ಮಂಗಳೂರು: ಪಿತ್ತಜನಕಾಂಗದಲ್ಲಿ ಕಾಣಿಸಿಕೊಂಡ ಕ್ಯಾನ್ಸರ್ ಗೆಡ್ಡೆ ಅವರ ಬದುಕನ್ನೇ ಹಿಂಡಿ ಹಿಪ್ಪೆ ಮಾಡಲು ಹೊರಟಿತ್ತು. ಛಲಬಿಡದೆ ಹೋರಾಟ ನಡೆಸಿ ಕ್ಯಾನ್ಸರ್ ಗೆಲ್ಲಲು ಹೊರಟ ಅವರು ಈಗ ಮತ್ತೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಅವರ ಚಿಂತೆಗೆ ಕಾರಣ ಕ್ಯಾನ್ಸರ್ ಅಲ್ಲ; ಅವರ ‘ಬದುಕಿನ ಬುತ್ತಿ’ಯನ್ನೇ ಕಸಿಯಲು ಹೊರಟ ಪಾಲಿಕೆಯ ‘ಟೈಗರ್’ ಕಾರ್ಯಾಚರಣೆ!
ಜೀವನೋಪಾಯಕ್ಕಾಗಿ ಲೇಡಿಹಿಲ್ ಬಳಿ ತಳ್ಳುಗಾಡಿಯಲ್ಲಿ ಆಮ್ಲೆಟ್, ಚುರುಮುರಿ ಮಾರುತ್ತಿದ್ದ ಬೊಕ್ಕಪಟ್ಣದ ರಹಮತ್ ಅವರ ಕರುಣಾಜನಕ ಕತೆ ಇದು.
‘ಕ್ಯಾನ್ಸರ್ ತಪಾಸಣೆ ಮತ್ತು ಚಿಕಿತ್ಸೆಗೆ ಪ್ರತಿ ಬಾರಿ ₹ 3,500 ತೆಗೆದಿಡಬೇಕು. ಔಷಧದ ಖರ್ಚು ಬೇರೆ. ಜತೆಗೆ ಕುಟುಂಬವನ್ನು ನಿಭಾಯಿಸಬೇಕು. ಮನೆ ಬಾಡಿಗೆಯನ್ನೂ ಕಟ್ಟಬೇಕು. ಈಗಿನ್ನೂ ಯುಕೆಜಿಯಲ್ಲಿರುವ ಮಗಳ ಶಿಕ್ಷಣದ ವೆಚ್ಚವನ್ನೂ ಭರಿಸಬೇಕು. ಅಲ್ಲದೇ, ವರ್ಷಕ್ಕೊಮ್ಮೆ ನಡೆಸಲೇ ಬೇಕಾದ ಸಂಪೂರ್ಣ ರಕ್ತ ತಪಾಸಣೆಗೂ ಹಣ ಹೊಂದಿಸಬೇಕು. ಕ್ಯಾನ್ಸರ್ ಗೆಲ್ಲುವ ಹೋರಾಟದಲ್ಲಿ ಬಸವಳಿದಿರುವ ಅವರೀಗ ಇಷ್ಟೆಲ್ಲ ಆರ್ಥಿಕ ಹೊರೆಗಳನ್ನು ನಿಭಾಯಿಸುವುದೆಂತು’ ಎಂದು ರಹಮತ್ ’ಪ್ರಜಾವಾಣಿ‘ ಬಳಿ ಅಳಲು ತೋಡಿಕೊಂಡರು.
‘ಎಂಟನೇ ತರಗತಿವರೆಗೆ ಕಲಿತ ನಾನು ನಗರದ ಕೇಂದ್ರೀಯ ಮಾರುಕಟ್ಟೆಯಲ್ಲಿ ಕೂಲಿ ಮಾಡಿಕೊಂಡಿದ್ದೆ. ಆ ಮಾರುಕಟ್ಟೆಯನ್ನು ಕೆಡವಿದ ಬಳಿಕ ವಾಹನಗಳ ಚಾಲಕನಾಗಿದ್ದೆ. ದೇಹದಾರ್ಢ್ಯಪಟುಗಳಿಗೆ ತರಬೇತುದಾರನಾಗಿಯೂ ಕೆಲಸ ಮಾಡಿದ್ದೆ. ಜೀವನೋಪಾಯದ ಈ ಎಲ್ಲ ಅವಕಾಶಗಳನ್ನೂ ಕ್ಯಾನ್ಸರ್ ಕಸಿದುಕೊಂಡಿದೆ. ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದೇನೆ. ನನಗೀಗ ಕಷ್ಟದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಎಂಟು ತಿಂಗಳ ಹಿಂದೆ ಲೇಡಿಹಿಲ್ ಬಳಿ ತಳ್ಳುಗಾಡಿಯಲ್ಲಿ ಆಮ್ಲೆಟ್ ಹಾಗೂ ಚುರುಮುರಿ ವ್ಯಾಪಾರ ಆರಂಭಿಸಿದ್ದೆ. ಇದರ ಆದಾಯದಲ್ಲೇ ಕುಟುಂಬವನ್ನು ಸಾಕಿ, ಚಿಕಿತ್ಸೆ ವೆಚ್ಚವನ್ನೂ ಹೊಂದಿಸಬೇಕಿದೆ’ ಎಂದರು.
‘ಯುಕೆಜಿ ಕಲಿಯುತ್ತಿರುವ ಮಗಳ ಅರ್ಧ ವರ್ಷದ ಶುಲ್ಕವನ್ನು ಮಾತ್ರ ಕಟ್ಟಿದ್ದೇನೆ. ಇನ್ನರ್ಧ ಶುಲ್ಕವನ್ನು ಇನ್ನೆರಡು ತಿಂಗಳಲ್ಲಿ ಕಟ್ಟಬೇಕಿದೆ. ದೇಹದ ರಕ್ತದ ಸಮಗ್ರ ತಪಾಸಣೆ ನಡೆಸುವಂತೆ ವೈದ್ಯರು ಸೂಚಿಸಿದ್ದಾರೆ. ಇದಕ್ಕೆ ಸರ್ಕಾರಿ ಆಸ್ಪತ್ರೆಯಲ್ಲೂ ಕನಿಷ್ಠ₹12 ಸಾವಿರದಿಂದ ₹ 15 ಸಾವಿರ ವೆಚ್ಚವಾಗುತ್ತದೆ. ಇಷ್ಟೆಲ್ಲ ಬವಣೆಗಳ ನಡುವೆ ಪಾಲಿಕೆಯ ‘ಟೈಗರ್’ ನನ್ನ ಬದುಕನ್ನೇ ಕಿತ್ತು ತಿನ್ನಲು ಮುಂದಾಗಿದೆ. ಮುಂದೇನು ಮಾಡಬೇಕೆಂದೇ ತೋಡುತ್ತಿಲ್ಲ’ ಎಂದರು.
‘ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ₹ 10 ಸಾವಿರ ಸಾಲ ಪಡೆದಿದ್ದೆ. ಮರುಪಾವತಿ ಕಷ್ಟವಾಗುತ್ತದೆ ಎಂದು ಎರಡನೇ ಕಂತಿನ ಸಾಲ ಬೇಡವೆಂದಿದ್ದೆ. ಆದರೂ ಒತ್ತಾಯದಿಂದ ₹ 20ಸಾವಿರ ಸಾಲ ನೀಡಿದರು. ಈಗ ಆ ಸಾಲವನ್ನು ಮರಳಿಸಲು ದಾರಿ ತೋರುತ್ತಿಲ್ಲ’ ಎಂದು ಅವರು ತಿಳಿಸಿದರು.
‘ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲದೇ ಅನೇಕ ಮಂದಿ ಬೀದಿ ಬದಿ ವ್ಯಾಪಾರಕ್ಕೆ ಇಳಿದಿದ್ದಾರೆ. ಬದುಕಲು ಬೇರೆ ದಾರಿ ಇಲ್ಲದ ಅವರಿಗೆ ಇದು ಅನಿವಾರ್ಯ. ಅವರ ಕಷ್ಟಗಳನ್ನು ಪಾಲಿಕೆ ಅರ್ಥ ಮಾಡಿಕೊಳ್ಳಬೇಕು. ಬಡವರ ಅನ್ನದ ಬಟ್ಟಲನ್ನು ಕಸಿದುಕೊಳ್ಳಬಾರದು’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬೀದಿಬದಿ ವ್ಯಾಪಾರಿಗಳ ಶ್ರೇಯೋಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಜ್ ಒತ್ತಾಯಿಸಿದರು.
‘ನನಗೆ ಗೊತ್ತಿರುವುದು ಅಡುಗೆ ಮಾತ್ರ. ಅದು ಬಿಟ್ಟು ನನಗೆ ಬೇರೆ ಕೆಲಸ ಗೊತ್ತಿಲ್ಲ. ಅದನ್ನೇ ನೆಚ್ಚಿಕೊಂಡು ಪುಟ್ಟ ವಾಹನದಲ್ಲಿ ವ್ಯಾಪಾರ ಮಾಡಿ ಹೇಗೋ ಜೀವನ ಸಾಗಿಸುತ್ತಿದ್ದೇನೆ. ಈಗ ಅದಲ್ಲೂ ಕಲ್ಲು ಹಾಕಿದ್ದಾರೆ’ ಎಂದು ಸುರತ್ಕಲ್‌ನಲ್ಲಿ ಪುಟ್ಟ ವಾಹನದಲ್ಲಿ ಆಹಾರ ಮಾರಾಟ ಮಾಡುವ ಶೈಲಾ ಅಳಲು ತೋಡಿಕೊಂಡರು. ‘ನಾವು ಪ್ರತಿಭಟನೆ ನಡೆಸಿದಾಗ ಸ್ಥಳಕ್ಕೆ ಬಂದ ಪಾಲಿಕೆ ಆಯುಕ್ತರು ‘ತಳ್ಳುಗಾಡಿ ವ್ಯಾಪಾರಕ್ಕೆ ಹಾಗೂ ಬೀದಿ ಬದಿ ಕುಳಿತು ನಡೆಸುವ ವ್ಯಾಪಾರಕ್ಕೆ ಅಡ್ಡಿಪಡಿಸುವುದಿಲ್ಲ’ ಎಂದು ಭರವಸೆ ನೀಡಿದ್ದರು. ಇವತ್ತು ನಾನು ಅನ್ನ ಸಾಂಬಾರ್ ಚಿಕನ್ ಬಿರಿಯಾನಿ ತಯಾರಿಸಿ ತಂದಿದ್ದೆ. ಅದನ್ನು ಮಾರಲು ಅವಕಾಶ ನೀಡುವುದಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಹೇಳಿದರು.
ಅದು ಮಾರಾಟವಾಗದಿದ್ದರೆ ನನಗೆ ಸಾವಿರಾರು ರೂಪಾಯಿ ನಷ್ಟ. ನಮ್ಮ ಕಷ್ಟವನ್ನು ಯಾರಲ್ಲಿ ಹೇಳಿಕೊಳ್ಳುವುದು’ ಎಂದು ಅವರು ಪ್ರಶ್ನಿಸಿದರು. ‘ಎಂಆರ್‌ಪಿಎಲ್‌ನಲ್ಲಿ ವಾಹನ ಚಾಲಕರಾಗಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದ ಗಂಡ ಈಗ ನಿವೃತ್ತರಾಗಿದ್ದಾರೆ. ಮಗಳ ಮದುವೆಗಾಗಿ ಮಾಡಿರುವ ₹ 5 ಲಕ್ಷ ಸಾಲ ವಾಹನಕ್ಕಾಗಿ ಮಾಡಿದ ₹ 3.5 ಲಕ್ಷ ಸಾಲದ ಹೊರೆ ಇದೆ. ಈ ಸಾಲದ ಕಂತು ಕಟ್ಟಲು ಪ್ರತಿ ತಿಂಗಳು ₹ 17 ಸಾವಿರ ಬೇಕು. ಜೀವನೋಪಾಯಕ್ಕೆ ಈ ತಳ್ಳುಗಾಡಿ ಬಿಟ್ಟು ಬೇರೆ ದಾರಿ ಇಲ್ಲ’ ಎಂದರು.
‘ರಾತ್ರಿ 12ಗಂಟೆವರೆಗೆ ದುಡಿಯುವ ನಾನು ಮರುದಿನ ಬೆಳಿಗ್ಗೆ 4 ಗಂಟೆ ಎದ್ದು ಅಡುಗೆ ಮಾಡಬೇಕು. ರಾತ್ರಿ–ಹಗಲು ದುಡಿದರೂ ಜೀವನ ಸಾಗಿಸಲು ಕಷ್ಟವಾಗುತ್ತಿದೆ. ಆದರೂ ನಾನು ಲಾಭದ ಮುಖ ನೋಡದೆ ವಿದ್ಯಾರ್ಥಿಗಳಿಗೆ ₹ 10ಕ್ಕೆ ಊಟ ನೀಡುತ್ತೇನೆ. ಭಿಕ್ಷುಕರಿಗೆ ಉಚಿತ ಊಟ ನೀಡುತ್ತೇನೆ. ಪಾಲಿಕೆ ನಮ್ಮ ಕಷ್ಟವನ್ನೂ ಅರ್ಥಮಾಡಿಕೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.