ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಈಜುಕೊಳಕ್ಕೆ ಬೇಕು 29 ಲಕ್ಷ ಲೀಟರ್‌ ನೀರು

Published 13 ನವೆಂಬರ್ 2023, 16:15 IST
Last Updated 13 ನವೆಂಬರ್ 2023, 16:15 IST
ಅಕ್ಷರ ಗಾತ್ರ

ಮಂಗಳೂರು: ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ಎಮ್ಮೆಕೆರೆ ಮೈದಾನದಲ್ಲಿ ನಿರ್ಮಿಸಿರುವ ಒಲಿಂಪಿಕ್ಸ್‌ ದರ್ಜೆಯ ಈಜುಕೊಳ ಸಂಕೀರ್ಣದಲ್ಲಿ ಒಟ್ಟು ಮೂರು ಕೊಳಗಳಿದ್ದು, ಇವುಗಳಿಗೆ ಒಟ್ಟು 29 ಲಕ್ಷ ಲೀಟರ್‌ ನೀರಿನ ಅಗತ್ಯ ಇದೆ. 

₹ 22.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈಜುಕೊಳಕ್ಕೆ ನೀರು ಪೂರೈಸುವುದಕ್ಕೆ ಶಾಶ್ವತ ವ್ಯವಸ್ಥೆ ಇಲ್ಲ. ಹೊರಗಿನಿಂದ ಕುಡಿಯಲು ಯೋಗ್ಯವಿರುವಷ್ಟು ಗುಣಮಟ್ಟದ ನೀರನ್ನು ತರಿಸಿ ಅದನ್ನು ಎರಡನೇ ಮಹಡಿಯಲ್ಲಿರುವ ಈಜುಕೊಳಗಳಿಗೆ ಪಂಪ್‌ ಮಾಡಬೇಕಾಗುತ್ತದೆ. 

ನೀರು ಪೂರೈಕೆಗೆ ಶಾಶ್ವತ ವ್ಯವಸ್ಥೆ ಕಲ್ಪಿಸದಿರುವುದಕ್ಕೆ ಕಾರಣವೂ ಇದೆ ಎನ್ನುತ್ತಾರೆ ಸ್ಮಾರ್ಟ್‌ ಸಿಟಿ ಯೋಜನೆಯ ಅಧಿಕಾರಿಗಳು.

‘ಈ ಈಜುಕೊಳಕ್ಕೆ ಬಳಸುವ ನೀರು ಕುಡಿಯುವುದಕ್ಕೆ ಯೋಗ್ಯವಾದ ನೀರಿನಷ್ಟೇ ಗುಣಮಟ್ಟದಿಂದ ಕೂಡಿರಬೇಕು. ಅಷ್ಟೊಂದು ನೀರನ್ನು ಪಾಲಿಕೆ ವತಿಯಿಂದ ಪುರೈಸುವುದು ಕಷ್ಟಸಾಧ್ಯ. ಅಲ್ಲದೇ ಈ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುವುದರಿಂದ ನಿತ್ಯವೂ ಅಷ್ಟೊಂದು ಪ್ರಮಾಣದ ನೀರನ್ನು ಪೂರೈಸುವ ಅಗತ್ಯ ಇಲ್ಲ. ವಾರಕ್ಕೆ ಸುಮಾರು 10 ಸಾವಿರ ಲೀಟರ್‌ನೀರು ಬೇಕಾಗುತ್ತದೆ. ಹಾಗಾಗಿ ಈ ಈಜುಕೊಳದ ನಿರ್ವಹಣೆ ವ್ಯವಸ್ಥೆಯನ್ನು ನೋಡಿಕೊಳ್ಳುವ ಸಂಸ್ಥೆಯೇ ಕುಡಿಯ ಬಹುದಾದಷ್ಟು ಶುದ್ಧವಾದ ನೀರಿನ ವ್ಯವಸ್ಥೆಯನ್ನೂ ಕಲ್ಪಿಸಬೇಕಾಗುತ್ತದೆ’ ಎಂದು ಸ್ಮಾರ್ಟ್‌ ಸಿಟಿ ಯೋಜನೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲ್ಲಿ ಸ್ಪರ್ಧೆಗಳು ನಡೆಯುವ ಮುಖ್ಯ ಈಜುಕೊಳವು 50 ಮೀ ಉದ್ದ, 25 ಮೀ ಅಗಲ ಇದೆ. ಇದರ ಆಳ ಒಂದು ತುದಿಯಲ್ಲಿ 1.4 ಮೀ ಇದ್ದು, ಇನ್ನೊಂದು ತುದಿಯನ್ನು ತಲುಪುತ್ತಿದ್ದಂತೆಯೇ ಅದು 2.2 ಮೀಗೆ ಹೆಚ್ಚುತ್ತದೆ. ಇದರಲ್ಲಿ ಏಕಕಾಲದಲ್ಲಿ 18.5 ಲಕ್ಷ ಲೀ ನೀರು ಹಿಡಿಸುತ್ತದೆ. ಹಾಗೆಯೇ ಇಲ್ಲಿ ಅಭ್ಯಾಸ ನಡೆಸಲು ನಿರ್ಮಿಸಿರುವ ಪುಟ್ಟ ಈಜುಕೊಳವು 25 ಮೀ ಉದ್ದ, 10 ಮೀ ಅಗಲ ಹಾಗೂ 2.2. ಮೀ ಆಳ ಇದೆ. ಇದರಲ್ಲಿ ಏಕಕಾಲಕ್ಕೆ 5.5 ಲಕ್ಷ ಲೀ ನೀರು ಹಿಡಿಸುತ್ತದೆ. ಚಿಣ್ಣರಿಗಾಗಿ ನಿರ್ಮಿಸಿರುವ ಇನ್ನೊಂದು ಈಜುಕೊಳವು 13.8 ಮೀ ಉದ್ದ ಹಾಗೂ 10 ಮೀ ಅಗಲ ಇದೆ. 1.2 ಮೀ ಆಳ ಇರುವ ಈ ಈಜುಕೊಳದಲ್ಲಿ 1.5 ಲಕ್ಷ ಲೀ ನೀರು ಹಿಡಿಸುತ್ತದೆ’ ಎಂದು ಅವರು ವಿವರಿಸಿದರು.

‘ಈ ಈಜುಕೊಳದಲ್ಲಿ ಸ್ಪರ್ಧೆಗಳು ನಡೆಯುವಾಗ ಬರುವ ಸ್ಪರ್ಧಿಗಳು ಹಾಗೂ ಅವರ ತಂಡದ ಪರುಷರು ಮತ್ತು ಮಹಿಳೆಯರು ಉಳಿದುಕೊಳ್ಳುವುದಕ್ಕೆ ಪ್ರತ್ಯೇಕ ವಸತಿ ವ್ಯವಸ್ಥೆ, ಶೌಚಾಲಯ, ವ್ಯಾಯಾಮ ಘಟಕ, ತೀರ್ಪುಗಾರರಿಗೆ ವಸತಿ, ಮಾದಕ ದ್ರವ್ಯ ಸೇವನೆ ಪರೀಕ್ಷೆ ನಡೆಸಲು ಪ್ರತ್ಯೇಕ ಕೊಠಡಿ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಈಜುಕೊಳಥಳ. ಡೋಪ್ ಟೆಸ್ಟಿಂಗ್ ಕೊಠಡಿ.
ವೈದ್ಯಕೀಯ ವ್ಯವಸ್, ನೆಲದಡಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಪರ್ಧೆ ವೀಕ್ಷಣೆಗಾಗಿ  ಈ‌ಜುಕೊಳದ ಪಕ್ಕ 400 ಆಸನ ವ್ಯವಸ್ಥೆ ಇದೆ’ ಎಂದರು.

‘2ಪಿಕೆಎಂ ಆರ್ಕಿಟೆಕ್ಟ್ಸ್‌‘ ಈ ಕಾಮಗಾರಿಯ ಸಲಹಾ ಸಂಸ್ಥೆಯಾಗಿದ್ದು,  ಒಡಿಶಾದ ಉದ್ರಾ ಕನ್‌ಸ್ಟ್ರಕ್ಷಬನ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ ಇದರ ಕಾಮಗಾರಿಯನ್ನು ನಿರ್ವಹಿಸಿದೆ. ಮೂರು ವರ್ಷದವರೆಗೆ ಇದನ್ನು ನಿರ್ವಹಣೆ ಮಾಡುವ ಹೊಣೆಯೂ ಇದೇ ಸಂಸ್ಥೆಯದ್ದು’ ಎಂದು ಮಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.

ಕರಾವಳಿಯ ಈಜುಗಾರರಿಗೆ ಅಂತರರಾಷ್ಟ್ರೀಯ ದರ್ಜೆಯ ತರಬೇತಿಗೆ ಇದ್ದ ಕೊರತೆಯನ್ನು ಈ ಈಜುಕೊಳ ನೀಗಿಸಲಿದೆ. ಜಾಗತಿಕ ದರ್ಜೆಯ ಈಜುಪಟುಗಳನ್ನು ರೂಪಿಸುವ ಉದ್ದೇಶ ಈ ಯೋಜನೆಯದು
ಅರುಣಪ್ರಭ ಪ್ರಧಾನ ವ್ಯವಸ್ಥಾಪಕ ಮಂಗಳೂರು ಸ್ಮಾರ್ಟ್ ಸಿಟಿ ಸಂಸ್ಥೆ

ನಿರಂತರ ಹರಿಯುತ್ತದೆ

ಸ್ಪಟಿಕ ಶುದ್ಧ ನೀರು ಇಲ್ಲಿನ ಮೂರು ಈಜುಕೊಳಗಳಿಗೂ ಶುದ್ಧೀಕರಿಸಿದ ಹೊಸ ನೀರು ಅನುಕ್ಷಣವೂ ಪೂರೈಕೆಯಾಗುತ್ತದೆ. ಈ ನೀರನ್ನು ಒಝೋನ್‌ ಪ್ರಕ್ರಿಯೆ ಹಾಗೂ ಕ್ಲೊರೀನೀಕರಣ ಪ್ರಕ್ರಿಯೆಗೆ ಒಳಪಡಿಸಿ ಶುದ್ಧೀಕರಿಸಲಾಗುತ್ತದೆ. ನೀರಿನಲ್ಲಿರುವ ಬಣ್ಣ ಹಾಗೂ ವಾಸನೆ ಹಾಗೂ ಕೊಳೆಯನ್ನು ಬೇರ್ಪಡಿಸಲಾಗುತ್ತದೆ. ‘ಅಂತರರಾಷ್ಟ್ರೀಯ ಮಟ್ಟದ ಈಜುಸ್ಪರ್ಧೆಗಳನ್ನು ಹಮ್ಮಿಕೊಳ್ಳಬಹುದಾದ ಈ ಈಜುಕೊಳವನ್ನು ಅಂತರರಾಷ್ಟ್ರೀಯ ಈಜು ಒಕ್ಕೂಟ (ಐಎಸ್‌ಎಫ್‌)  ಮಾನದಂಡಗಳಿಗೆ ಅನುಗುಣವಾಗಿ ರೂಪಿಸಲಾಗಿದೆ. ಅನುಕ್ಷಣವೂ ಈಜುಕೊಳದ ನೀರು ಹೊರಕ್ಕೆ ಹರಿಸಿ ಶುದ್ಧೀಕರಣಗೊಂಡ ಹೊಸ ನೀರನ್ನು ತುಂಬಿಸಲಾಗುತ್ತದೆ. ಶುದ್ಧೀಕರಣ ಘಟಕಗಳು ಈಜುಕೊಳದ ಕೆಳಗಡೆಯೇ ಇವೆ. ಮುಖ್ಯ ಈಜುಕೊಳಕ್ಕೆ ನೀರು ಹರಿಸಲೆಂದೇ 81 ಇನ್‌ಲೆಟ್‌ಗಳು ಇವೆ. ಕೊಳವು ತುಂಬಿ ಭರ್ತಿಯಾದಾಗ ಹೊರ ಚೆಲ್ಲುವ ನೀರನ್ನು ಸಂಗ್ರಹಿಸಿ ಶುದ್ಧೀಕರಣ ಘಟಕಕ್ಕೆ ರವಾನಿಸಲು ಮೂರು ಕಡೆ ಔಟ್‌ಲೆಟ್‌ ವ್ಯವಸ್ಥೆಗಳಿವೆ’ ಎಂದು ಸ್ಮಾರ್ಟ್‌ ಸಿಟಿ ಯೋಜನೆಯ ಅಧಿಕಾರಿಯೊಬ್ಬರು ವಿವರಿಸಿದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT