ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳಾಲದಲ್ಲಿ ಯುವ ಕಾಂಗ್ರೆಸ್ ಮುಖಂಡನ ಗುಂಡಿನ ದಾಳಿ ಪ್ರಕರಣ: 14 ಮಂದಿ ಬಂಧನ

ಹಲ್ಲೆ, ದೊಂಬಿಗೆ ಪ್ರತ್ಯೇಕ ಪ್ರಕರಣ ದಾಖಲಿಸಿದ ಪೊಲೀಸರು
Last Updated 23 ಸೆಪ್ಟೆಂಬರ್ 2019, 17:00 IST
ಅಕ್ಷರ ಗಾತ್ರ

ಮಂಗಳೂರು: ಉಳ್ಳಾಲ ಪೊಲೀಸ್‌ ಠಾಣೆ ವ್ಯಾಪ್ತಿಯ ಮುಕ್ಕಚ್ಚೇರಿಯ ಕಡಪ್ಪುರದಲ್ಲಿ ಭಾನುವಾರ ತಡರಾತ್ರಿ ನಡೆದ ಗುಂಡಿನ ದಾಳಿ ಮತ್ತು ಹಲ್ಲೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿರುವ ಪೊಲೀಸರು, 14ಮಂದಿಯನ್ನು ಬಂಧಿಸಿದ್ದಾರೆ.

ರಾಜ್ಯ ಯುವ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ ಸುಹೈಲ್‌ ಕಂದಕ್‌ ಗುಂಪು ಮತ್ತು ಮುಕ್ಕಚ್ಚೇರಿಯ ಕಿಲೇರಿಯಾ ನಗರದ ನಿವಾಸಿಗಳಾದ ಯುವ ಕಾಂಗ್ರೆಸ್‌ನ ಇನ್ನೊಂದು ಗುಂಪಿನ ನಡುವೆ ಘರ್ಷಣೆ ನಡೆದಿತ್ತು. ಸುಹೈಲ್‌ ಗುಂಡಿನ ದಾಳಿ ನಡೆಸಿದ್ದು, ಎದುರಾಳಿಗಳು ಆತನ ಮೇಲೆ ಹಲ್ಲೆ ನಡೆಸಿದ್ದರು.

ಸೋಮವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ, ‘ಸುಹೈಲ್‌ ಕಂದಕ್‌ ತನ್ನ ಪರವಾನಗಿ ಹೊಂದಿರುವ ಪಿಸ್ತೂಲ್‌ನಿಂದ ಆರು ಸುತ್ತು ಗುಂಡು ಹಾರಿಸಿದ್ದಾನೆ. ಒಂದು ಗುಂಡು ಇರ್ಷಾದ್‌ ಎಂಬಾತನ ಬಲಗಾಲಿನ ಮಂಡಿ ಚಿಪ್ಪಿನ ಕೆಳಭಾಗಕ್ಕೆ ನುಗ್ಗಿದೆ. ಆತನನ್ನು ದೇರಳಕಟ್ಟೆಯ ಯೇನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ತಿಳಿಸಿದರು.

ಈ ಪ್ರಕರಣದಲ್ಲಿ ಮೊಹಮ್ಮದ್ ಅರ್ಷದ್‌ ನಿಜಾಮುದ್ದೀನ್‌, ನಿಜಾಮುದ್ದೀನ್‌, ತೌಫೀಕ್‌ ಶೇಖ್‌, ಫಹಾದ್‌ ಮತ್ತು ಅಫ್ವಾನ್‌ ಎಂಬುವವರನ್ನು ಬಂಧಿಸಲಾಗಿದೆ. ಸುಹೈಲ್‌ ಕಂದಕ್‌ ಮತ್ತು ಬಷೀರ್‌ ಎಂಬುವವರಿಗೆ ಹಲ್ಲೆಯಿಂದ ಗಾಯಗಳಾಗಿದ್ದು, ಸದ್ಯ ಮಂಗಳೂರಿನ ಯೂನಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸ್‌ ನಿಗಾ ಇಟ್ಟಿದ್ದು, ವೈದ್ಯರು ಒಪ್ಪಿಗೆ ನೀಡಿದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.

ಸುಹೈಲ್‌ ಮತ್ತು ಬಷೀರ್‌ ಹಾಗೂ ಅವರ ಸಹಚರರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮೊಹಮ್ಮದ್, ಮೊಹಮ್ಮದ್ ವಾಸಿಂ, ಅಬ್ದುಲ್‌ ರಹಮತ್‌ ಉಲ್ಲಾ, ಹರ್ಷದ್‌, ಮುಜಾಮಿಲ್‌, ರೈಫಾನ್‌ ಮತ್ತು ಮೊಹಮ್ಮದ್‌ ಸಿಯಾಬ್‌ ಎಂಬುವವರನ್ನು ಬಂಧಿಸಲಾಗಿದೆ. ಎಲ್ಲ ಆರೋಪಿಗಳನ್ನೂ ಶೀಘ್ರದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದರು.

ಘಟನಾ ಸ್ಥಳದಲ್ಲಿ ಸಿಕ್ಕ ಗುಂಡು
ಘಟನಾ ಸ್ಥಳದಲ್ಲಿ ಸಿಕ್ಕ ಗುಂಡು

ಪಕ್ಷದೊಳಗಿನ ಕಿತ್ತಾಟ ಕಾರಣ?: ‘ಅರ್ಷದ್‌ ಎಂಬಾತ ಸುಹೈಲ್‌ ಕಂದಕ್‌ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಆತ ಸುಹೈಲ್‌ನ ಫೋಟೊವನ್ನು ತನ್ನ ವಾಟ್ಸ್‌ ಆ್ಯಪ್‌ ಸ್ಟೇಟಸ್‌ನಲ್ಲಿ ಹಾಕಿಕೊಂಡು ಆತನ ಪರವಾಗಿ ಬರೆದುಕೊಳ್ಳುತ್ತಿದ್ದ. ಸಲ್ಮಾನ್‌ ಕೂಡ ಅದೇ ಪಕ್ಷದ ಕಾರ್ಯಕರ್ತ. ಸುಹೈಲ್‌ ಒಬ್ಬನಿಗೇ ಏಕೆ ಪ್ರಚಾರ ನೀಡಬೇಕು ಎಂದು ಅರ್ಷದ್‌ ಬಳಿ ತಕರಾರು ಎತ್ತಿದ್ದ. ಇದೇ ಕಾರಣಕ್ಕಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ’ ಎಂದು ಹರ್ಷ ಮಾಹಿತಿ ನೀಡಿದರು.

ಎರಡೂ ಗುಂಪುಗಳಲ್ಲಿರುವ ವ್ಯಕ್ತಿಗಳ ಅಪರಾಧ ಹಿನ್ನೆಲೆ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕೃತ್ಯಕ್ಕೆ ಬಳಸಿದ ಪಿಸ್ತೂಲ್‌ ಅನ್ನು ವಶಪಡಿಸಿಕೊಳ್ಳಲಾಗಿದೆ. ಸ್ಥಳದಲ್ಲಿ ಒಂದು ಬಳಕೆಯಾದ ಗುಂಡು ಮತ್ತು ಎರಡು ಸಜೀವ ಗುಂಡುಗಳು ದೊರೆತಿವೆ. ವಿಧಿವಿಜ್ಞಾನ ತಜ್ಞರು ಕೃತ್ಯ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದರು.

ಪೊಲೀಸರಿಗೆ ಶ್ಲಾಘನೆ:

ರಾತ್ರಿ 11.30ರ ಸುಮಾರಿಗೆ ಘಟನೆ ನಡೆದಿತ್ತು. ಮಾಹಿತಿ ದೊರಕುತ್ತಿದ್ದಂತೆ ಕಾರ್ಯಾಚರಣೆ ಆರಂಭಿಸಿದ ಡಿಸಿಪಿಗಳಾದ ಅರುಣಾಂಗ್ಷು ಗಿರಿ, ಲಕ್ಷ್ಮೀಗಣೇಶ್‌, ಎಸಿಪಿಗಳಾದ ಕೋದಂಡರಾ, ಶ್ರೀನಿವಾಸ ಗೌಡ, ಉಳ್ಳಾಲ ಠಾಣೆ ಇನ್‌ಸ್ಪೆಕ್ಟರ್‌ ಗೋಪಿಕೃಷ್ಣ, ಸಿಸಿಬಿ ಇನ್‌ಸ್ಪೆಕ್ಟರ್‌ ಶಿವಪ್ರಕಾಶ್ ನಾಯ್ಕ್‌ ಮತ್ತು ತಂಡ, ಆರೋಪಿಗಳನ್ನು ಸೆರೆ ಹಿಡಿದಿದೆ ಎಂದು ತಿಳಿಸಿದರು.

ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಮಿಷನರ್‌ ಪ್ರಶಂಸಾ ಪತ್ರ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT