ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಪುರಾತನ ಕೆರೆ ತುಂಬಿದ್ದು, ಅದರ ಗೇಟ್ ತೆರೆಯಲು ಹರಸಾಹಸ ನಡೆಸಿದ ಘಟನೆ ನಡೆದಿದೆ. ಮುಳುಗು ತಜ್ಞ ಈಶ್ವರ ಮಲ್ಪೆ ತಂಡದವರು ಕಾರ್ಯಾಚರಣೆ ನಡೆಸಿ ಸಂಭವನೀಯ ಅಪಾಯ ತಪ್ಪಿಸಿದರು.
ಅರಣ್ಯ ಭಾಗದಲ್ಲಿ 27.47 ಎಕರೆಯಲ್ಲಿರುವ ಈ ಕೆರೆ ಗ್ರಾಮದ ಸುಮಾರು 300 ಕುಟುಂಬಗಳಿಗೆ ಆಸರೆಯಾಗಿದೆ.
ಈ ಬಾರಿ ಮಳೆಗೆ ಕೆರೆಯು ಸಂಪೂರ್ಣ ತುಂಬಿದೆ. ಕೆರೆ ನೀರು ಹೊರ ಬಿಡಲು ಅಳವಡಿಸಲಾದ ಗೇಟು ಮುಚ್ಚಿದ್ದು, ಅದನ್ನು ತೆರೆಯಲು ಪಂಚಾಯಿತಿ ಮತ್ತು ಸ್ಥಳೀಯರು ಪ್ರಯತ್ನಿಸಿದ್ದಾರೆ. ಕೆರೆಯಲ್ಲಿ ಹೆಚ್ಚಿನ ನೀರು ತುಂಬಿದ್ದರಿಂದ ಸಾಧ್ಯವಾಗಲಿಲ್ಲ. ಗೇಟು ತೆರೆದಾಗ ನೀರು ಸ್ಥಳೀಯ ತೋಡಿಗೆ ಹರಿದು ಕೆರೆಯಲ್ಲಿ ನೀರಿನ ಮಟ್ಟ ಹಾಗೂ ನೀರಿನ ಒತ್ತಡ ಕಡಿಮೆಯಾಗುತ್ತದೆ. ಗೇಟ್ ತೆರೆಯದೆ ಇದ್ದರೆ ಕೆರೆದಂಡೆ ಒಡೆದು ನೆಲ್ಲಿಗುಡ್ಡೆ, ಕಂಚರಿ ಕಂಡ, ಬೆಂದ್ರಾಳ ಪ್ರದೇಶಗಳ ಜನರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇತ್ತು.
ಈಶ್ವರ್ ಮಲ್ಪೆ ಅವರ ತಂಡ ಶನಿವಾರ ಬಂದು ಸುಮಾರು 20 ಅಡಿ ಆಳಕ್ಕೆ ಇಳಿದು ಕಾರ್ಯಾಚರಣೆ ನಡೆಸಿತು. ಬೇಸಿಗೆಯಲ್ಲಿ ನೀರು ಸಂಗ್ರಹಿಸಲು ಇಟ್ಟಿದ್ದ ಮರಳಿನ ಗೋಣಿಚೀಲ ಗೇಟಿಗೆ ಸಿಲುಕಿದ್ದು, ಅವುಗಳನ್ನು ಸರಿಸಿ ಗೇಟು ತೆರೆದರು. ಈಗ ನೀರು ಸರಾಗವಾಗಿ ಹರಿಯುತ್ತಿದ್ದು, ಕೆರೆ ದಂಡೆ ಒಡೆಯುವ ಭಯ ದೂರವಾಗಿದೆ.
ಹೂಳು ತುಂಬಿ ಶಿಥಿಲಾವಸ್ಥೆ ತಲುಪಿರುವ ಈ ಕೆರೆ ಮತ್ತು ಸುತ್ತಲ ಪ್ರದೇಶದ ಅಭಿವೃದ್ಧಿಗೆ ನಬಾರ್ಡ್ ಯೋಜನೆ ರೂಪಿಸಿದ್ದು, ಹಲವು ಸಮೀಕ್ಷೆ ನಡೆಸಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ಕೆರೆ ಅಭಿವೃದ್ಧಿಗೆ ಒಪ್ಪಿಗೆ ಪಡೆದಿದೆ. ಮುಂದಿನ ಬೇಸಿಗೆಯಲ್ಲಿ ಈ ಕೆರೆಯ ಅಭಿವೃದ್ಧಿ ಕಾರ್ಯ ಆರಂಭವಾಗುವ ನಿರೀಕ್ಷೆ ಇದೆ.
ಈ ವೇಳೆ ತಹಶೀಲ್ದಾರ್ ಪೃಥ್ವಿ ಸಾನಿಕಂ, ಅರಣ್ಯ, ಪೊಲೀಸ್, ಅಗ್ನಿಶಾಮಕ ದಳ, ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ, ವಿ.ಎ.ಹೆರಾಲ್ಡ್ ಡಿಸೋಜ, ಪಿಡಿಒ ಪುರುಷೋತ್ತಮ ಜಿ. ಸ್ಥಳದಲ್ಲಿದ್ದರು.