ಶನಿವಾರ, ಜೂನ್ 12, 2021
23 °C
ವೈದ್ಯರ ತಂಡಕ್ಕೆ ಕುಟುಂಬದ ಸದಸ್ಯರ ಅಭಿನಂದನೆ

ಕೋವಿಡ್‌ನಿಂದ ಚೇತರಿಕೊಂಡ ವಿಶೇಷ ಮಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ನ್ಯುಮೋನಿಯಾದ ಜತೆಗೆ ಕೋವಿಡ್–19ನಿಂದ ಆರೋಗ್ಯ ಹದಗೆಟ್ಟಿದ್ದ ಮೂರುವರೆ ವರ್ಷದ ವಿಶೇಷ ಮಗುವಿಗೆ ವೆನ್ಲಾಕ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದು, ಮಗುವಿನ ಪೋಷಕರಿಂದ ಶ್ಲಾಘನೆ ವ್ಯಕ್ತವಾಗಿದೆ. 15 ದಿನಗಳ ಹಿಂದೆ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಮಗು, ಇದೀಗ ಆಸ್ಪತ್ರೆಯಿಂದ ಬಿಡುಗಡೆಗೊಂಡಿದೆ.

ಸುರತ್ಕಲ್ ಕೃಷ್ಣಾಪುರದ ಅಹ್ಮದ್ ‌ಕಬೀರ್ ಮತ್ತು ಫಾತಿಮಾ ದಂಪತಿಯ ಮಗುವಿಗೆ ಕೋವಿಡ್–19 ಹಾಗೂ ನ್ಯುಮೋನಿಯಾದಿಂದ ಆರೋಗ್ಯ ತೀವ್ರ ಹದಗೆಟ್ಟಿತ್ತು. ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿದರೂ, ಚಿಕಿತ್ಸೆ ವೆಚ್ಚ ದುಬಾರಿಯಾಗುವ ಆತಂಕ ಹಾಗೂ ಮಗು ಬದುಕುಳಿಯುವ ಸಾಧ್ಯತೆಯೂ ಕಡಿಮೆ ಎಂಬ ಆತಂಕ ಪೋಷಕರದ್ದಾಗಿತ್ತು. ಕುಟುಂಬ ಸದಸ್ಯರು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಮಗುವನ್ನು ದಾಖಲಿಸಿದ್ದರು. ಕ್ಲಿಷ್ಟಕರ ಆರೋಗ್ಯ ಸ್ಥಿತಿಯಲ್ಲಿದ್ದ ಮಗುವಿನ ಚಿಕಿತ್ಸೆಯನ್ನು ಡಾ.ಅಬ್ದುಲ್ ಬಾಸಿತ್ ನೇತೃತ್ವದ ವೈದ್ಯಕೀಯ ತಂಡ ಸ್ವೀಕರಿಸಿ ಚಿಕಿತ್ಸೆ ಆರಂಭಿಸಿತ್ತು.

ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಚಿಕಿತ್ಸೆಯಿಂದಾಗಿ ಮಗು ಗುಣಮುಖವಾಗಿ ಆಸ್ಪತ್ರೆಯಿಂದ ಮಂಗಳವಾರ ಬಿಡುಗಡೆಗೊಂಡಿದೆ. ಆಸ್ಪತ್ರೆಯಲ್ಲಿ ಕುಟುಂಬ ಸದಸ್ಯರು ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಂಡರು. ಡಾ.ಪ್ರಸನ್ನ, ಡಾ.ಪಾಯಲ್, ಡಾ.ಅನುರಾಗ್ ಸೇರಿದಂತೆ ವೈದ್ಯರ ತಂಡ, ಶುಶ್ರೂಷಕಿಯರು ಹಾಗೂ ಚಿಕಿತ್ಸೆಗೆ ಸಹಕರಿಸಿದ ತಂಡಕ್ಕೆ ಕುಟುಂಬ ಅಭಿನಂದನೆಯನ್ನೂ ಸಲ್ಲಿಸಿತು.

ಇದಕ್ಕಿಂತ ಬೇರೆ ಸಂತಸವಿಲ್ಲ: ‘ಮಗು ಚೇತರಿಕೆಗೊಂಡು ಇದೀಗ ಮನೆ ಸೇರಿದೆ. ಇಂದು ಕೂಡಾ ವಿಚಾರಿಸಿದೆ. ಮಗು ಆರೋಗ್ಯವಾಗಿರುವುದಾಗಿ ಮನೆಯವರು ತಿಳಿಸಿದ್ದಾರೆ. ವೈದ್ಯನಾದವನಿಗೆ ಇದಕ್ಕಿಂತ ಸಂತಸ ಬೇರೇನಿದೆ’ ಎಂದು ವೆನ್ಲಾಕ್‌ ಆಸ್ಪತ್ರೆ ವೈದ್ಯ ಡಾ.ಅಬ್ದುಲ್‌ ಬಾಸಿತ್‌ ಹೇಳಿದರು.

‘ಮಗುವಿಗೆ ಡೌನ್‌ಸಿಂಡ್ರೋಮ್ ಜತೆಗೆ ನ್ಯುಮೋನಿಯಾದಿಂದ ಬಳಲುತ್ತಿತ್ತು. ಮಗುವಿನ ಶ್ವಾಸಕೋಶ ದುರ್ಬಲವಾಗಿದ್ದು, ವೆಂಟಿಲೇಟರ್ ಅಳವಡಿಸುವಂತಿರಲಿಲ್ಲ. ಖಾಸಗಿ ಆಸ್ಪತ್ರೆಯಲ್ಲೂ ಮಗುವಿನ ಚಿಕಿತ್ಸೆ ಬಗ್ಗೆ ಅಸಹಾಯಕತೆ ವ್ಯಕ್ತಗೊಂಡು ನಮ್ಮಲ್ಲಿಗೆ ದಾಖಲಾದಾಗ ನಾವೂ ನಿರಾಶರಾಗಿದ್ದೆವು. ಕ್ಲಿಷ್ಟಕರ ಸನ್ನಿವೇಶದಲ್ಲಿ ನಾವು ಮಗುವಿಗೆ ಚಿಕಿತ್ಸೆ ಒದಗಿಸಬೇಕಾಗಿತ್ತು.

ವೆಂಟಿಲೇಟರ್ ಅಳವಡಿಸಲು ಸಾಧ್ಯವಿಲ್ಲದ ಕಾರಣ ಹೈ ಫ್ಲೋ ಯಂತ್ರ ತರಿಸಲು ವೆನ್ಲಾಕ್ ಡಿಎಂಒ ಸಹಕರಿಸಿದರು. ಈ ರೀತಿ ಹಿರಿಯ ಅಧಿಕಾರಿಗಳ ಸಹಕಾರದೊಂದಿಗೆ ನಾವು ಮಗುವಿಗೆ ಚಿಕಿತ್ಸೆ ನೀಡಿದೆವು’ ಎಂದು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು