ಗುರುವಾರ , ಮೇ 19, 2022
20 °C
ಸುಳ್ಯದಲ್ಲಿ ಜೆಸಿಬಿ ಯಂತ್ರ ಏರಿ ಬಂದ ಕಾಂಗ್ರೆಸ್ಸಿಗರು: ತಿಂಗಳೊಳಗೆ ತೆರವಿನ ಭರವಸೆ

ಕಸ ವಿಲೇವಾರಿಗೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಳ್ಯ: ಪಟ್ಟಣದ ಕಸ ತೆರವಿಗೆ ಆಗ್ರಹಿಸಿ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್‌ನ ಸಹಕಾರದಲ್ಲಿ ಗುರುವಾರ ಪಟ್ಟಣ ಪಂಚಾಯಿತಿ ಎದುರು ಪ್ರತಿಭಟನೆ ನಡೆಯಿತು.  

ಪ್ರತಿಭಟನಾ ಸಭೆಗೂ ಮುನ್ನ ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ಸೇರಿದ ಕಾರ್ಯಕರ್ತರು ಹಾಗೂ ನಾಯಕರು ಜೆಸಿಬಿ ಯಂತ್ರ ಏರಿ ಪಟ್ಟಣ ಪಂಚಾಯಿತಿ ಎದುರು ಬಂದರು.

ಸುಳ್ಯ ಪಟ್ಟಣ ಪಂಚಾಯಿತಿ ವಿಪಕ್ಷ ಸದಸ್ಯ ಎಂ.ವೆಂಕಪ್ಪ ಗೌಡ ಮಾತನಾಡಿ, ‘ಕಳೆದ ಚುನಾವಣೆಯಲ್ಲಿ ಸುಳ್ಯದ ಜನರು ಬಿಜೆಪಿಗೆ ಮತ ನೀಡಿ ಅವರಿಗೆ ಅಧಿಕಾರ ಕೊಟ್ಟರು. ಆದರೆ, ಜನರ ವಿಶ್ವಾಸವನ್ನು ಬಿಜೆಪಿ ಹುಸಿ ಮಾಡಿದೆ’ ಎಂದು ದೂರಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಮಾತನಾಡಿ, ‘ನಮ್ಮ ಸದಸ್ಯರ ಸಂಖ್ಯೆ ಕಡಿಮೆ ಇರಬಹುದು. ಆದರೆ, ಸುಳ್ಯದಲ್ಲಿ ನಮ್ಮ ಮತದಾರರಿದ್ದಾರೆ. ಅವರೆಲ್ಲರಿಗೂ ಇಲ್ಲಿಯ ಕಸದಿಂದ ಸಮಸ್ಯೆ ಆಗುತ್ತಿದೆ. ಸುಳ್ಯದ ಗೌರವ ಹಾಳಾಗುತ್ತಿದೆ. ಇದಕ್ಕೆಲ್ಲ ನಗರ ಪಂಚಾಯಿತಿ ಆಡಳಿತವೇ ಕಾರಣ’ ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ, ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್ ಮಾತನಾಡಿದರು.

‘ಒಂದು ತಿಂಗಳೊಳಗೆ ಕಸವನ್ನು ತೆರವು ಮಾಡುತ್ತೇವೆ’ ಎಂದು ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ಪ್ರತಿಭಟನಕಾರರಿಗೆ ಭರವಸೆ ನೀಡಿದರು.

ಕೆಪಿಸಿಸಿ ಸದಸ್ಯ ಕೃಷ್ಣಪ್ಪ ಜಿ, ಸುಜಯಕೃಷ್ಣ, ಶ್ರೀಹರಿ ಕುಕ್ಕುಡೇಲು, ದಿನೇಶ್ ಸರಸ್ವತಿಮಹಲ್, ಭವಾನಿಶಂಕರ್ ಕಲ್ಮಡ್ಕ, ನಗರ ಅಧ್ಯಕ್ಷ ಶಶಿಧರ್ ಎಂ.ಜೆ, ನಗರ ಪಂಚಾಯಿತಿ ಸದಸ್ಯರಾದ ಶರೀಫ್ ಕಂಠಿ, ಡೇವಿಡ್ ಧೀರಾ ಕ್ರಾಸ್ತ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಕೆಪಿಸಿಸಿ ವಕ್ತಾರ ಶೌವಾದ್ ಗೂನಡ್ಕ, ಪರಶುರಾಮ ಚಿಲ್ತಡ್ಕ, ಕೆ.ಎಂ. ಮುಸ್ತಫ, ಜೂಲಿಯಾ ಕ್ರಾಸ್ತ, ಶಿವಕುಮಾರ್ ಕಂದಡ್ಕ ತಾಜುದ್ದೀನ್ ಬೆಳ್ಳಾರೆ, ಮುಜೀಪ್ ಪೈಚಾರ್, ರಂಜಿರ್ ರೈ ಮೇನಾಲ, ಸಿದ್ದೀಕ್ ಕೊಕ್ಕೊ, ಪ್ರಹ್ಲಾದ್, ಸುಧೀರ್ ರೈ ಮೇನಾಲ, ಧರ್ಮಪಾಲ ಕೊಯಿಂಗಾಜೆ, ಶಾಫಿ ಕುತ್ತಮೊಟ್ಟೆ ಇದ್ದರು.

ಯುವ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಸ್ವಾಗತಿಸಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ್ ವಂದಿಸಿದರು.

ಎರಡು ದಿನದಲ್ಲಿ ತೆರವು: ನಲಪಾಡ್

‘ಪಂಚಾಯಿತಿ ಎದುರಿನ ಶೆಡ್‌ನಲ್ಲಿರುವ ಕಸವನ್ನು ಪಂಚಾಯಿತಿನಿಂದ ತೆರವು ಮಾಡಲು ಆಗದಿದ್ದರೆ ನನಗೆ ಬರೆದುಕೊಡಿ. ಎರಡೇ ದಿನದಲ್ಲಿ ತೆರವು ಮಾಡುವೆ’ ಎಂದು ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಮಹಮ್ಮದ್ ನಲಪಾಡ್ ಸವಾಲೆಸೆದರು.

ಸುಳ್ಯಕ್ಕೆ ಬಂದ ಅವರನ್ನು ಪಂಚಾಯಿತಿ ಆವರಣಕ್ಕೆ ಕರೆತಂದು ಕಸದ ಸಮಸ್ಯೆಯನ್ನು ನಾಯಕರು ವಿವರಿಸಿದರು.

ಕಸದ ರಾಶಿಯನ್ನು ನೋಡಿದ ನಲಪಾಡ್ ಅವರು, ‘ಅಯ್ಯೋ ಇಲ್ಲಿ ಜನರು ಹೇಗೆ ಇರುತ್ತಾರೆ. ಸಮಸ್ಯೆ ಆಗುದಿಲ್ಲವೇ, ನಿಮ್ಮ ಆರೋಗ್ಯದ ಕುರಿತು ನಿಮಗೆ ಕಾಳಜಿ ಇಲ್ಲವೇ. ಪಂಚಾಯಿತಿ ಆವರಣದಲ್ಲೇ ಕಸವನ್ನು ರಾಶಿ ಹಾಕಿಕೊಂಡು ಸುಳ್ಯದ ಜನರಿಗೆ ಹೇಗೆ ರಕ್ಷಣೆ ಕೊಡುತ್ತೀರಿ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು