ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

400 ಮೀ. ಮೆಡ್ಲೆ ರಿಲೆ: ಚೀನಾ ಏಷ್ಯನ್ ದಾಖಲೆ

ಈಜು: ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಭಾರತ ತಂಡಕ್ಕೆ ಐದನೇ ಸ್ಥಾನ
Published 26 ಸೆಪ್ಟೆಂಬರ್ 2023, 14:48 IST
Last Updated 26 ಸೆಪ್ಟೆಂಬರ್ 2023, 14:48 IST
ಅಕ್ಷರ ಗಾತ್ರ

ಹಾಂಗ್‌ಝೌ (ಎಎಫ್‌ಪಿ): ‘ಬ್ರೆಸ್ಟ್‌ಸ್ಟ್ರೋಕ್ ದೊರೆ’ ಎನಿಸಿರುವ ಕ್ವಿನ್‌ ಹೈಯಾಂಗ್ ಅವರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಚೀನಾ ತಂಡ ಏಷ್ಯನ್‌ ಗೇಮ್ಸ್‌ನ ಈಜು ಸ್ಪರ್ಧೆಯ 4x100 ಮೀ. ಮೆಡ್ಲೆ ರಿಲೆಯಲ್ಲಿ ಏಷ್ಯನ್ ದಾಖಲೆಯೊಡನೆ ಚಿನ್ನ ಗೆದ್ದುಕೊಂಡಿತು. ಬೆಳಿಗ್ಗೆ ಹೀಟ್ಸ್‌ನಲ್ಲಿ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದ ಭಾರತ ತಂಡ ಮಂಗಳವಾರ ಸಂಜೆ ನಡೆದ ಈ ಸ್ಪರ್ಧೆಯ ಫೈನಲ್‌ನಲ್ಲಿ ಐದನೇ ಸ್ಥಾನಕ್ಕೆ ಸರಿಯಿತು.

ಕ್ವಿನ್‌, ಷು ಜಿಯಾವು, ವಾಂಗ್‌ ಚಾಂಗ್‌ಹಾವೊ ಮತ್ತು ಪಾನ್ ಝಾನ್ಲೆ ಅವರಿದ್ದ ತಂಡ 3ನಿ.27.1 ಸೆಕೆಂಡುಗಳಲ್ಲಿ ಸ್ಪರ್ಧೆ ಪೂರೈಸಿ ಈಜುಕೊಳದಲ್ಲಿ ಚೀನಾ ಪಾರಮ್ಯವನ್ನು ಮುಂದುವರಿಸಿತು. ದಕ್ಷಿಣ ಕೊರಿಯಾ (3:32.05) ಮತ್ತು ಜಪಾನ್‌ (3:32.52) ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದವು.

ಚೀನಾ ತೈಪೆ 3ನಿ.38.35 ಸೆ. ತೆಗೆದುಕೊಂಡರೆ, ಭಾರತ ತಂಡ (ಶ್ರೀಹರಿ ನಟರಾಜ್, ಲಿಖಿತ್ ಸೆಲ್ವರಾಜ್, ಸಜನ್ ಪ್ರಕಾಶ್ ಮತ್ತು ತನಿಶ್ ಜಾರ್ಜ್) 3ನಿ.40.20 ಸೆ.ಗಳಲ್ಲಿ ಗುರಿಮುಟ್ಟಿತು.

ಬೆಳಿಗ್ಗೆ ಒಂದನೇ ಹೀಟ್ಸ್‌ನಲ್ಲಿ ಭಾರತ ತಂಡ 3 ನಿ. 40.84 ಸೆ.ಗಳಲ್ಲಿ ಗುರಿತಲುಪಿ ರಾಷ್ಟ್ರೀಯ ದಾಖಲೆ ಸ್ಥಾಪಿಸಿತ್ತು. ಆ ಹಾದಿಯಲ್ಲಿ ಒಟ್ಟಾರೆ ನಾಲ್ಕನೇ ಉತ್ತಮ ಟೈಮಿಂಗ್‌ನೊಡನೆ ಫೈನಲ್‌ಗೆ ಅರ್ಹತೆ ಪಡೆದಿತ್ತು.

ಈ ಹಿಂದಿನ ದಾಖಲೆ (ನಟರಾಜ್, ಸಂದೀಪ್ ಸೆಜ್ವಾಲ್, ಸಜನ್ ಪ್ರಕಾಶ್, ಆ್ಯರನ್ ಡಿಸೋಜ ತಂಡದಿಂದ 3:44.94) 2018ರ ಕ್ರೀಡೆಗಳಲ್ಲಿ ಮೂಡಿಬಂದಿತ್ತು.

ಭಾರತದ ಪಲಕ್ ಜೋಶಿ ಮತ್ತು ಶಿವಾಂಗಿ ಶರ್ಮಾ ತಮ್ಮ ಸ್ಪರ್ಧೆಗಳಲ್ಲಿ ಫೈನಲ್‌ಗೇರಲು ವಿಫಲರಾದರು. ಪಲಕ್‌, ಮಹಿಳೆಯರ 200 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ (ಕಾಲ: 2:25.81) 19 ಮಂದಿ ಪೈಕಿ 14ನೇ ಸ್ಥಾನ ಪಡೆದರೆ, ಶಿವಾಂಗಿ 100 ಮೀ. ಫ್ರೀಸ್ಟೈಲ್‌ನಲ್ಲಿ 58.31 ಸೆ.ಗಳಲ್ಲಿ ಗುರಿತಲುಪಿ 17ನೇ ಸ್ಥಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT