ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದರೋಡೆಗೆ ಸಂಚು–ಮೂವರು ಆರೋಪಿಗಳ ಬಂಧನ

ಸಿಸಿಬಿ ಪೊಲೀಸರ ಕಾರ್ಯಾಚರಣೆ
Published 10 ಜೂನ್ 2024, 4:09 IST
Last Updated 10 ಜೂನ್ 2024, 4:09 IST
ಅಕ್ಷರ ಗಾತ್ರ

ಮಂಗಳೂರು: ಉಳ್ಳಾಲ ಮುಕ್ಕಚ್ಚೇರಿ ಪರಿಸರದಲ್ಲಿ ಶ್ರೀಮಂತ ವ್ಯಕ್ತಿಗಳನ್ನು, ವ್ಯಾಪಾರಿಗಳನ್ನು ದರೋಡೆ ಮಾಡಲು ಸಂಚು ರೂಪಿಸಿದ್ದ ಾರೋಪದ ಮೇಲೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಉಳ್ಳಾಲ ಮುಕ್ಕಚ್ಚೇರಿ ಕಿಲಿರಿಯ ನಗರ, ಸೀ ಸೈಡ್ ಬಳಿಯ ನಿವಾಸಿ  ಮುಹಮ್ಮದ್ ಸಮೀರ್ ಅಲಿ ಅಲಿಯಾಸ್‌ ಕಡಪರ ಸಮೀರ್ (33),  ಬೊಳಿಯಾರ್ ಜುಮ್ಮಾ ಮಸೀದಿ ಬಳಿ ನಿವಾಸಿ ಮೊಹಮ್ಮದ್ ಮನ್ಸೂರ್ ಅಲಿಯಾಸ್‌ ಬೊಳಿಯಾರು ಮನ್ಸೂರು (30), ಕೊಣಾಜೆ ಗ್ರಾಮಚಾವಡಿಯ ಮಲಾರ್‌ ಬದ್ರಿಯಾನಗರದ  ಮೊಹಮ್ಮದ್ ನೌಷದ್ (30) ಬಂಧಿತರು. ಆರೋಪಿಗಳಿಂದ  ಮಾರಾಕಾಯುಧಗಳಾದ ತಲವಾರು, ಚೂರಿ, ಮೂರು ಮೊಬೈಲ್ ಫೋನುಗಳು ಹಾಗೂ ಕೃತ್ಯಕ್ಕೆ ಬಳಸಿದ ಜೀಪ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ₹ 25.90 ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಕೊಲೆ, ಕೊಲೆಯತ್ನ, ದರೋಡೆ, ಮಾದಕ ವಸ್ತು ಮಾರಾಟ ಹಾಗೂ ಇತರ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ತಂಡವೊಂದು  ಮುಕ್ಕಚ್ಚೇರಿ ಪರಿಸರದಲ್ಲಿ ಶ್ರೀಮಂತ ವ್ಯಕ್ತಿಗಳ ಹಾಗೂ ವ್ಯಾಪಾರಿಗಳ ದರೋಡೆಗೆ ಸಂಚು ರೂಪಿಸಿದ್ದ ಕುರಿತ ಮಾಹಿತಿ ಆಧಾರದಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಆರೋಪಿಗಳು  ಮಾರಾಕಾಯುಧ ಹೊಂದಿರುವುದು ಕಂಡುಬಂದಿತ್ತು. ಈ ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ತಲೆ ಮರೆಸಿಕೊಂಡಿದ್ದಾರೆ.  ಅವರಿಗಾಗಿ ಪತ್ತೆ ಕಾರ್ಯ ಮುಂದುವರಿದಿದೆ. ಆರೋಪಿಗಳ ವಿರುದ್ದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ, ಜೀವ ಬೆದರಿಕೆ ಪ್ರಕರಣ ಹಾಗೂ ಮಂಗಳೂರು ದಕ್ಷಿಣ ಠಾಣೆಯಲ್ಲಿ ದಾಖಲಾಗಿದ್ದ ಇಲ್ಯಾಸ್ ಕೊಲೆ ಪ್ರಕರಣ, ಫಳ್ನೀರ್‌ನ ಮಳಿಗೆಯೊಂದರಲ್ಲಿ ನಡೆದ ಶೂಟ್ ಔಟ್ ಪ್ರಕರಣ, ಕೊಣಾಜೆ ಠಾಣೆಯಲ್ಲಿ ದಾಖಲಾಗಿದ್ದ ಜೀವ ಬೆದರಿಕೆ ಪ್ರಕರಣಗಳು ಸೇರಿ ಒಟ್ಟು 7 ಪ್ರಕರಣದಲ್ಲಿ ಮುಹಮ್ಮದ್ ಸಮೀರ್  ಆರೋಪಿಯಾಗಿದ್ದ.  ಕೊಣಾಜೆ ಠಾಣೆಯಲ್ಲಿ ದಾಖಲಾಗಿದ್ದ ದರೋಡೆ ಮತ್ತು ಹಲ್ಲೆ ಪ್ರಕರಣ, ಮಂಗಳೂರು ದಕ್ಷಿಣ ಠಾಣೆಯಲ್ಲಿ ದಾಖಲಾಗಿದ್ದ ಫಳ್ನೀರ್ ಶೂಟ್ ಔಟ್ ಪ್ರಕರಣ ಹಾಗೂ ಸೆನ್ ಕ್ರೈಂ ಠಾಣೆಯಲ್ಲಿ ದಾಖಲಾಗಿದ್ದ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಮೊಹಮ್ಮದ್ ಮನ್ಸೂರ್ ಆರೋಪಿಯಾಗಿದ್ದ‌. ಮೊಹಮ್ಮದ್ ನೌಷದ್  ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಾದ ದರೋಡೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಸಿಸಿಬಿ ಇನ್‌ಸ್ಪೆಕ್ಟರ್‌ ಶ್ಯಾಮಸುಂದರ್ ಎಚ್.ಎಂ, ಪಿಎಸ್ಐಗಳಾದ ಸುದೀಪ್ ಎಂ.ವಿ, ಶರಣಪ್ಪ ಎಸ್ ಭಂಡಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT