ಮಂಗಳೂರು: ‘ಛತ್ರಪತಿ ಶಿವಾಜಿ ಹಿಂದೂ ಸಾಮ್ರಾಜ್ಯ ಸ್ಥಾಪನೆಗಾಗಿ ನಡೆಸಿದ ಯುದ್ಧಗಳು ಮುಸ್ಲಿಮರ ವಿರುದ್ಧವಲ್ಲ; ಕೇವಲ ಮುಸ್ಲಿಂ ಅರಸರ ವಿರುದ್ಧ. ಆತ ತನ್ನ ಧರ್ಮದ ಜೊತೆಗೆ ಇತರ ಧರ್ಮಗಳನ್ನೂ ಗೌರವಿಸಿದ್ದ ವ್ಯಕ್ತಿ’ ಎಂದು ಇತಿಹಾಸ ತಜ್ಞ ಪುಂಡಿಕಾಯಿ ಗಣಪಯ್ಯ ಭಟ್‌ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ (ಕೆಕೆಎಂಪಿ) ಹಾಗೂ ಆರ್ಯ ಯಾನೆ ಮರಾಠ ಸಮಾಜ ಸಂಘದ‌ ಮಂಗಳೂರು ಘಟಕ ಆಶ್ರಯದಲ್ಲಿ ಇಲ್ಲಿ ಸೋಮವಾರ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಮ‌ಹಾರಾಜರ 397ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಿವಾಜಿ ಹಿಂದೂ ಸಾಮ್ರಾಜ್ಯ ಸಂಸ್ಥಾಪಕನಾಗಿದ್ದರೂ ಮುಸ್ಲಿಮರನ್ನು ಆದರದಿಂದ ಕಂಡಿದ್ದ. ಯಾವ ಧರ್ಮದವರಿಗೂ ಅನ್ಯಾಯ ಆಗಬಾರದು ಎಂಬ ಆಶಯ ಹೊಂದಿದ್ದ.  ರಾಜ್ಯಗಳ ಮೇಲೆ ದಾಳಿ ನಡೆಸುವ ವೇಳೆ ಯಾವುದೇ ಮಸೀದಿಗೆ, ಕುರಾನ್‌ಗೆ ಹಾಗೂ ಮುಸ್ಲಿಂ ಮಹಿಳೆಯರಿಗೆ ಅಪಮಾನ ಅಗಬಾರದು ಎಂದು‌ ಶಿವಾಜಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದ. ಆತನ ಮೂವರು ಅಂಗರಕ್ಷಕರಲ್ಲಿ ಒಬ್ಬಾತ ಮುಸ್ಲಿಂ. ನಾವು ಈಗಿನ‌ ಪರಿಸ್ಥಿತಿಗಳಿಗೆ ಅನುಗುಣವಾದ ಮಾನದಂಡಗಳ ಆಧಾರದಲ್ಲಿ ಇತಿಹಾಸದ‌ ವ್ಯಕ್ತಿಗಳ‌ ಸಾಧನೆ‌ ಅಳೆಯುತ್ತೇವೆ.‌ ಅದು ಸರಿಯಲ್ಲ. ಇತಿಹಾಸದಲ್ಲಿ ಆಯಾ ಕಾಲಘಟ್ಟದ್ದಲಿದ್ದ ಸ್ಥಿತಿಗೆ ಅನುಗುಣವಾಗಿ ವ್ಯಕ್ತಿಯ ಸಾಧನೆಯನ್ನು ಅರ್ಥಮಾಡಿಕೊಳ್ಳಬೇಕು’ ಎಂದರು.‌

‘ಮಹತ್ವಾಕಾಂಕ್ಷೆಯ ಸಾಧನೆಗೆ, ಸಾಹಸಗಳ ಮೂರ್ತರೂಪ ಶಿವಾಜಿ.  ಆತ ಯಾವುದೇ ಜಾತಿ ಜನಾಂಗಕ್ಕೆ‌, ಪ್ರದೇಶಕ್ಕೆ, ವರ್ಗಕ್ಕೆ ಸೀಮಿತ ವ್ಯಕ್ತಿ ಅಲ್ಲ. ಕೇವಲ 50 ವರ್ಷಗಳಲ್ಲಿ ಯಾವ ರಾಜರೂ ಸಾಧಿಸಲಾಗದ್ದನ್ನು ಶಿವಾಜಿ ಸಾಧಿಸಿ ತೋರಿಸಿದ್ದ. ಆತನ ‌ಆಡಳಿತ, ದೇಶ ರಕ್ಷಣೆಗಾಗಿ ಅನುಸರಿಸಿದ ಗೆರಿಲ್ಲಾ ತಂತ್ರಗಾರಿಕೆ, ಆಡಳಿತ ಸುಧಾರಣೆ ನೀತಿಗಳು, ಎಲ್ಲರಿಗೂ ಸಮಾನ‌ ಅವಕಾಶ ಸಿಗಬೇಕೆಂಬ ಆಶಯಗಳು ಇಂದಿಗೂ ಮಾದರಿ’ ಎಂದರು.

ಕೆಕೆಎಂಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಎ.ವಿ.ಸುರೇಶ್ ರಾವ್‌ ಕರ್ಮೋರೆ, ‘ಮರಾಠ ಸಮುದಾಯದವರನ್ನು ಪ್ರವರ್ಗ 3ಬಿಯಿಂದ 2 ಎಗೆ ಸೇರ್ಪಡೆ ಮಾಡಬೇಕಿದೆ. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಲು ಶೀಘ್ರವೇ ರಾಜ್ಯ ಮಟ್ಟದ ಸಮಾವೇಶ ನಡೆಸಲಿದ್ದೇವೆ’ ಎಂದರು.‌

‘ಶಿವಾಜಿ ಅವರ ತಂದೆ ಷಹಾಜಿ ಅವರ ಸಮಾಧಿ ರಾಜ್ಯದ ಹುದುಗೆರೆ ಗ್ರಾಮದಲ್ಲಿದೆ. ರಾಷ್ಟ್ರೀಯ ಸ್ಮಾರಕ ಎಂದು ಘೋಷಣೆ ಮಾಡಿದ್ದರೂ, ಆ ತಾಣ ಅಭಿವೃದ್ಧಿ ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಆರ್ಯ ಯಾನೆ ಮರಾಠ ಸಮಾಜ ಸಂಘದ ಅಧ್ಯಕ್ಷ ವಾಮನ ವಾಗ್ಮಾನ್‌ ಮುಳ್ಳಂಗೋಡು, ‘ಶಿವಾಜಿ ವಂಶಸ್ಥರಾದ ನಾವು, ಅವರ ಆಶಯಗಳಿಗೆ ತಕ್ಕಂತೆ ಬದುಕಬೇಕು’ ಎಂದರು.

ಆರ್ಯ ಯಾನೆ ಮರಾಠ ಸಮಾಜ ಸಂಘದ ಕಾರ್ಯದರ್ಶಿ ಪ್ರದೀಪಚಂದ್ರ ಜಾಧವ್‌, ಕೆಕೆಎಂಪಿ ಮಹಿಳಾ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಭಾಗ್ಯ ಸುಧಾಕರ್‌, ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ನಾಗೇಶ್‌ ಪಾಟೀಲ, ಕೆಕೆಎಂಪಿ ಪದಾಧಿಕಾರಿ ಚಂದ್ರಶೇಖರ ಎ.ಬಿ. ಭಾಗವಹಿಸಿದ್ದರು. 
‌ಕನ್ನಡ‌ ಮತ್ತು ಸಂಸ್ಕೃತಿ‌ ಇಲಾಖೆ‌ ಸಹಾಯಕ‌ ನಿರ್ದೇಶಕ ಜಿ.ರಾಜೇಶ್ ಸ್ವಾಗತಿಸಿದರು. ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT