ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಅಧ್ಯಯನಕ್ಕೆ ಸಮನ್ವಯ ತಂಡ

ನಗರದ ಸಂಚಾರ ಸಮಸ್ಯೆ ಹಾಗೂ ಸುಧಾರಣೆ ಬಗ್ಗೆ ಚರ್ಚೆ
Last Updated 6 ಸೆಪ್ಟೆಂಬರ್ 2021, 17:11 IST
ಅಕ್ಷರ ಗಾತ್ರ

ಮಂಗಳೂರು: ಸ್ಮಾರ್ಟ್ ಸಿಟಿಯಾಗಿ ರೂಪುಗೊಳ್ಳುತ್ತಿರುವ ಮಂಗಳೂರು ನಗರದ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಲು ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ನೇತೃತ್ವದಲ್ಲಿ ಸಮನ್ವಯ ತಂಡ ರಚಿಸಿ, ವರದಿ ಪಡೆಯಲಾಗುವುದು ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯ ಸಂಚಾರ ಸಮಸ್ಯೆ ಹಾಗೂ ಸುಧಾರಣೆ ಬಗ್ಗೆ ಚರ್ಚಿಸಲು ಅಧಿಕಾರಿಗಳು, ಪೊಲೀಸ್ ಇಲಾಖೆಯ ಜತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಪಾದಚಾರಿ ಮಾರ್ಗ, ಪಾರ್ಕಿಂಗ್, ಬೀದಿಬದಿ ವ್ಯಾಪಾರ, ಪೇಯ್ಡ್ ಪಾರ್ಕಿಂಗ್ ಮೊದಲಾದ ಸಂಗತಿಗಳ ಬಗ್ಗೆ, ಪೊಲೀಸರು, ಇತರ ಅಧಿಕಾರಿಗಳ ಜೊತೆ ಸೇರಿ ತಂಡ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸುತ್ತದೆ. ಈ ವರದಿ ಆಧರಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

‘ನಗರದ ಸಂಚಾರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಎನ್‌ಐಟಿಕೆ ತಜ್ಞರ ಸಹಕಾರದಲ್ಲಿ ಮುಂದಿನ 25 ವರ್ಷಗಳ ಕಾರ್ಯ ಯೋಜನೆ ರೂಪಿಸಬಹುದು’ ಎಂದು ಸದಸ್ಯ ಶಶಿಧರ ಹೆಗ್ಡೆ ಸಲಹೆ ನೀಡಿದರು.

‘ಅಗಲವಾದ ಪಾದಚಾರಿ ಮಾರ್ಗಗಳು ಕಾಲ್ನಡಿಗೆಯಲ್ಲಿ ಸಾಗುವವರಿಗೆ ಅನುಕೂಲ ಕಲ್ಪಿಸಿವೆ. ಆದರೆ, ಈ ಜಾಗವನ್ನು ವಾಹನಗಳು, ಗೂಡಂಗಡಿ, ಮೊಬೈಲ್ ಕ್ಯಾಂಟೀನ್‌ಗಳು ಅತಿಕ್ರಮಿಸುತ್ತಿವೆ. ಇದರ ಬಗ್ಗೆ ಲಕ್ಷ್ಯ ವಹಿಸಬೇಕು’ ಎಂದು ಸದಸ್ಯ ನವೀನ್ ಡಿಸೋಜ ಒತ್ತಾಯಿಸಿದರು. ಸದಸ್ಯರಾದ ಸುಧೀರ್ ಶೆಟ್ಟಿ, ಕಿರಣ್ ಕೋಡಿಕಲ್, ಪೂರ್ಣಿಮಾ, ಸಾಮಾಜಿಕ ಕಾರ್ಯಕರ್ತ ಜಿ.ಕೆ. ಭಟ್ ಸಲಹೆ ನೀಡಿದರು.

‘ನೋ ಪಾರ್ಕಿಂಗ್’ ಜಾಗದಲ್ಲಿ ವಾಹನ ನಿಲ್ಲಿಸಿದಾಗ ಮಾಡುವ ಟೋಯಿಂಗ್ ಬಗ್ಗೆ ಚರ್ಚೆ ನಡೆದು, ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವ ಹಾಗೂ ಕೋವಿಡ್ ಸಂದರ್ಭ ಆಗಿರುವ ಕಾರಣಕ್ಕೆ ಸದ್ಯಕ್ಕೆ ಟೋಯಿಂಗ್ ಕೈಬಿಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಉಪಮೇಯರ್ ಸುಮಂಗಲಾ ರಾವ್, ನಗರ ಅಪರಾಧ ಮತ್ತು ಸಂಚಾರ ವಿಭಾಗದ ಉಪಪೊಲೀಸ್ ಆಯುಕ್ತ ದಿನೇಶ್, ಪಾಲಿಕೆ ಉಪ ಆಯುಕ್ತರಾದ ಬಿನಯ್, ಅಜಿತ್ ಎಂ. ಉಪಸ್ಥಿತರಿದ್ದರು.

‘ಶೀಘ್ರದಲ್ಲಿ ವರದಿ’

ನಗರದಲ್ಲಿ ಅಪಘಾತವನ್ನು ತಪ್ಪಿಸಲು ಈ ಹಿಂದೆ ಹಂಪ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ರಚಿಸಿದ್ದ ಸಮಿತಿ ಮಾದರಿಯಲ್ಲೇ ಕಾರ್ಯನಿರ್ವಾಹಕ ಎಂಜಿನಿಯರ್ ನೇತೃತ್ವದ ಸಮಿತಿಯೂ ಕಾರ್ಯನಿರ್ವಹಿಸಲಿದೆ. ಆದಷ್ಟು ಶೀಘ್ರ ತಂಡ ವರದಿ ಸಿದ್ಧಪಡಿಸಲಿದೆ ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT