ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: 300 ಮೀ ರಸ್ತೆಗೆ ಮೂರು ತಿಂಗಳು ಕಾಮಗಾರಿ!

Published 16 ಮೇ 2024, 8:14 IST
Last Updated 16 ಮೇ 2024, 8:14 IST
ಅಕ್ಷರ ಗಾತ್ರ

ಮಂಗಳೂರು: ಬಿಜೈ ನ್ಯೂರೊಡ್‌ನಲ್ಲಿ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದಾಗಿ ಸ್ಥಳೀಯ ನಿವಾಸಿಗಳು ಹೈರಾಣಾಗಿದ್ದಾರೆ. ಇಲ್ಲಿನ ಮನೆಗಳೂ ಸೇರಿದಂತೆ ಹತ್ತಾರು ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ರಸ್ತೆ ಸಂಪರ್ಕ ಇಲ್ಲದೇ ಸಮಸ್ಯೆ ಎದುರಿಸುವಂತಾಗಿದೆ.

‘ಬಿಜೈ ವಾರ್ಡ್‌ನಲ್ಲಿರುವ ಬಿಜೈ ನ್ಯೂರೋಡ್‌ನಲ್ಲಿ ಸುಮಾರು 300 ಮೀ ಉದ್ದದ ರಸ್ತೆಯ ಕಾಂಕ್ರಿಟೀಕರಣದ ಕೆಲಸ ಫೆಬ್ರುವರಿ ತಿಂಗಳಲ್ಲೇ ಶುರುವಾಗಿದೆ. ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಇಲ್ಲಿನ ಹಳೆಯ ರಸ್ತೆಯನ್ನು ಅಗೆದ ಎರಡೂವರೆ ತಿಂಗಳ ಬಳಿಕ ಮಾರ್ಗದ ಒಂದು ಪಾರ್ಶ್ವದ ಕಾಂಕ್ರೀಟ್‌ ಹಾಕಲಾಗಿದೆ. ಇನ್ನೊಂದು ಪಾರ್ಶ್ವದ ಕಾಂಕ್ರೀಟ್ ಅನ್ನು ಇನ್ನಷ್ಟೇ ಹಾಕಬೇಕಿದೆ’ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದರು.

‘ಮನೆಗೆ ಏನೇ ಅಗತ್ಯವಸ್ತು ತರುವುದಕ್ಕೂ ನಾವು ನಡೆದೇ ಹೋಗಬೇಕು. ಈ ಪ್ರದೇಶದ ಅನೇಕ ಮನೆಗಳ  ಮಾಲೀಕರು ಮನೆಯಿಂದ ವಾಹನ ಹೊರಗೆ ತೆಗೆಯಲು ಸಾಧ್ಯವಾಗಿಲ್ಲ. ಈ ಕಾಮಗಾರಿ ಯಾವಾಗ ಮುಗಿಯುತ್ತೋ ಎಂದು ಕಾಯುತ್ತಿದ್ದೇವೆ’ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದರು.

ಇಲ್ಲಿ ಅಂಗನವಾಡಿ (ಪ್ರೀಸ್ಕೂಲ್‌), ಸೂಪರ್‌ ಮಾರ್ಕೆಟ್‌, ಕ್ಲಿನಿಕ್‌ ಹಾಗೂ ಅನೇಕ ಮಳಿಗೆಗಳು ಇದ್ದು, ಆಮೆಗತಿಯ ಕಾಮಗಾರಿಯ ಕಾರಣದಿಂದ ಅವುಗಳಿಗೂ ನಷ್ಟ ಉಂಟಾಗುತ್ತಿದೆ. ಅಗೆದು ಹಾಕಿದ ಈ ರಸ್ತೆಯಲ್ಲಿ ಸಾಗುವಾಗ ಅನೇಕ ದ್ವಿಚಕ್ರ ವಾಹನ ಸವಾರರು ಬಿದ್ದಿದ್ದಾರೆ. ಈಚೆಗೆ ಒಬ್ಬ ಸವಾರ ಬಿದ್ದು 

‘ನಮ್ಮ ಅಂಗಡಿಗೆ ಎರಡೂವರೆ ತಿಂಗಳಿಂದ ವ್ಯಾಪಾರ ಇಲ್ಲ. ಅಂಗಡಿಗೆ ಸಾಮಗ್ರಿ ತರುವ ವಾಹನಗಳೂ ಬಾರದ ಸ್ಥಿತಿ ಇದೆ. ಹಾಲಿನ ಪೊಟ್ಟಣಗಳನ್ನೂ ನಾವು ಚೀಲದಲ್ಲಿ ಹಾಕಿಕೊಂಡು ಹೊತ್ತುಕೊಂಡು ಬರುತ್ತಿದ್ದೇವೆ. ಒಂದು ತಿಂಗಳಲ್ಲಿ ಮುಗಿಸಬಹುದಾದ ಕಾಮಗಾರಿಗೆ ಮೂರು ತಿಂಗಳು ತೆಗೆದುಕೊಂಡಿದ್ದಾರೆ’ ಎಂದು ಇಲ್ಲಿನ ಅಂಗಡಿ ಮಳಿಗೆಯೊಂದರ ಮಹಿಳಾ ಸಿಬ್ಬಂದಿಯೊಬ್ಬರು ಅಳಲು ತೊಡಿಕೊಂಡರು.

‘ಸದಾ ಗ್ರಾಹಕರಿಂದ ಗಿಜಿಗುಡುತ್ತಿದ್ದ ನಮ್ಮ ಹೋಟೆಲ್‌ಗೆ ನಿತ್ಯವೂ ಬೆಳಿಗ್ಗೆಯಿಂದ ಸಂಜೆವರೆಗೆ ಹತ್ತಿಪ್ಪತ್ತು ಗಿರಾಕಿಗಳೂ ಬರುತ್ತಿಲ್ಲ. ನಮಗೆ ಕರೆಂಟ್‌ ಬಿಲ್‌ ಕಟ್ಟುವಷ್ಟೂ ವ್ಯಾಪಾರ ಆಗುತ್ತಿಲ್ಲ ಎಂದು ಇಲ್ಲಿನ ಹೋಟೆಲ್‌ನ ಸಿಬ್ಬಂದಿ’ ತಿಳಿಸಿದರು. 

‘ಈ ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸುವುದು ಒಳ್ಳೆಯದೇ. ಆದರೆ, ನಗರದ ಬಡಾವಣೆಗಳ ರಸ್ತೆಯನ್ನು ಅಭಿವೃದ್ಧಿಪಡಿಸುವಾಗ ನಾಗರಿಕರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುವುದೂ ಪಾಲಿಕೆಯ ಹೊಣೆ’ ಎನ್ನುತ್ತಾರೆ ಫೆಲಿಕ್ಸ್‌.

ಆನೆಗುಂಡಿ–ಕಾಪಿಕಾಡ್ ರಸ್ತೆಯನ್ನು ಈಗಾಗಲೇ ಕಾಂಕ್ರೀಟೀಕರಣಗೊಳಿಸಲಾಗಿದೆ. ಇಲ್ಲಿ ಆನೆಗುಂಡಿಯಿಂದ ಬಿಜೈ ಚರ್ಚ್‌ – ಲಾಲ್‌ಬಾಗ್‌ ರಸ್ತೆಯನ್ನು ಸಂಪರ್ಕಿಸುವ ಬಿಜೈ ನ್ಯೂರೋಡ್‌ಲ್ಲಿ 300 ಮೀ ಉದ್ದದ ಹಾಗೂ 6 ಮೀ ಅಗಲದ ಈ ರಸ್ತೆಯಲ್ಲಿ ಬಾಕಿ ಇದ್ದ ಕಾಂಕ್ರೀಟೀಕರಣ ಕಾಮಗಾರಿಯನ್ನು ₹ 70 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ಬಿಜೈ ಚರ್ಚ್‌ ಪ್ರದೇಶದಿಂದ ಆನೆಗುಂಡಿ, ಕಾಪಿಕಾಡ್‌, ಕೊಟ್ಟಾರಚೌಕಿ, ದೇರೇಬೈಲ್‌ ಮುಂತಾದ ಕಡೆಗೆ ಸಂಪರ್ಕ ಸುಗಮವಾಗಲಿದೆ.

ಕಾಂಕ್ರಿಟೀಕರಣ ಕಾಮಗಾರಿಯಿಂದ ಸಂಪರ್ಕ ಕಳೆದುಕೊಂಡ ಮನೆಗಳು ಸ್ಥಳೀಯ ಮಳಿಗೆ, ಹೋಟೆಲ್‌ಗಳ ವ್ಯಾಪಾರಕ್ಕೂ ಧಕ್ಕೆ ಕಾಮಗಾರಿ ಚುರುಕುಗೊಳಿಸುವಂತೆ ಸ್ಥಳೀಯರ ಒತ್ತಾಯ
ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ರಸ್ತೆಯನ್ನು ಮುಂಬರುವ ಜೂನ್‌ 15ರೊಳಗೆ ಸಾರ್ವಜನಿಕ ಬಳಕೆಗೆ ಬಿಟ್ಟುಕೊಡಲಿದ್ದೇವೆ
ಲ್ಯಾನ್ಸ್‌ ಲಾಟ್‌ ಪಿಂಟೊ ಪಾಲಿಕೆ ಸದಸ್ಯ
ರಸ್ತೆಯ ಒಂದು ಪಾರ್ಶ್ವದ ಕಾಂಕ್ರಿಟೀಕರಣ ಕಾಮಗಾರಿ ಪೂರ್ಣಗೊಳಿಸಿ ಬಳಿಕ ಇನ್ನೊಂದು ಪಾರ್ಶ್ವದ ಕಾಮಗಾರಿಯನ್ನು ನಂತರ ಆರಂಭಿಸಿದ್ದರೆ ಸ್ಥಳೀಯರು ಸಮಸ್ಯೆ ಎದುರಿಸುವುದನ್ನು ತಪ್ಪಿಸಬಹುದಿತ್ತು
ಫೆಲಿಕ್ಸ್‌ ಬಿಜೈ
‘ಬಂಡೆ ಸಿಕ್ಕಿದ್ದರಿಂದ ಸಮಸ್ಯೆ’
‘ಕಾಂಕ್ರೀಟೀಕರಣ ನಡೆಸಲು ರಸ್ತೆಯನ್ನು ಅಗೆದಾಗ ಬಂಡೆ ಸಿಕ್ಕಿದ್ದರಿಂದ ಕಾಮಗಾರಿ ವಿಳಂಬವಾಗಿದೆ. ಅಕ್ಕ ಪಕ್ಕದಲ್ಲಿ ಮನೆಗಳು ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿರುವುದರಿಂದ ಬಂಡೆಯನ್ನು ಸ್ಫೋಟಿಸಿ ತೆಗೆಯಲು ಆಗಲಿಲ್ಲ. ಹಾಗಾಗಿ  ಬಂಟೆಯನ್ನು ಸ್ವಲ್ಪ ಸ್ವಲ್ಪವೇ ಒಡೆದು ತೆಗೆಯಲು 22 ದಿನಗಳು ಬೇಕಾದವು. ಹಾಗಾಗಿ ಕಾಮಗಾರಿ ವಿಳಂಬವಾಗಿದೆ. ರಸ್ತೆಯ ಒಂದು ಪಾರ್ಶ್ವದ ಮಾರ್ಗದ ಕಾಂಕ್ರೀಟೀಕರಣ ಮುಗಿದಿದ್ದು ಇನ್ನೊಂದು ಪಾರ್ಶ್ವರ ಕಾಂಕ್ರೀಟೀಕರಣ ಮುಂದಿನವಾರ ಮುಗಿಯಲಿದೆ’ ಎಂದು ಬಿಜೈ ವಾರ್ಡ್‌ನ (ವಾರ್ಡ್‌ 31)  ಪಾಲಿಕೆ ಸದಸ್ಯ ಲ್ಯಾನ್ಸ್‌ ಲಾಟ್‌ ಪಿಂಟೊ‌ ತಿಳಿಸಿದರು. ‘ಮಳೆಗಾಲಕ್ಕೆ ಮುನ್ನವೇ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶ ನಮ್ಮದು. ಜೂನ್‌ 1ಕ್ಕೆ ಕಾಂಕ್ರಿಟೀಕರಣ ಕಾಮಗಾರಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ಭರವಸೆ ನೀಡಿದ್ದಾರೆ.  ಆ ಬಳಿಕ ಕ್ಯೂರಿಂಗ್‌ ಹಾಗೂ ಅಂತಿಮ ಹಂತದ ಕೆಲಸಗಳಿಗೆ ಸ್ವಲ್ಪ ದಿನ ಬೇಕಾದೀತು’ ಎಂದು ಅವರು ತಿಳಿಸಿದರು. ‘ಇಲ್ಲಿ ಒಳಚರಂಡಿಯ ಹಳೆಯ ಕೊಳವೆಮಾರ್ಗವನ್ನು ಬಿಜೈ ಮುಖ್ಯರಸ್ತೆ ಪಕ್ಕದ ಮುಖ್ಯ ಕೊಳವೆಮಾರ್ಗಕ್ಕೆ ಜೋಡಿಸಿದ್ದೇವೆ. ಈ ಪ್ರದೇಶದ ಒಳಚರಂಡಿ ಸಮಸ್ಯೆಯೂ ಇದರಿಂದ ನಿವಾರಣೆ ಆಗಲಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT