ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರಳುಗಾರಿಕೆ: ನಾಲ್ವರು ಆರೋಪಿಗಳ ಬಂಧನ– ಟಿಪ್ಪರ್‌ ಲಾರಿ ವಶ

ಅಕ್ರಮ ಮರಳುಗಾರಿಕೆ ತಡೆಗೆ ಅಳವಡಿಸಿದ್ದ ಸಿಸಿಟಿವಿಗೆ ಹಾನಿ
Last Updated 12 ಸೆಪ್ಟೆಂಬರ್ 2022, 16:22 IST
ಅಕ್ಷರ ಗಾತ್ರ

ಉಳ್ಳಾಲ: ಸಮುದ್ರ ತೀರದಲ್ಲಿ ಅಕ್ರಮ ಮರಳುಗಾರಿಕೆಯನ್ನು ತಡೆಗಟ್ಟಲು ಕಣ್ಗಾವಲಿಡುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಉಳ್ಳಾಲ ತಾಲ್ಲೂಕಿನ ಸೋಮೇಶ್ವರ ಗ್ರಾಮದ ಶ್ರೀ ಸೋಮನಾಥ ದೇವಸ್ಥಾನದ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಹಾನಿಗೊಳಿಸಿದ ಪ್ರಕರಣ ಸಂಬಂಧ ಉಳ್ಳಾಲ ಠಾಣೆಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆಗೆ ಬಳಸಲಾದ ಟಿಪ‌್ಪರ್‌ ಲಾರಿಯನ್ನೂ ವಶಕ್ಕೆ ಪಡೆದಿದ್ದಾರೆ.

ಮಡ್ಯಾರ್‌ ಸಾಯಿನಗರದ ನಿವಾಸಿ ಸೂರಜ್‌, ಮದ್ಯನಡ್ಕ ಕುರ್ನಾಡು ನಿವಾಸಿ ಇಕ್ಬಾಲ್‌, ತಲಪಾಡಿ ನಿವಾಸಿ ಅಖಿಲ್‌ ಹಾಗೂ ಸೋಮೇಶ್ವರ ಮೂಡ ನಿವಾಸಿ ಪ್ರಜ್ವಲ್‌ ಬಂಧಿತರು.

ಸರ್ಕಾರಿ ಜಮೀನಿನಲ್ಲಿ ಅಕ್ರಮ ಮರಳುಗಾರಿಕೆಯನ್ನು ತಡೆಗಟ್ಟಲು ಸೋಮೇಶ್ವರ ಗ್ರಾಮದ ಸೋಮೇಶ್ವರ ದೇವಸ್ಥಾನ ಬಳಿ ಸರ್ವೆ ನಂಬರ್‌ 68/7 ಬಿಯಲ್ಲಿ ‘ಸೈನ್‌ ಇನ್‌ ಸೆಕ್ಯುರಿಟಿ‘ ಸಂಸ್ಥೆ ಜಿಲ್ಲಾಡಳಿತ ಆದೇಶದಂತೆ ಎರಡು ಸಿ.ಸಿ.ಟಿ.ವಿ ಕ್ಯಾಮರಾಗಳನ್ನು ಅಳವಡಿಸಿತ್ತು. ಸೆ.10ರಂದು ಬೆಳಗ್ಗಿನ ಜಾವ ಸುಮಾರು 1.30 ರಿಂದ 2 ಗಂಟೆಯೊಳಗೆ ಕಿಡಿಗೇಡಿಗಳುಕಂಬಕ್ಕೆ ಹತ್ತಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಕೀಳಲು ಯತ್ನಿಸಿದ್ದರು. ಅದು ಸಾಧ್ಯವಾಗದೇ ಇದ್ದಾಗ ಟಿಪ್ಪರ್‌ ಗುದ್ದಿಸಿಈ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಧ್ವಂಸ ಮಾಡಿದ್ದರು. ಈ ದೃಶ್ಯಗಳು ಕ್ಯಾಮರಾದಲ್ಲಿ ದಾಖಲಾಗಿದ್ದವು.

ಈ ಕುರಿತು ಉಳ್ಳಾಲ ತಾಲ್ಲೂಕಿನ ಮಂಗಳೂರು ಬಿ ಹೋಬಳಿಯ ಕಂದಾಯ ನಿರೀಕ್ಷಕ ಮಂಜುನಾಥ್‌ ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಕೃತ್ಯದಿಂದ ₹75,000 ನಷ್ಟ ಸಂಭವಿಸಿದೆ ಎಂದು ಅವರು ತಿಳಿಸಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT