ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಮಾರ್ಟ್ ವರ್ಮಿಬಿನ್‌’ಗೆ ಪೇಟೆಂಟ್: ಹರೀಶ್ ಜೋಶಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನ

ನಿವೃತ್ತ ಪ್ರಾಧ್ಯಾಪಕ ಡಾ. ಹರೀಶ್ ಜೋಶಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನ
Last Updated 19 ಅಕ್ಟೋಬರ್ 2021, 19:45 IST
ಅಕ್ಷರ ಗಾತ್ರ

ಮಂಗಳೂರು: ನಿವೃತ್ತ ಪ್ರಾಧ್ಯಾಪಕ ಡಾ. ಎಸ್. ಹರೀಶ್ ಜೋಶಿ ಅವರು ಸಿದ್ಧಪಡಿಸಿರುವ ‘ಸ್ಮಾರ್ಟ್ ಡೊಮೆಸ್ಟಿಕ್ ವರ್ಮಿಬಿನ್’ ಅಡುಗೆಮನೆಯ ತ್ಯಾಜ್ಯದಿಂದ ಎರೆಹುಳು ಗೊಬ್ಬರ ಉತ್ಪಾದಿಸುವ ಸರಳ ತಂತ್ರಜ್ಞಾನಕ್ಕೆ ಕೇಂದ್ರ ಸರ್ಕಾರದಿಂದ 20 ವರ್ಷಗಳ ಪೇಟೆಂಟ್ ದೊರೆತಿದೆ.

ಮಂಗಳೂರು ನಿವಾಸಿಯಾಗಿರುವ ಜೋಶಿ ಅವರು, ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ಕಸದ ವಿಲೇವಾರಿಗೆ ಪೂರಕವಾಗುವ ಸ್ಮಾರ್ಟ್ ಎರೆಗೊಬ್ಬರ ತೊಟ್ಟಿಯನ್ನು ವೈಜ್ಞಾನಿಕವಾಗಿ ರೂಪಿಸಿ, ಈ ಬಗ್ಗೆ ಹಳ್ಳಿಗಳು, ನಗರ ಬಡಾವಣೆಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಕಳೆದ 15 ವರ್ಷಗಳಿಂದ ಮಾಡುತ್ತಿದ್ದಾರೆ. ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಿ, ‘ಸ್ಮಾರ್ಟ್ ಬಿನ್’ ತಯಾರಿಸಿದ್ದಾರೆ. ಅನೇಕರು ಈ ಸ್ಮಾರ್ಟ್ ತೊಟ್ಟಿ ಮೂಲಕ ತ್ಯಾಜ್ಯ ವಿಲೇವಾರಿ ಸುಗಮಗೊಳಿಸಿಕೊಂಡಿದ್ದಾರೆ.

ಏನಿದು ತಂತ್ರಜ್ಞಾನ: ‘ಫೈಬರ್ ಗ್ಲಾಸ್ ಹೊಂದಿರುವ ತೊಟ್ಟಿಯಲ್ಲಿ ಎರಡು ವಿಭಾಗಗಳಿವೆ. ತೊಟ್ಟಿ ಅಳವಡಿಸಿ, ಮೂಲ ಸಾಮಗ್ರಿ ಜತೆಗೆ ಅದಕ್ಕೆ ಎರೆಹುಳಗಳನ್ನು ಬಿಟ್ಟರೆ, ನಂತರ ಎರಡು ಹಂತಗಳಲ್ಲಿ ಎರೆಗೊಬ್ಬರ ಸಿದ್ಧವಾಗುತ್ತದೆ. ತೊಟ್ಟಿಯ ಎಲ್ಲ ದಿಕ್ಕುಗಳಲ್ಲಿ ರಂಧ್ರಗಳಿರುವ ಕಾರಣ ಗಾಳಿ ಸಂಚಾರವೂ ಇರುತ್ತದೆ. ಎರೆಹುಳಗಳ ಸಂತಾನಾಭಿವೃದ್ಧಿಗೆ ಇದು ಸಹಾಯಕ. ಇರುವೆ, ಇಲಿ, ಹೆಗ್ಗಣಗಳ ಕಾಟ ಇಲ್ಲದಂತೆ ತೊಟ್ಟಿ ನಿರ್ಮಿಸಲಾಗಿದೆ. ಫ್ರಾನ್ಸ್, ಇಂಗ್ಲೆಂಡ್, ಅಮೆರಿಕ ದೇಶಗಳಲ್ಲಿರುವ ಎರೆತೊಟ್ಟಿಗಿಂತ ಇದು ಭಿನ್ನವಾಗಿದೆ’ ಎನ್ನುತ್ತಾರೆ ಪ್ರೊ. ಜೋಶಿ.

‘ಒಂದು ಮನೆಯಿಂದ ದಿನಕ್ಕೆ ಸರಾಸರಿ 1.5 ಕೆ.ಜಿ.ಯಷ್ಟು ಹಸಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಅದರಿಂದ ವರ್ಷದಲ್ಲಿ 4–5 ಬಾರಿ ಗೊಬ್ಬರ ಪಡೆಯಬಹುದು. ಪ್ರತಿ ಬಾರಿ 20ರಿಂದ 25 ಕೆ.ಜಿ.ಯಷ್ಟು ಗೊಬ್ಬರ ಸಿಗುತ್ತದೆ. ಹೊರ ಆವರಣದಲ್ಲಿ ದೊರೆಯುವ ಎರೆಜಲವನ್ನು ಕ್ರಿಮಿನಾಶಕವಾಗಿ ಬಳಕೆ ಮಾಡಬಹುದು. ತೊಟ್ಟಿ ನಿರ್ಮಾಣಕ್ಕೆ ಒಮ್ಮೆ ₹ 12,500ರಷ್ಟು ವೆಚ್ಚ ಮಾಡಿದರೆ ಸಾಕು. ದೀರ್ಘ ಬಾಳಿಕೆಯ ಸಾಮಗ್ರಿಯಿಂದ ಇದು ತಯಾರಾಗುತ್ತದೆ’ ಎಂದು ಜೋಶಿ ತಿಳಿಸಿದರು.

ಪರಿಸರಾಸಕ್ತರಾಗಿರುವ ಜೋಶಿ ಅವರು, ಪಶ್ಚಿಮಘಟ್ಟದ ಕಪ್ಪೆಗಳ ಮೇಲೆ ಅಧ್ಯಯನ ನಡೆಸಿ, ಎಂಟು ವಿಶೇಷ ಪ್ರಭೇದಗಳನ್ನು ಪತ್ತೆ ಮಾಡಿದ್ದಾರೆ.

‘ಈರುಳ್ಳಿ ಸಿಪ್ಪೆ, ಬೆಳ್ಳುಳ್ಳಿ, ಡೇರಿ ಉತ್ಪನ್ನಗಳು, ಕಿತ್ತಳೆ, ಮೋಸಂಬಿ ಹಣ್ಣಿನ ಸಿಪ್ಪೆ ಹೊರತುಪಡಿಸಿ, ಉಳಿದ ಎಲ್ಲ ಹಸಿ ತ್ಯಾಜ್ಯಗಳನ್ನು ಈ ತೊಟ್ಟಿಗೆ ಹಾಕಬಹುದು. ಮೂರು ತಿಂಗಳಿಗೊಮ್ಮೆ ಸರಾಸರಿ 25 ಕೆ.ಜಿ. ಎರೆಗೊಬ್ಬರ ಸಿಗುತ್ತಿದೆ’ ಎನ್ನುತ್ತಾರೆ ಮೂರು ವರ್ಷಗಳಿಂದ ಇದನ್ನು ಬಳಕೆ ಮಾಡುತ್ತಿರುವ ಭಾಗ್ಯಲಕ್ಷ್ಮಿ ಭಿಡೆ. ಹರೀಶ್ ಜೋಶಿ ಸಂಪರ್ಕ ಸಂಖ್ಯೆ: 9900094951.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT