ಮಂಗಳೂರು: ನಗರದಲ್ಲಿ ಬೀದಿ ಬದಿ ವ್ಯಾಪಾರ ತಡೆಯಲು ಪಾಲಿಕೆ ನಡೆಸುತ್ತಿರುವ ಟೈಗರ್ ಕಾರ್ಯಾಚರಣೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬೀದಿಬದಿ ವ್ಯಾಪಾರಿಗಳ ಶ್ರೇಯೋಭಿವೃದ್ಧಿ ಸಂಘದ ನೇತೃತ್ವದಲ್ಲಿ ಇಲ್ಲಿ ಬುಧವಾರ ಭಾರಿ ಪ್ರತಿಭಟನೆ ನಡೆಯಿತು.
ಪಿವಿಎಸ್ ವೃತ್ತದಿಂದ ಲಾಲ್‌ಭಾಗ್‌ವರೆಗೆ ಮೆರವಣಿಗೆಯಲ್ಲಿ ಸಾಗಿದ ಬೀದಿ ಬದಿ ವ್ಯಾಪಾರಿಗಳು ಪಾಲಿಕೆ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿದರು. .
ಭಾರಿ ಸಂಖ್ಯೆಯಲ್ಲಿ ಸೇರಿದ್ದ ಬೀದಿ ಬದಿ ವ್ಯಾಪಾರಿಗಳು ಪಾಲಿಕೆ ದುಡಿದುಣ್ಣುವ ಬಡವರ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ನಿಲ್ಲಿಸಬೇಕು. ಸ್ವಾಧೀನಪಡಿಸಿಕೊಂಡ ಸೊತ್ತುಗಳನ್ನು ಮರಳಿಸಬೇಕು ಎಂದು ಆಗ್ರಹಿಸಿದರು. ನಗರದ ಸಮಾನ ಮನಸ್ಕ ಸಂಘಟನೆಗಳ ಪ್ರಮುಖರು ಪ್ರತಿಭಟನೆಗೆ ಬೆಂಬಲ ಸೂಚಿಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಪಾಲಿಕೆ ಆಯುಕ್ತ ಸಿ.ಎಲ್.ಆನಂದ್, 'ಬೀದಿ ಬದಿಯ ಶಾಶ್ವತ ರಚನೆಗಳನ್ನಷ್ಟೇ ನಾವು ತೆರವುಗೊಳಿಸುತ್ತೇವೆ. ತಳ್ಳುಗಾಡಿಗಳನ್ನು ತೆರವುಗೊಳಿಸುವುದಿಲ್ಲ. 15 ದಿನಗಳೊಳಗೆ ಪಟ್ಟಣ ವ್ಯಾಪಾರ ಸಮಿತಿಯ ಸಭೆ ನಡೆಸುತ್ತೇನೆ. ಬೀದಿ ಬದಿ ವ್ಯಾಪಾರ ವಲಯ ಗುರುತಿಸಿ ಅಲ್ಲಿ ಎಲ್ಲ ಸೌಕರ್ಯ ಕಲ್ಪಿಸಿ ಗೌರವಯುತವಾಗಿ ವ್ಯಾಪಾರ ನಡೆಸಲು ವ್ಯವಸ್ಥೆ ಕಲ್ಪಿಸುತ್ತೇವೆ' ಎಂದು ಭರವಸೆ ನೀಡಿದರು.
ಭಾರಿ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಪಾಲಿಕೆ ಕಚೇರಿಯನ್ನು ನುಗ್ಗದಂತೆ ತಡೆಯಲು ಪೊಲೀಸರು ಬಿಗು ಭದ್ರತೆ ಕೈಗೊಂಡಿದ್ದರು. ಪಾಲಿಕೆ ದ್ವಾರದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಜ್, 'ಪಟ್ಟಣ ವ್ಯಾಪಾರ ಸಮಿತಿ ಸಭೆ ಮಾಡದೆ ತೆರವು ಕಾರ್ಯಾಚರಣೆ ಮಾಡುವುದು ಕಾನೂನು ಬಾಹಿರ. ಕಾರ್ಯಚರಣೆ ವೇಳೆ ಅಧಿಕಾರಿಗಳು ಬಡ ವ್ಯಾಪಾರಿಗಳ ಜೊತೆ ಅನಾಗರಿಕವಾಗಿ, ಅಮಾನುಷವಾಗಿ ವರ್ತಿಸಿದ್ದಾರೆ.ಪಾಲಿಕೆ ದಬ್ಬಾಳಿಕೆಯಿಂದ ಬಡ ವ್ಯಾಪಾರಿಗಳ ಎಷ್ಟೋ ಕುಟುಂಬಗಳು ಅಕ್ಷರಶಃ ಬೀದಿಗೆ ಬಿದ್ದಿವೆ' ಎಂದು ದೂರಿದರು.
'ಮೇಯರ್ ಸುಧೀರ್ ಶೆಟ್ಟಿ ಅವರೂ ಕೂಡ ಒಬ್ಬ ಬೀದಿ ಬದಿ ವ್ಯಾಪಾರಿ ಮಗ ಎಂಬುದು ನೆನಪಿರಲಿ. ಅವರ ತಂದೆ ಇಟ್ಟಿದ್ದ ಗೂಡಂಗಡಿಯನ್ನು ಇದೇ ರೀತಿ ತೆರವು ಮಾಡುತ್ತಿದ್ದರೆ ಇಂದು ಸುಧೀರ್ ಶೆಟ್ಟಿ ಮೇಯರ್ ಆಗುತ್ತಿರಲಿಲ್ಲ' ಎಂದರು.
'ಗೂಡಂಗಡಿ ವ್ಯಾಪಾರಿಯ ಮಗನಾದ ಮೇಯರ್ ಆಗಿ ಸರ್ವಾಧಿಕಾರಿಯಾಗಿ ವರ್ತಿಸುತ್ತಿರುವುದು ಅಮಾನವೀಯ' ಎಂದು ಹೇಳಿದರು.
'ನಾವು ಹೋರಾಟಕ್ಕೆ ಇಳಿದಿರುವುದು ಒಂದೊಂದು ಗಾಡಿ ಇಟ್ಟು ಬದುಕು ಕಟ್ಟಿಕೊಳ್ಳಲು ವ್ಯಾಪಾರ ನಡೆಸುವವರ ಪರ. ಮೇಯರ್ ಹೇಳಿರುವಂತೆ ಒಬ್ಬೊಬ್ಬರು 200 ತಳ್ಳು ಗಾಡಿ ಹೊಂದಿದ್ದಾರೆ ಎಂದು ತೋರಿಸಿದರೆ ನಾವು ಹೋರಾಟ ತ್ಯಜಿಸುತ್ತೇವೆ' ಎಂದು ಸವಾಲು ಹಾಕಿದರು.
10 ಕಡೆ ವ್ಯಾಪಾರ ವಲಯ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿದ್ದು ಬೀದಿ ಬದಿ ವ್ಯಾಪಾರಿಗಳ ಸಂಘಟನೆ. ನಿಮ್ಮ ಪ್ರಯತ್ನ ದಿಂದ ಅಲ್ಲ ಎಂದು ಇಮ್ತಿಯಾಜ್ ಹೇಳಿದರು.
ನಗರದಲ್ಲಿ 8,500 ಮಂದಿಗೆ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಕ್ಕೆ ಸಾಲ ಕೊಡಲಾಗಿದೆ. ಆದರೆ 667 ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲು ಸಾಧ್ಯ ಆಗಿಲ್ಲ. ನೀವು ಹಾಕಿರುವ ಷರತ್ತು ಬೀದಿ ಬದಿ ವ್ಯಾಪಾರಿಗಳ ಕಾನೂನು ಪ್ರಕಾರ ಇಲ್ಲ. ಬಿಜೆಪಿ ಅಂದರೆ ಬುಲ್ಡೋಜರ್ ಪಕ್ಷ ಎನ್ನುವುದನ್ನು ಮಂಗಳೂರಿನಲ್ಲಿ ಟೈಗರ್ ಕಾರ್ಯಾಚರಣೆ ಮೂಲಕ ಸಾಬೀತು ಪಡಿಸಿದ್ದಾರೆ ಎಂದು ಅವರು ಆರೋಪಿಸಿದರು.
ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದ ರೈತ ಮುಖಂಡ ಯಾದವ ಶೆಟ್ಟಿ 'ಪಾಲಿಕೆಯುವ ಮೇಯರ್ ಅಥವಾ ಸದಸ್ಯರ ಪಿತ್ರಾರ್ಜಿತ ಆಸ್ತಿ ಅಲ್ಲ. ಇದು ನಮ್ಮ ಭೂಮಿ. ಬೀದಿ ಬದಿ ವ್ಯಾಪಾರ ನಮ್ಮ ಹಕ್ಕು' ಎಂದು ಹೇಳಿದರು.
ಸಮಾನ ಮನಸ್ಕ ಸಂಘಟನೆಯ ಪ್ರಮುಖರಾದ ಮಂಜುಳಾ ನಾಯಕ್ ಮಾತನಾಡಿ, ಶಾಸಕ ವೇದವ್ಯಾಸ ಕಾಮತ್‌ಗೆ ತಾಕತ್ತಿದ್ದರೆ ಎಲ್ಲ ಬೀದಿ ಬದಿ ವ್ಯಾಪಾರಿಗಳಿಗೆ ಕೆಲಸ ಕೊಡಲಿ. ಆಗ ಅವರು ಬೀದಿ ವ್ಯಾಪಾರ ನಿಲ್ಲಿಸುತ್ತಾರೆ' ಎಂದು ಸವಾಲು ಹಾಕಿದರು.
'ದ.ಕ ಜಿಲ್ಲೆಯಲ್ಲಿ ಬಿಜೆಪಿಯ ಉತ್ತರ ಪ್ರದೇಶ ಮಾದರಿ ನಡೆಯದು' ಎಂದರು.
ಪ್ರಮುಖರಾದ ಎಂ. ದೇವದಾಸ್, ಬಿ.ಎಂ ಭಟ್, ಸುನಿಲ್ ಕುಮಾರ್ ಬಜಾಲ್, ಕರುಣಾಕರ್, ಪದ್ಮಾವತಿ ಶೆಟ್ಟಿ, ಸುಕುಮಾರ್ ತೊಕ್ಕೊಟ್ಟು, ವಿ. ಕುಕ್ಯಾನ್, ಸೀತಾರಾಂ ಬೇರಿಂಜ, ಮುಹಮ್ಮದ್ ಕುಂಜತ್ತಬೈಲ್, ಶೇಖರ್, ಮನೋಜ್ ವಾಮಂಜೂರು, ಸಂತೋಷ್ ಕುಮಾರ್ ಬಜಾಲ್, ಜಯಂತಿ ಶೆಟ್ಟಿ ಮೊದಲದವರು ಮಾತನಾಡಿದರು.
ನವೀನ್ ಕೊಂಚಾಡಿ, ರಿಜ್ವಾನ್ ಹರೇಕಳ, ಮೀನ ಟೆಲ್ಲಿಸ್, ಮಂಜುಳಾ ನಾಯಕ್, ಜಯಂತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಸುರೇಶ್ ಕುಮಾರ್, ಶೇಖರ್, ದಯಾನಂದ್ ಶೆಟ್ಟಿ, ಕವಿತಾ ವಾಸು,, ಭಾರತಿ ಬೋಳಾರ್, ಬೀದಿ ಬದಿ ವ್ಯಾಪಾರಿಗಳ ಸಂಘಟನೆಯ ಅಧ್ಯಕ್ಷ ಮುಹಮ್ಮದ್ ಮುಸ್ತಾಫ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪ್ರತಿಭಟನೆ: ಎಸ್‌ಡಿಟಿಯುಗೆ ಅವಕಾಶ ನಿರಾಕರಣೆ
ಎಸ್‌ಡಿಟಿಯು ಕಾರ್ಯಕರ್ತರು ತಮ್ಮ ಸಂಘಟನೆಯ ಬಾವುಟ ದೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದಿದ್ದರು. ಇದಕ್ಕೆ ಪ್ರತಿಭಟನಾಕಾರರು ಆಕ್ಷೇಪಿಸಿದರು. ಸಮಾನ ಮನಸ್ಕ ಸಂಘಟನೆ ಸಮಸ್ತ ಧರ್ಮಗಳ ಪರವಾಗಿರುವಂತಹದ್ದು. ಯಾವುದೇ ಧರ್ಮದ ಬಾವುಟದೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸುವುದು ಬೇಡ ಎಂದು ಬೀದಿ ಬದಿಬದಿ ವ್ಯಾಪಾರಿಗಳ ಸಂಘಟನೆಯ ಪ್ರಮುಖರು ಹೇಳಿದರು. ಎಸ್‌ಡಿಟಿಯು ಕಾರ್ಯ ಕರ್ತರನ್ನು ಪೊಲೀಸರು ಹೊರ ಕಳುಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.