ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳುವಿನಿಂದ ಕನ್ನಡಕ್ಕೆ ಧಕ್ಕೆ ಇಲ್ಲ: ಸೋಮಶೇಖರ್‌

ತುಳು ಭವನದ ಹೆಚುವರಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಸೋಮಶೇಖರ್‌
Last Updated 24 ಮಾರ್ಚ್ 2023, 14:04 IST
ಅಕ್ಷರ ಗಾತ್ರ

ಮಂಗಳೂರು: ಕನ್ನಡದ ಸಹೋದರ ಭಾಷೆಯಾದ ತುಳುವಿನ ಬೆಳವಣಿಗೆಯಿಂದ ಕನ್ನಡದ ಸಾರ್ವಭೌಮತ್ವಕ್ಕೆ ಧಕ್ಕೆಯಾವುದಿಲ್ಲ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ್ ಅಭಿಪ್ರಾಯಪಟ್ಟರು.

ಪ್ರಾಧಿಕಾರ ಬಿಡುಗಡೆ ಮಾಡಿರುವ ₹ 360 ಲಕ್ಷ ಅನುದಾನದಿಂದ ನಡೆಯಲಿರುವ ತುಳುಭವನದ ಹೆಚ್ಚುವರಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡದ ಜೊತೆಯಲ್ಲಿ ಎಲ್ಲ ಭಾಷೆಗಳು ಬೆಳೆಯಬೇಕು ಎಂಬುದು ಪ್ರಾಧಿಕಾರದ ಆಶಯ. ಈ ಹಿನ್ನೆಲೆಯಲ್ಲಿ ತುಳು, ಕೊಂಕಣಿ ಮತ್ತು ಬ್ಯಾರಿ ಅಕಾಡೆಮಿಗಳಿಗೆ ಸಾಕಷ್ಟು ಅನುದಾನವನ್ನು ನೀಡಲಾಗಿದೆ. ಕನ್ನಡ ಮತ್ತು ತುಳು ಭಾಷೆಗಳ ನಡುವೆ ಉತ್ತಮ ಸಾಮರಸ್ಯವಿದೆ. ತುಳುವಿನಲ್ಲಿ ಗ್ರಾಮೀಣ ಪ್ರದೇಶದ ಮಣ್ಣಿನ ಸೊಗಡು ಇರುವುದು ಗಮನಾರ್ಹ ಅಂಶ ಎಂದು ಅವರು ಹೇಳಿದರು.

ತುಳುವಿಗೆ ಸಂಬಂಧಿಸಿ ಹಲವಾರು ಶಾಸನಗಳು ಲಭ್ಯವಿವೆ. ಪ್ರಪಂಚದಾದ್ಯಂತ ಎರಡು ಕೋಟಿ ಜನರು ತುಳು ಭಾಷೆಯನ್ನು ಮಾತನಾಡುತ್ತಾರೆ. ವಿದೇಶದಲ್ಲಿರುವ ಕನ್ನಡಿಗರಲ್ಲಿ ತುಳುವರು ಗಣನೀಯ ಪ್ರಮಾಣದಲ್ಲಿ ಇದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ರಾಜ್ಯ ಸರ್ಕಾರ ಪ್ರಯತ್ನ ನಡೆಸುತ್ತಿದ್ದು ಮುಂಬರುವ ದಿನಗಳಲ್ಲಿ ತುಳು ಭಾಷೆಗೆ ನಿರೀಕ್ಷಿತ ಸ್ಥಾನ ಲಭಿಸಲಿದೆ ಎಂದು ತಿಳಿಸಿದರು.

ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಮಹಾನಗರ ಪಾಲಿಕೆ ಸದಸ್ಯರಾದ ಸುಧೀರ್, ರಾಧಾಕೃಷ್ಣ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ ಸಾರ್ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು. ದಿನೇಶ್ ಸುವರ್ಣ ರಾಯಿ ನಿರೂಪಿಸಿದರು.

ಮೋಹನ ಆಳ್ವ ವರದಿ ಜಾರಿಗೆ ಒತ್ತಾಯ

ತುಳುವನ್ನು ಎರಡನೇ ಅಧಿಕೃತ ಭಾಷೆಯಾಗಿ ಮಾಡುವ ಕುರಿತು ಅಧ್ಯಯನ ನಡೆಸುವುದ್ಕಕಾಗಿ ರಚಿಸಿದ್ದ ಮೋಹನ ಆಳ್ವ ನೇತೃತ್ವದ ವರದಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ತುಳು ಸಂಘಟನೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಘೋಷಣೆ ಕೂಗಿದರು.

ಸಭಾ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಎದ್ದುನಿಂತ ಪ್ರತಿಭಟನಾಕಾರರು ಘೋಷಣೆಗಳು ಒಳಗೊಂಡ ಕರಪತ್ರಗಳನ್ನು ಪ್ರದರ್ಶಿಸಿದರು.

ಮೋಹನ ಆಳ್ವ ಅವರ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ಅದರ ಬಗ್ಗೆ ಈಗ ಯಾವುದೇ ಮಾಹಿತಿ ಇಲ್ಲ. ಈ ಸರ್ಕಾರದ ಅವಧಿ ಮುಗಿಯುವ ಮೊದಲು ವರದಿ ಜಾರಿಗೆ ತರಬೇಕು. ಇದಕ್ಕಾಗಿ ಜನಪ್ರತಿನಿಧಿಗಳು ಸರ್ಕಾರವನ್ನು ಒತ್ತಾಯಿಸಬೇಕು ಎಂದು ಅವರು ಆಗ್ರಹಿಸಿದರು.

ರಾಜೇಶ್‌ ಆಳ್ವ, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಚೇಳಾಯ್ರು, ವಿಜಯಲಕ್ಷ್ಮಿ ಶೆಟ್ಟಿ, ರೂಪಕಲಾ, ಯೋಗೀಶ್‌ ಶೆಟ್ಟಿ ಜೆಪ್ಪು, ಶಮೀನಾ ಆಳ್ವ, ಜಿ.ವಿ.ಎಸ್‌ ಉಳ್ಳಾಲ, ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT