ಸೋಮವಾರ, ಜನವರಿ 17, 2022
18 °C
ಮಕ್ಕಳ ಹಕ್ಕು ರಕ್ಷಣಾ ಆಯೋಗದಿಂದ ಪರಿಹಾರದ ಭರವಸೆ

ಮಂಗಳೂರು: ಸಮಸ್ಯೆ ಹೇಳಿ ನಿರಾಳರಾದ ಮಕ್ಕಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಆನ್‍ಲೈನ್‍ನಲ್ಲಿ ಸರಿಯಾಗಿ ಪಾಠ ಕೇಳಲು ಸಾಧ್ಯವಾಗಿಲ್ಲ. ಮೊಬೈಲ್ ಖರೀದಿಸಲು ಹಣ ಇರಲಿಲ್ಲ, ಮೊಬೈಲ್ ಇದ್ದರೂ ಡಾಟಾ ರಿಚಾರ್ಜ್ ಮಾಡಲು ಹಣ ಇರಲಿಲ್ಲ, ಹಿಂದಿನ ವರ್ಷ ಪಠ್ಯ ಕಡಿತ ಮಾಡಿದ್ದರಿಂದ ಈಗ ಪಾಠ ಅರ್ಥವಾಗುತ್ತಿಲ್ಲ, ಮೊಬೈಲ್ ಪಾಠ ಕೇಳಿ ಮೈಗ್ರೇನ್ ಶುರುವಾಗಿತ್ತು, ಹೆತ್ತವರನ್ನು ಕಳೆದುಕೊಂಡೆವು, ಕೋವಿಡ್ ಭಯದಿಂದ ನೆರಮನೆಯವರೂ ದೂರವಿಟ್ಟರು ಹೀಗೆ ಹಲವಾರು ಸಮಸ್ಯೆಗಳನ್ನು ವಿದ್ಯಾರ್ಥಿಗಳು ತೆರೆದಿಟ್ಟರು.

ಮಕ್ಕಳ ಹಕ್ಕುಗಳ ಮಾಸಾಚರಣೆ ಅಂಗವಾಗಿ ಕೋವಿಡ್- 19 ವೇಳೆ ಮಕ್ಕಳ ಮೇಲಾಗಿರುವ ದುಷ್ಪರಿಣಾಮಗಳ ಕುರಿತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಿ.ಶಂಕರಪ್ಪ ನೇತೃತ್ವದಲ್ಲಿ ಶನಿವಾರ ಇಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 42 ಮಕ್ಕಳು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಮೂರು ಗುಂಪುಗಳ ಮೂಲಕ ಸಾಮೂಹಿಕ ಚರ್ಚೆ ನಡೆಸಿ, ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಪಂಜಿಮೊಗರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳನ್ನು ಹೀಯಾಳಿಸಿ ಅವಮಾನ ಮಾಡುತ್ತಾರೆ. ಶಾಲೆಯಲ್ಲಿ ಕಲಿಯುವ ವಾತಾವರಣ ಇಲ್ಲ ಎಂದು ವಿದ್ಯಾರ್ಥಿನಿಯೊಬ್ಬರು ದೂರಿದಾಗ, ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಶಂಕರಪ್ಪ ಹೇಳಿದರು.

ಪುತ್ತೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಶೌಚಾಲಯವಿದ್ದರೂ ಬಳಕೆ ಮಾಡಲು ಬಿಡುತ್ತಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕೇಳಿದರೆ ಇದು ಸರ್ಕಾರಿ ವ್ಯವಸ್ಥೆ ಎಂಬ ಉತ್ತರ ಸಿಗುತ್ತಿದೆ ಎಂಬ ವಿದ್ಯಾರ್ಥಿಯೊಬ್ಬರ ದೂರಿಗೆ ಪ್ರತಿಕ್ರಿಯಿಸಿದ ಶಂಕರಪ್ಪ, ಇದನ್ನು ಗಂಭೀರವಾಗಿ ಪರಿಗಣಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಸ್ವಾಮಿ ಮಾಹಿತಿ ನೀಡಿ, ‘ಎಸ್ಸೆಸ್ಸೆಲ್ಸಿ ಹೊರತುಪಡಿಸಿ ಇತರ ಎಲ್ಲ ತರಗತಿಗಳಿಗೆ ಬ್ರಿಡ್ಜ್ ಕೋರ್ಸ್ ತರಬೇತಿ ನೀಡಲಾಗುತ್ತದೆ. ಆರೋಗ್ಯವೇ ಮುಖ್ಯವಾದ ಕಾರಣದಿಂದ ಕೋವಿಡ್ ವೇಳೆ ಬೌದ್ಧಿಕ ತರಗತಿ ಕಡ್ಡಾಯಗೊಳಿಸಿಲ್ಲ. ವಿದ್ಯಾರ್ಥಿಗಳು ಲಾಕ್‌ಡೌನ್ ಸಂದರ್ಭದಲ್ಲಿ ಟೇಲರಿಂಗ್, ಸೈಕ್ಲಿಂಗ್‌ನಂತಹ ಚಟುವಟಿಕೆ ಕಲಿತುಕೊಂಡಿದ್ದಾರೆ’ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಾಪ ಭೋವಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜ, ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ ಶಿವಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ಜಿ. ಇದ್ದರು.

ಸಂಸ್ಥೆ ವಿರುದ್ಧ ಕ್ರಮಕ್ಕೆ ಸೂಚನೆ

ಪುತ್ತೂರಿನ ಶಿಕ್ಷಣ ಸಂಸ್ಥೆಯೊಂದರಲ್ಲಿ ನೆರೆಯ ದೇಶದ ಧ್ವಜವನ್ನು ಮಕ್ಕಳ ಕೈಯಿಂದ ಸುಟ್ಟು ಹಾಕಿಸುವ ಮೂಲಕ ದ್ವೇಷ ಹುಟ್ಟು ಹಾಕುವ ಪ್ರಕರಣ ವರದಿಯಾಗಿದ್ದು, ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಿರ್ದೇಶನ ನೀಡಿದೆ.

‘ಶಾಲೆಯ ಅಸೆಂಬ್ಲಿಯಲ್ಲಿ ಬೇರೆ ರಾಷ್ಟ್ರದ ವಿರುದ್ಧ ಘೋಷಣೆ, ಧ್ವಜ ಸುಟ್ಟಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಮಕ್ಕಳನ್ನು ಇಂಥ ಕೃತ್ಯಕ್ಕೆ ಬಳಕೆ ಮಾಡಿರುವುದು ಎಷ್ಟು ಸರಿ’ ಎಂದು ಮಂಗಳೂರು ವಿಶೇಷ ಮಕ್ಕಳ ಪೊಲೀಸ್ ಅಧೀಕ್ಷಕರ ವ್ಯಾಪ್ತಿಯ ಹಿರಿಯ ಮಕ್ಕಳ ರಕ್ಷಣಾಧಿಕಾರಿ ಡಾ.ಗಾನ ಪಿ.ಕುಮಾರ್ ಗಮನ ಸೆಳೆದರು.

‘ಶಾಲೆ ಆವರಣದಲ್ಲಿ ಇಂಥ ಕೃತ್ಯ ನಡೆಸಿದವರ ಮೇಲೆ ಪ್ರಕರಣ ದಾಖಲಿಸಬೇಕು. ಶಾಲೆಗಳಲ್ಲಿ ಕೋಮುದ್ವೇಷ, ಕಾನೂನು ಸುವ್ಯವಸ್ಥೆ ಹದಗೆಡಲು ಅವಕಾಶ ಕೊಡಬಾರದು. ಪೊಲೀಸರು ಸಂಬಂಧಪಟ್ಟ ಶಾಲೆಗೆ ಭೇಟಿ ನೀಡಿ, ಮಕ್ಕಳನ್ನು ಈ ಕೆಲಸಕ್ಕೆ ಬಳಕೆ ಮಾಡಿದವರ ವಿರುದ್ಧ ಎಫ್‍ಐಆರ್ ದಾಖಲಿಸಬೇಕು. ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ, ಅವರ ಮೇಲೂ ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಿ.ಶಂಕರಪ್ಪ ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು