ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹2,744 ಕೋಟಿ ಆದಾಯ; ಶೇ 14 ರಷ್ಟು ಪ್ರಗತಿ

ಸರಕು ಸಾಗಣೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ದಕ್ಷಿಣ ರೈಲ್ವೆ
Last Updated 5 ಏಪ್ರಿಲ್ 2022, 16:21 IST
ಅಕ್ಷರ ಗಾತ್ರ

ಮಂಗಳೂರು: ಕಳೆದ ಆರ್ಥಿಕ ವರ್ಷದಲ್ಲಿ ದಕ್ಷಿಣ ರೈಲ್ವೆ ಹೊಸ ಮೈಲುಗಲ್ಲು ಸಾಧಿಸಿದ್ದು, 3.05 ಕೋಟಿ ಟನ್‌ ಸರಕು ಸಾಗಣೆ ಮಾಡುವ ಮೂಲಕ ₹2,744 ಕೋಟಿ ಆದಾಯ ಗಳಿಸಿದೆ. ಕಲ್ಲಿದ್ದಲು, ಕಬ್ಬಿಣ ಮತ್ತು ಅದಿರು, ಸಿಮೆಂಟ್‌, ಪೆಟ್ರೋಲಿಯಂ ಉತ್ಪನ್ನ ಹಾಗೂ ಕಂಟೇನರ್‌ ಸರಕುಗಳು ಹೆಚ್ಚಾಗಿದ್ದು, ಈ ಸಾಧನೆಗೆ ಕಾರಣವಾಗಿದೆ.

2020–21 ರಲ್ಲಿ 2.68 ಕೋಟಿ ಟನ್‌ ಸರಕು ಸಾಗಣೆ ಮಾಡಿದ್ದ ದಕ್ಷಿಣ ರೈಲ್ವೆ, ಈ ವರ್ಷ ಒಟ್ಟು 3.05 ಕೋಟಿ ಟನ್‌ ಸರಕು ಸಾಗಿಸುವ ಮೂಲಕ ಶೇ 14 ರಷ್ಟು ಪ್ರಗತಿ ಸಾಧಿಸಿದೆ. ಇದರ ಜೊತೆಗೆ ಆದಾಯ ಗಳಿಕೆಯಲ್ಲೂ ಶೇ 27 ರಷ್ಟು ಹೆಚ್ಚಳ ಕಂಡಿದೆ. 2020–21 ರಲ್ಲಿ ₹2,162 ಕೋಟಿ ಆದಾಯ ಗಳಿಸಿದ್ದ ದಕ್ಷಿಣ ರೈಲ್ವೆ, 2021–22 ರಲ್ಲಿ 2,744 ಕೋಟಿ ಆದಾಯ ಗಳಿಸಿದೆ. ಅಲ್ಲದೇ ಇದು ರೈಲ್ವೆ ಮಂಡಳಿ ನೀಡಿದ್ದ ಗುರಿಗಿಂತ ಶೇ 2 ರಷ್ಟು ಹೆಚ್ಚಿನ ಆದಾಯವಾಗಿದೆ.

ಈ ವರ್ಷದಲ್ಲಿ 3,305 ಬೋಗಿಗಳಲ್ಲಿ 1.35 ಕೋಟಿ ಟನ್‌ ಕಲ್ಲಿದ್ದಲು ಸಾಗಿಸಲಾಗಿದ್ದು, ಶೇ 31 ರಷ್ಟು ಅಭಿವೃದ್ಧಿ ಸಾಧಿಸಲಾಗಿದೆ. 4.5 ಲಕ್ಷ ಟನ್‌ ಕಬ್ಬಿಣ ಮತ್ತು ಅದಿರು, 20.8 ಲಕ್ಷ ಟನ್‌ ಸಿಮೆಂಟ್‌, 28 ಲಕ್ಷ ಟನ್‌ ಫರ್ಟಿಲೈಸರ್‌, 40.9 ಲಕ್ಷ ಟನ್‌ ಪೆಟ್ರೋಲಿಯಂ ಉತ್ಪನ್ನ, 19.9 ಲಕ್ಷ ಟನ್‌ ಆಹಾರ ಧಾನ್ಯಗಳನ್ನು ಸಾಗಣೆ ಮಾಡಲಾಗಿದೆ.

ಅಟೋಮೊಬೈಲ್ ಸರಕು ಹೆಚ್ಚಳ: ಅಟೋಮೊಬೈಲ್‌ ಕ್ಷೇತ್ರಕ್ಕೆ ಹೆಚ್ಚಿನ ಬೇಡಿಕೆ ಬಂದಿದ್ದು, ಉತ್ತರ ಭಾರತ ಹಾಗೂ ಈಶಾನ್ಯ ಭಾರತಕ್ಕೆ ದಕ್ಷಿಣ ರೈಲ್ವೆಯ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಅಟೋಮೊಬೈಲ್‌ ಸಾಮಗ್ರಿಗಳನ್ನು ರವಾನಿಸಲಾಗಿದೆ.

2020–21 ರಲ್ಲಿ 544 ಬೋಗಿಗಳ ಮೂಲಕ 4.2 ಲಕ್ಷ ಟನ್‌ ಅಟೋಮೊಬೈಲ್ ಸಾಮಗ್ರಿ ಸಾಗಣೆ ಮಾಡಲಾಗಿತ್ತು. 2021–22 ರಲ್ಲಿ 774 ಬೋಗಿಗಳ ಮೂಲಕ 6.5 ಲಕ್ಷ ಟನ್‌ ಅಟೋಮೊಬೈಲ್‌ ಸಾಮಗ್ರಿಗಳನ್ನು ರವಾನಿಸಲಾಗಿದ್ದು, ಶೇ 56 ರಷ್ಟು ಹೆಚ್ಚಳವಾಗಿದೆ. 2021 ರ ಜುಲೈ ತಿಂಗಳಲ್ಲಿಯೇ 87 ಬೋಗಿಗಳ ಮೂಲಕ ಅಟೋಮೊಬೈಲ್‌ ಸರಕು ಸಾಗಣೆ ಮಾಡಲಾಗಿದೆ.

ಈ ಮೂಲಕ ಅತಿ ಹೆಚ್ಚು ಅಟೋಮೊಬೈಲ್ ಸರಕು ಸಾಗಣೆ ಮಾಡಲಾಗಿದ್ದು, ₹189.05 ಕೋಟಿ ಆದಾಯ ಗಳಿಸಲಾಗಿದೆ. ಕಳೆದ ವರ್ಷ ಈ ಆದಾಯ ₹134.63 ಕೋಟಿಯಾಗಿದ್ದು, ಒಟ್ಟಾರೆ ಅಟೋಮೊಬೈಲ್‌ ಸರಕು ಸಾಗಣೆಯ ಆದಾಯದಲ್ಲಿ ಶೇ 44 ರಷ್ಟು ಹೆಚ್ಚಳವಾಗಿದೆ.

ಆಮ್ಲಜನಕ ಹೊತ್ತು ಸಾಗಿದ ಬೋಗಿ: ಕೋವಿಡ್–19 ಸಂದರ್ಭದಲ್ಲಿ ಆಮ್ಲಜನಕದ ಕೊರತೆ ಕಾಡಿದ ಸಂದರ್ಭದಲ್ಲಿ ದಕ್ಷಿಣ ರೈಲ್ವೆ ದ್ರವೀಕೃತ ಆಮ್ಲಜನಕ ಸಾಗಣೆಯಲ್ಲಿ ಮಹತ್ತರ ಪಾತ್ರ ವಹಿಸಿದೆ. ದಕ್ಷಿಣ ರೈಲ್ವೆಯು 95 ರೇಕ್‌ಗಳ ಮೂಲಕ 7,780 ಟನ್‌ ದ್ರವೀಕೃತ ಆಮ್ಲಜನಕವನ್ನು ದೇಶದ ವಿವಿಧೆಡೆ ಸಾಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT