ಬಂಟ್ವಾಳ: ‘ಪ್ಲಾಸ್ಟಿಕ್ ವೈಜ್ಞಾನಿಕ ಮರುಬಳಕೆ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು. ಈ ಕುರಿತು ಅನಗತ್ಯ ಪ್ರತಿರೋಧ ಸರಿಯಲ್ಲ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಹೇಳಿದರು.
ಜಿಲ್ಲಾ ಪಂಚಾಯಿತಿ, ಸ್ವಚ್ಛ ಭಾರತ ಮಿಷನ್ (ಗ್ರಾಮೀಣ), ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ, ಬಂಟ್ವಾಳ ತಾಲ್ಲೂಕು ಘಟಕದ ವತಿಯಿಂದ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಕಾವಳಮೂಡೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು. ತ್ಯಾಜ್ಯ ವಿಲೇವಾರಿ ಎಲ್ಲಿ ಮಾಡುವುದು ಎಂಬುದೇ ಸಮಸ್ಯೆ ಆಗುತ್ತಿದೆ. ಜನರು ತಮ್ಮ ಹಕ್ಕುಗಳನ್ನು ಕೇಳುವ ಸಂದರ್ಭದಲ್ಲಿ ಕರ್ತವ್ಯವನ್ನು ಮರೆಯಬಾರದು. ಮೂಲದಲ್ಲೇ ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ನೀಡಿದರೆ, ಪ್ಲಾಸ್ಟಿಕ್‌ನಂತಹ ಮರುಬಳಕೆ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸುಲಭ. ಇವುಗಳ ವೈಜ್ಞಾನಿಕ ಸಂಸ್ಕರಣೆ ಮಾಡಲಾಗುತ್ತಿದೆ ಎಂದರು.
ಸಾಮಾಜಿಕ ಹೊಣೆಗಾರಿಕೆಯ ನಿಟ್ಟಿನಲ್ಲಿ ಪತ್ರಕರ್ತರ ಸಂಘ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಿ ಹಳ್ಳಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕಾಟಾಚಾರದ ಕಾರ್ಯಕ್ರಮ ಮಾಡದೇ ಜನರ ನೋವನ್ನು ಅರಿತು ಅದಕ್ಕೆ ಪೂರಕ ಕಾರ್ಯಕ್ರಮ ಸಂಘಟಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸಹಾಯಕ ನಿರ್ದೇಶಕ ದಿನೇಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಜಿತ್, ವಾರ್ತಾಧಿಕಾರಿ ರವಿರಾಜ್ ಎಚ್.ಜಿ, ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಇದ್ದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಡಿಒ ರಚನ್ ಕುಮಾರ್ ಸ್ವಾಗತಿಸಿದರು. ಸಂದೀಪ್ ಸಾಲ್ಯಾನ್ ವಂದಿಸಿದರು. ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರೂಪಿಸಿದರು. ಎನ್.ಸಿ. ರೋಡ್ ಜಂಕ್ಷನ್‌ನಿಂದ ಗ್ರಾಮ ಪಂಚಾಯಿತಿ ಕಚೇರಿವರೆಗೆ ಸ್ವಚ್ಛತಾ ಜಾಗೃತಿ ಜಾಥಾ ನಡೆಸಲಾಯಿತು. ಜಾಗೃತಿ ಹಾಡು ಹಾಗೂ ರೂಪಕ ಪ್ರದರ್ಶಿಸಲಾಯಿತು.
ಪ್ಲಾಸ್ಟಿಕ್ ಸಂಗ್ರಹಿಸಿದವರಿಗೆ ಅಕ್ಕಿ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. 43 ಗ್ರಾಮಸ್ಥರು 26 ಕೆ.ಜಿ ಪ್ಲಾಸ್ಟಿಕ್ ಸಂಗ್ರಹಿಸಿದ್ದರು. ಅವರಿಗೆ ಒಟ್ಟು 260 ಕೆ.ಜಿ ಅಕ್ಕಿ ವಿತರಿಸಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.