ಸೋಮವಾರ, ನವೆಂಬರ್ 28, 2022
20 °C

ಕಾಂಗ್ರೆಸ್‌ ಅವಧಿಯಲ್ಲೇ ಟೋಲ್‌ಗೇಟ್‌ಗೆ ಅಧಿಸೂಚನೆ: ಭರತ್‌ ಶೆಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಸುರತ್ಕಲ್ ಟೋಲ್‌ಗೇಟ್‌ ಸ್ಥಾಪನೆಗೆ ಅಧಿಸೂಚನೆ ಪ್ರಕಟವಾಗಿದ್ದು ಕೇಂದ್ರದಲ್ಲಿ ಯುಪಿಎ ನೇತೃತ್ವದ ಸರ್ಕಾರದ ಅವಧಿಯಲ್ಲಿ. ಆಗ ರಾಜ್ಯದಲ್ಲೂ ಕಾಂಗ್ರೆಸ್‌ ಸರ್ಕಾರ ಇತ್ತು. ಆಗ ಸ್ಥಾಪಿಸಲಾದ ಟೋಲ್‌ಗೇಟ್‌ ಈಗ ತೆರವಾಗುತ್ತಿದೆ’ ಎಂದು ಶಾಸಕ ವೈ.ಭರತ್ ಶೆಟ್ಟಿ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುರತ್ಕಲ್‌ ಟೋಲ್‌ಗೇಟ್‌ ಸ್ಥಾಪನೆಗೆ 2013ರ ಜೂನ್‌ನಲ್ಲೇ ಅಧಿಸೂಚನೆ ಪ್ರಕಟವಾಗಿದೆ. ಆದರೆ, ಈಗ ಕೆಲವು ಕಾಂಗ್ರೆಸ್‌ ನಾಯಕರು ಟೋಲ್‌ಗೇಟ್‌ ವಿರೋಧಿ ಹೋರಾಟಗಾರರ ಜೊತೆ ಸೇರಿಕೊಂಡು ಬಿಜೆಪಿ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಟೋಲ್‌ಗೇಟ್‌ಗೆ ಅಧಿಸೂಚನೆ ಪ್ರಕಟವಾದ ಕೂಡಲೇ  ಅದನ್ನು ಕಾಂಗ್ರೆಸ್‌ನವರು ತಡೆಯಬಹುದಿತ್ತಲ್ಲವೇ. ಆಗ ಕೇಂದ್ರದಲ್ಲಿ ಕಾಂಗ್ರೆಸ್‌ನ ಆಸ್ಕರ್‌ ಫರ್ನಾಂಡಿಸ್‌ ಅವರೇ ಭೂಸಾರಿಗೆ ಸಚಿವರಾಗಿದ್ದರಲ್ಲವೇ’ ಎಂದು ಪ್ರಶ್ನಿಸಿದರು.

‘ಸುರತ್ಕಲ್‌ ಟೋಲ್‌ಗೇಟ್‌ ರದ್ದಾಗಬೇಕು ಎಂಬುದಕ್ಕೆ ನಮ್ಮ ಸಹಮತವೂ ಇದೆ. ಈ ಹೋರಾಟಕ್ಕೆ ನಮ್ಮ ತಕರಾರಿಲ್ಲ. ಇದರಲ್ಲಿ ನೈಜ ಹೋರಾಟಗಾರರೂ ಇದ್ದಾರೆ. ಆದರೆ, ಅದರ ವೇದಿಕೆಯಲ್ಲಿ ಹಿಂದುತ್ವದ ಕುರಿತ ಮಾತುಗಳನ್ನು ಏಕೆ ಆಡಬೇಕು. ಬಿಜೆಪಿ ವಿರುದ್ಧ ತುಳುನಾಡು ಎಂದು ಏಕೆ ಘೋಷಣೆ ಕೂಗಬೇಕು’ ಎಂದು ಅವರು ಪ್ರಶ್ನಿಸಿದರು.

‘ಸುರತ್ಕಲ್‌ ಟೋಲ್‌ಗೇಟನ್ನು ಹೆಜಮಾಡಿ ಟೋಲ್‌ಗೇಟ್‌ ಜೊತೆ ವಿಲೀನ ಮಾಡಿರುವುದು ನಿಜ. ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಆಗುತ್ತಿದ್ದ ಸಮಸ್ಯೆ ನಿವಾರಣೆ ಆಗಲಿದೆ. ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ಈಗಲೂ ಟೋಲ್‌ ಸಂಗ್ರಹವನ್ನು ಸಂಪೂರ್ಣ ತಡೆಯಲು ಸಾಧ್ಯವಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.  

 -0-

ಕೋಟ್‌....

ಟೋಲ್‌ಗೇಟ್‌ ತೆರವುಗೊಳಿಸುವಲ್ಲಿ ವಿಳಂಬ ಆಗಿಲ್ಲ. ಹೋರಾಟ ನಡೆಸಿದ್ದರಿಂದ ಟೋಲ್‌ಗೇಟ್‌ ತೆರವು ತ್ವರಿತಗತಿಯಲ್ಲೂ ಆಗಿಲ್ಲ. ಆಗಬೇಕಾದ ಸಮಯಕ್ಕೇ ಆಗಿದೆ
ವೈ.ಭರತ್‌ ಶೆಟ್ಟಿ, ಶಾಸಕ, ಮಂಗಳೂರು ಉತ್ತರ ಕ್ಷೇತ್ರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು