ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರಿಗೂ ಬಂತು ತಿರುವನಂತಪುರ ವಂದೇ ಭಾರತ್ ರೈಲು: ವೇಳಾಪಟ್ಟಿ ಮಾಹಿತಿ ಇಲ್ಲಿದೆ

ವಿಡಿಯೊ ಕಾನ್ಫರೆನ್ ಮೂಲಕ ಪ್ರಧಾನಿ ಮೋದಿ ಚಾಲನೆ
Published 12 ಮಾರ್ಚ್ 2024, 12:46 IST
Last Updated 12 ಮಾರ್ಚ್ 2024, 12:46 IST
ಅಕ್ಷರ ಗಾತ್ರ

ಮಂಗಳೂರು: ತಿರುವನಂತಪುರ– ಕಾಸರಗೋಡು ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್‌ ರೈಲನ್ನು (ಸಂಖ್ಯೆ 20631/20632) ಮಂಗಳೂರು ಸೆಂಟ್ರಲ್‌ ನಿಲ್ದಾಣದವರೆಗೆ ವಿಸ್ತರಿಸಲಾಗಿದ್ದು, ಈ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಸಿರು ನಿಶಾನೆ ತೋರಿ ಮಂಗಳವಾರ ಬೆಳಿಗ್ಗೆ 9.35ಕ್ಕೆ ಚಾಲನೆ ನೀಡಿದರು.

ಉದ್ಘಾಟನಾ ಸಮಾರಂಭದ ಸಲುವಾಗಿ ವಂದೇ ಭಾರತ್‌ ವಿಶೇಷ ರೈಲು ಮಂಗಳೂರು ಸೆಂಟ್ರಲ್‌ ನಿಲ್ದಾಣದಿಂದ ಬೆಳಿಗ್ಗೆ 9.40ಕ್ಕೆ ಹೊರಟು ಕಾಸರಗೋಡನ್ನು ಬೆಳಿಗ್ಗೆ 10.15ಕ್ಕೆ ತಲುಪಿತು. ಅಲ್ಲಿಂದ 10.30ಕ್ಕೆ ಹೊರಟ ರೈಲು ಮಂಗಳೂರು ಸೆಂಟ್ರಲ್‌ ನಿಲ್ದಾಣವನ್ನು ಮಧ್ಯಾಹ್ನದ ವೇಳೆ ತಲುಪಿತು. ರೈಲ್ವೆ ಹೋರಾಟಗಾರರು, ವಿದ್ಯಾರ್ಥಿಗಳು ಈ ವಿಶೇಷ ರೈಲಿನಲ್ಲಿ ಪ್ರಯಾಣ ಬೆಳೆಸಿದರು.

ಮಂಗಳೂರು ಸೆಂಟ್ರಲ್‌– ತಿರುವನಂತಪುರ ನಡುವೆ ವಂದೇ ಭಾರತ್‌ ರೈಲಿನ ದೈನಂದಿನ ಸೇವೆ ಬುಧವಾರದಿಂದ (ಮಾ.13) ಆರಂಭವಾಗಲಿದೆ. ಮಂಗಳೂರು ಸೆಂಟ್ರಲ್‌ ನಿಲ್ದಾಣದಿಂದ ಬೆಳಿಗ್ಗೆ 6.25ಕ್ಕೆ ಹೊರಡುವ ರೈಲು ತಿರುವನಂತಪುರವನ್ನು ಮಧ್ಯಾಹ್ನ 3.05ಕ್ಕೆ ತಲುಪಲಿದೆ. ಅಲ್ಲಿಂದ ಸಂಜೆ 4.05ಕ್ಕೆ ಹೊರಟು ರಾತ್ರಿ 12.40ಕ್ಕೆ ಮಂಗಳೂರು ಸೆಂಟ್ರಲ್‌ ನಿಲ್ದಾಣವನ್ನು ತಲುಪಲಿದೆ. ಈ ರೈಲಿಗೆ ಕಾಸರಗೋಡು, ಕಣ್ಣೂರು, ಕೊಯಿಕ್ಕೋಡ್‌, ತಿರೂರ್‌, ಶ್ವರ್ನೂರು ಜಂಕ್ಷನ್‌, ತ್ರಿಶೂರ್, ಎರ್ನಾಕುಳಂ ಜಂಕ್ಷನ್‌, ಅಳಪುಝ ಹಾಗೂ ಕೊಲ್ಲಂ ಜಂಕ್ಷನ್‌ಗಳಲ್ಲಿ ನಿಲುಗಡೆ ಇದೆ.

ಈ ಸೇವೆಗೆ ಚಾಲನೆ ನೀಡುವುದಕ್ಕೂ ಮುನ್ನ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್‌, ‘ತಿರುವನಂತಪುರದ ಅನಂತಪದ್ಮನಾಭ ದೇವಸ್ಥಾನ, ಶಬರಿಮಲೆ ದೇವಸ್ಥಾನ, ಮಾತಾ ಅಮೃತಾನಂದಮಯಿ ಮಠ ಸೇರಿದಂತೆ ಕೇರಳದ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವವರಿಗೆ ಈ ರೈಲು ಉಪಯೋಗವಾಗಲಿದೆ. ನಗರದಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಇತರೆಡೆ ನೆಲೆಸಿರುವ ಕೇರಳಿಗರಿಗೂ ಈ ರೈಲಿನಿಂದ ಪ್ರಯೋಜನವಾಗಲಿದೆ. ವರ್ತಕರ ಓಡಾಟಕ್ಕೂ ಇದರಿಂದ ಅನುಕೂಲವಾಗಲಿದ್ದು, ಈ ಪ್ರದೇಶದ ವಾಣಿಜ್ಯ ಚಟುವಟಿಕೆ ಅಭಿವೃದ್ಧಿಗೂ ಇದು ನೆರವಾಗಲಿದೆ’ ಎಂದರು.

‘ಮಂಗಳೂರು– ಮಡಗಾಂವ್‌ ಮತ್ತು ಮಂಗಳೂರು– ತಿರುವನಂತಪುರ ವಂದೇ ಭಾರತ್‌ ರೈಲುಗಳ ನಡುವೆ ಸಂಪರ್ಕ ಕಲ್ಪಿಸುವ ಬಗ್ಗೆ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್‌ ಜೊತೆ ಚರ್ಚಿಸಿದ್ದೇನೆ. ಮಂಗಳೂರು– ಮಡಗಾಂವ್‌ ನಡುವೆ ಸಂಚರಿಸುವ ವಂದೇ ಭಾರತ್‌ ರೈಲನ್ನು ಮುಂಬೈವರೆಗೆ ವಿಸ್ತರಿಸುವ ಬಗ್ಗೆಯೂ ಅವರಿಗೆ ಪತ್ರ ಬರೆದು ಚರ್ಚಿಸಿದ್ದೇನೆ. ಇದಕ್ಕೆ ಶೀಘ್ರವೇ ಸಮ್ಮತಿ ಸಿಗುವ ನಿರೀಕ್ಷೆ ಇದೆ’ ಎಂದರು.

‘ಬೆಂಗಳೂರು– ಮಂಗಳೂರು ರೈಲು ಮಾರ್ಗದಲ್ಲಿ ಕೆಲವು ಕಡೆ ವಿದ್ಯುದೀಕರಣ ಬಾಕಿ ಇದೆ. ಅದು ಮೇ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಈ ಮಾರ್ಗದಲ್ಲಿ ಮುಂಬರುವ ಜೂನ್‌ ತಿಂಗಳಲ್ಲಿ ವಂದೇಭಾರತ್‌ ರೈಲು ಸಂಚಾರ ಸಾಧ್ಯವಾಗಬಹುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮಂಗಳೂರು–ಅಯೋಧ್ಯೆ ನಡುವೆ ನೇರ ರೈಲು ಶೀಘ್ರವೇ ಆರಂಭವಾಗಲಿದೆ. ಮಂಗಳೂರು ಅಯೋಧ್ಯೆ ನಡುವೆ ವಿಮಾನ ಸೌಕರ್ಯ ಕಲ್ಪಿಸಬೇಕೆಂಬ ಬೇಡಿಕೆ ಇದೆ. ಒಂದೋ ಮುಂಬೈ ಮೂಲಕ ಅಥವಾ ಬೆಂಗಳೂರಿನ ಮೂಲಕ ಅಯೋಧ್ಯೆ ತಲುಪಲು ಸಾಧ್ಯವಾಗುವಂತೆ ವಿಮಾನ ಸೇವೆಯನ್ನು ಆರಂಭಿಸುವ ಪ್ರಸ್ತಾವವಿದೆ’ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈಲು ಅಭಿವೃದ್ಧಿ ಯೋಜನೆಗಳಿಗೆ 2019ರಿಂದ 2014ರ ನಡುವೆ ಕೇಂದ್ರ ಸರ್ಕಾರ ₹ 2,650 ಕೋಟಿ ಅನುದಾನ ಒದಗಿಸಿದೆ. ಇದರಲ್ಲಿ ₹ 685 ಕೋಟಿ ಮೊತ್ತದ ಕಾಮಗಾರಿ ಪೂರ್ಣಗೊಂಡಿದೆ. ₹ 1550 ಕೋಟಿ ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿವೆ. ₹ 417 ಕೋಟಿ ಮೊತ್ತದ ರೈಲು ಯೋಜನೆಗಳಿಗ ಮಂಜೂರಾತಿ ಸಿಕ್ಕಿದೆ ಎಂದು ಅವರು ಮಾಹಿತಿ ನೀಡಿದರು.

ಮೇಯರ್ ಸುಧೀರ್‌ ಶೆಟ್ಟಿ ಕಣ್ಣೂರು, ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಡಿ.ವೇದವ್ಯಾಸ ಕಾಮತ್‌, ಪಾಲಕ್ಕಾಡ್‌ ರೈಲ್ವೆ ವಿಭಾಗದ ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕ ಅರುಣ್ ಕುಮಾರ್‌ ಚತುರ್ವೇದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT