ಗುರುವಾರ , ಮೇ 28, 2020
27 °C

ಮಂಜೇಶ್ವರ ಈಗ ‘ಕನ್ನಡ ಭಾಷಾ ಅಲ್ಪಸಂಖ್ಯಾತ ಪ್ರದೇಶ’: ಕೇರಳ ಸರ್ಕಾರದ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ರಾಜ್ಯದ ಗಡಿಗೆ ಹೊಂದಿಕೊಂಡಿರುವ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲ್ಲೂಕು ವ್ಯಾಪ್ತಿಯನ್ನು ‘ಕನ್ನಡ ಭಾಷೆಯ ಅಲ್ಪಸಂಖ್ಯಾತ ಪ್ರದೇಶ’ ಎಂಬುದಾಗಿ ಕೇರಳ ಸರ್ಕಾರ ಘೋಷಣೆ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಮಂಜೇಶ್ವರ ತಾಲ್ಲೂಕಿಗೆ ಕನ್ನಡ ಭಾಷೆಯ ಅಲ್ಪಸಂಖ್ಯಾತ ಪ್ರದೇಶ ಸ್ಥಾನಮಾನವನ್ನು ನೀಡಿ ಕೇರಳ ಸರ್ಕಾರ ಆದೇಶ ಹೊರಡಿಸಿದೆ.

ಕನ್ನಡ ಭಾಷೆಯ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡನ್ನು ವಿಭಜಿಸುವ ಮೂಲಕ ಮಂಜೇಶ್ವರವನ್ನು ಪ್ರತ್ಯೇಕ ತಾಲ್ಲೂಕನ್ನಾಗಿ ಮಾಡಲಾಗಿತ್ತು. ಆದರೆ, ಆ ವೇಳೆ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನವನ್ನು ಮಂಜೇಶ್ವರಕ್ಕೆ ನೀಡಿರಲಿಲ್ಲ. ಇದರಿಂದಾಗಿ ಅಲ್ಲಿನ ಕನ್ನಡಿಗರು ಕೆಲ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಪ್ರದೇಶ ಕರ್ನಾಟಕ ಸಮಿತಿಯ ಅಧ್ಯಕ್ಷ, ವಕೀಲ ಕೆ.ಎಂ. ಬಳ್ಳಕುರಾಯ ಅವರು 2014 ರಲ್ಲಿಯೇ ಮಂಜೇಶ್ವರ ತಾಲ್ಲೂಕಿಗೆ ಈ ಸ್ಥಾನಮಾನ ನೀಡುವ ಕುರಿತು ಹೋರಾಟಕ್ಕೆ ಮುಂದಾಗಿದ್ದರು. ಈ ಬೇಡಿಕೆಯ ಕುರಿತು ಜಿಲ್ಲಾಧಿಕಾರಿ ಮತ್ತು ರಾಜ್ಯ ಅಲ್ಪಸಂಖ್ಯಾತರ ಸಮಿತಿಯೊಂದಿಗೆ ಸಕ್ರಿಯವಾಗಿ ಚರ್ಚಿಸಿ, ಪ್ರತಿಭಟನೆ, ಮುಷ್ಕರಗಳು ನಡೆದಿದ್ದವು.

ಒಂದು ನಿಯೋಗವು ತಿರುವನಂತಪುರಕ್ಕೆ ಭೇಟಿ ನೀಡಿ ಮಂಜೇಶ್ವರವನ್ನು ಭಾಷಾ ಅಲ್ಪಸಂಖ್ಯಾತ ಪ್ರದೇಶವೆಂದು ಘೋಷಿಸುವ ಅಗತ್ಯದ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿತು. ಆರು ತಿಂಗಳಿನಿಂದ ಮುಖ್ಯಮಂತ್ರಿ ಕಚೇರಿಯಲ್ಲಿ ಉಳಿದಿದ್ದ ಈ ವಿಷಯಕ್ಕೆ ಸಂಬಂಧಿಸಿದ ದಾಖಲೆಗಳಿದ್ದ ಕಡತವು, ಇದೀಗ ಮುಖ್ಯಮಂತ್ರಿ ಸಹಿಯೊಂದಿಗೆ ಮರಳಿದೆ. ಮಂಜೇಶ್ವರ ಕನ್ನಡಿಗರು ಇನ್ನು ಮುಂದೆ ಕೇರಳದ ಕನ್ನಡ ಭಾಷಾ ಅಲ್ಪಸಂಖ್ಯಾತ ಸೌಲಭ್ಯಗಳನ್ನು ಮತ್ತು ಕರ್ನಾಟಕದ ಗಡಿನಾಡ ಕನ್ನಡಿಗ ಸೌಲಭ್ಯಗಳನ್ನು ಪಡೆಯಲಿದ್ದಾರೆ.

ಮಂಜೇಶ್ವರದ ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲಿ ಕನ್ನಡ ತಿಳಿದಿರುವ ಅಧಿಕಾರಿ ಇರಬೇಕು ಎಂಬ ನಿಯಮವಿದ್ದರೂ, ಮಲಯಾಳಿ ಅಧಿಕಾರಿಗಳು ಇದನ್ನು ವಿರೋಧಿಸುತ್ತಿದ್ದಾರೆ. ಭಾಷಾ ಅಲ್ಪಸಂಖ್ಯಾತ ಪ್ರದೇಶದ ಪ್ರೌಢಶಾಲಾ ಮುಖ್ಯೋಪಾಧ್ಯಾಯರು, ಸಹಾಯಕ ಶಿಕ್ಷಣ ಅಧಿಕಾರಿ ಮತ್ತು ಜಿಲ್ಲಾ ಶಿಕ್ಷಣ ಅಧಿಕಾರಿ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಲಾಗಿದೆ. ಆದರೆ ಬಹುಸಂಖ್ಯಾತರಿರುವ ಹಾಗೂ ಅವರು ಪ್ರತಿನಿಧಿಸುವ ಸಂಘಗಳು ಈ ಸೌಲಭ್ಯಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿವೆ ಎಂಬ ದೂರುಗಳು ಗಡಿನಾಡಿನ ಕನ್ನಡಿಗರಿಂದ ಕೇಳಿ ಬರುತ್ತಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು