ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ದೇವಾಲಯಗಳಲ್ಲಿ ಶಿವನಾಮ ಸ್ಮರಣೆ

ಮಹಾಶಿವರಾತ್ರಿ: ಧರ್ಮಸ್ಥಳದಲ್ಲಿ ಶಿವಪಂಚಾಕ್ಷರಿ ಪಠಣಕ್ಕೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಚಾಲನೆ
Last Updated 12 ಮಾರ್ಚ್ 2021, 2:31 IST
ಅಕ್ಷರ ಗಾತ್ರ

ಮಂಗಳೂರು: ನಾಡಿನಾದ್ಯಂತ ಮಹಾಶಿವರಾತ್ರಿ ಹಬ್ಬವನ್ನು ಭಕ್ತಿ, ಸಡಗರದಿಂದ ಆಚರಿಸಲಾಗುತ್ತಿದ್ದು, ಜಿಲ್ಲೆಯಾದ್ಯಂತ ಶಿವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವರು.

ಶಿವನ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಅಭಿಷೇಕ, ಅರ್ಚನೆ, ಪೂಜೆಗಳು ನಡೆದವು. ಏಕಾಹ ಶಿವರಾತ್ರಿ ಭಜನೆ ಹಾಗೂ ಜಾಗರಣೆ ಕೂಡ ನಡೆಯಿತು.

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಭಕ್ತಾದಿಗಳು ದೇವರ ದರ್ಶನ ಪಡೆದರು. ಉಮಾಮಹೇಶ್ವರ ಹೋಮ, ಮಹಾರುದ್ರಾಭಿಷೇಕ, ಶತ ಸೀಯಾಳ ಅಭಿಷೇಕ, ರಾತ್ರಿ ವಿಷ್ಟು ಬಲಿ ಉತ್ಸವ ಹಾಗೂ ರಥೋತ್ಸವ, ಕೆರೆದೀಪ, ಮಂಟಪ ಪೂಜೆ ಜರುಗಿದವು.

ಕದ್ರಿ ಮಂಜುನಾಥ ದೇವಸ್ಥಾನ, ಮಂಗಳಾದೇವಿ ದೇವಾಸ್ಥಾನ, ಪುತ್ತೂರು ಮಹಾಲಿಂಗೇಶ್ವರ, ಉಪ್ಪಿ ನಂಗಡಿ ಸಹಸ್ರಲಿಂಗೇಶ್ವರ, ಪಂಜ ಪಂಚಲಿಂಗೇಶ್ವರ, ವಿಟ್ಲ ಪಂಚ ಲಿಂಗೇಶ್ವರ, ಬಂಟ್ವಾಳದ ಕಾರಿಂಜೇಶ್ವರ ಸೇರಿದಂತೆ ಸೇರಿದಂತೆ ಅನೇಕ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನೆ, ರಾತ್ರಿ ಜಾಗರಣೆ ನಡೆಯಿತು.

ಭಕ್ತರ ಗಡಣ

ಉಜಿರೆ: ಶಿವರಾತ್ರಿ ಪ್ರಯುಕ್ತ ಸಹಸ್ರಾರು ಮಂದಿ ಭಕ್ತರು ಧರ್ಮಸ್ಥಳಕ್ಕೆ ಬಂದು, ದೇವರ ದರ್ಶನ ಮಾಡಿ ವಿಶೇಷವಾಗಿ ಅಭಿಷೇಕ ಸೇವೆ ಮಾಡಿದರು.

ಮೂವತ್ತು ಸಾವಿರಕ್ಕೂ ಮಿಕ್ಕಿ ಪಾದ ಯಾತ್ರಿಗಳು ಬಂದಿದ್ದಾರೆ. ಗುರುವಾರ ರಾತ್ರಿ ಇಡಿ ಶಿವಪಂಚಾಕ್ಷರಿ ಪಠಣ ಭಜನೆ, ಪ್ರಾರ್ಥನೆ, ಧ್ಯಾನದೊಂದಿಗೆ ಜಾಗರಣೆ ನಡೆಯಿತು. ಶಂಖ, ಜಾಗಟೆ, ಕೊಂಬು, ಕಹಳೆ, ವೀರಗಾಸೆ, ಕರಗ, ಡೊಳ್ಳು ಕುಣಿತ ಮೊದಲಾದ ಜಾನಪದ ಕಲಾವಿದರು ರಾತ್ರಿ ಇಡೀ ನಾದಪ್ರಿಯ ಶಿವನಿಗೆ ಕಲಾಸೇವೆ ಮಾಡಿ ಧನ್ಯತೆಯನ್ನು ಹೊಂದಿದರು. ದೇವಸ್ಥಾನದ ಎದುರು ಭಕ್ತರು ರಚಿಸಿದ ಶಿವಲಿಂಗ ಭಕ್ತರ ಕಣ್ಮನ ಸೆಳೆಯುತ್ತದೆ.

ಭಕ್ತರಿಂದ ಲಿಂಗಾಭಿಷೇಕ

ಉಪ್ಪಿನಂಗಡಿ: ಇಲ್ಲಿನ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಗುರುವಾರ ನೇತ್ರಾವತಿ ನದಿ ಗರ್ಭದಲ್ಲಿರುವ ಉದ್ಭವ ಲಿಂಗಕ್ಕೆ ಸಾವಿರಾರು ಭಕ್ತರಿಂದ ಸ್ವಯಂ ಲಿಂಗಾಭಿಷೇಕ, ಪೂಜೆಗಳು ನಡೆದವು.

ಶಿವರಾತ್ರಿ ಪ್ರಯುಕ್ತ ನಸುಕಿನಿಂದಲೇ ಭಕ್ತರ ಸಮೂಹ ಉದ್ಭವ ಲಿಂಗವನ್ನು ಸಂದರ್ಶಿಸಿ ಭಕ್ತರು ಸೀಯಾಳಾಭಿಷೇಕ, ಪಂಚಾಮೃತ ಅಭಿಷೇಕ, ಜಲಾಭಿಷೇಕ, ಕ್ಷೀರಾಭಿಷೇಕಗಳನ್ನು ನೆರವೇರಿಸಿ ಪುನೀತರಾದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯ ರಾದ ಜಯಂತ ಪುರೋಳಿ, ಸುನಿಲ್, ಹರಿರಾಮಚಂದ್ರ, ರಾಮ ನಾಯ್ಕ್, ಮಹೇಶ್ ಬಜತ್ತೂರು, ಹರಿಣಿ, ಪ್ರೇಮಲತಾ ಕಾಂಚನ, ಇಒ ನಿಂಗಯ್ಯ, ವ್ಯವ ಸ್ಥಾಪಕ ವೆಂಕಟೇಶ್ ರಾವ್, ಪದ್ಮ ನಾಭ, ಕೃಷ್ಣ ಪ್ರಸಾದ್ ಬಡಿಲ ಇದ್ದರು.

ಅಹೋರಾತ್ರಿ ಭಜನೆ

ಬಂಟ್ವಾಳ: ಇಲ್ಲಿನ ರಾಯಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಅಹೋರಾತ್ರಿ ಭಜನಾ ಮಂಗಲೋತ್ಸವ ಸಹಿತ ಏಕಾದಶ ರುದ್ರಾಭಿಷೇಕ ಮತ್ತು 25ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಗುರುವಾರ ನಡೆಯಿತು.

ದೇವಳದ ಪ್ರಧಾನ ಅರ್ಚಕ ರಾಮಚಂದ್ರ ಭಟ್ ದೈಲ ಮತ್ತು ಅರಳ ಗರುಡ ಮಹಾಕಾಳಿ ದೇವಳದ ಪ್ರಧಾನ ಅರ್ಚಕ ಹರೀಶ್ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಭಜನಾ ಮಂಡಳಿ ಅಧ್ಯಕ್ಷ ದಿನೇಶ್ ಭಟ್ ದೈಲ, ಗೌರವಾಧ್ಯಕ್ಷ ಹೇಮಚಂದ್ರ ಶೆಟ್ಟಿಗಾರ್, ಸಂಚಾಲಕ ಸದಾನಂದ ಗೌಡ ಮತ್ತಾವು ಇದ್ದರು. 25 ತಂಡಗಳು ಭಜನೆ ಸೇವೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT