ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಮೂರು ಸಣ್ಣ ಹಡಗು ಬೆಂಕಿಗಾಹುತಿ

ಬೆಂಕಿ ನಂದಿಸಲು ನಾಲ್ಕು ಗಂಟೆ ಹರಸಾಹಸ: ಶೆಡ್‌, ಮನೆಗೂ ಹಾನಿ
Last Updated 28 ಅಕ್ಟೋಬರ್ 2022, 21:00 IST
ಅಕ್ಷರ ಗಾತ್ರ

ಮಂಗಳೂರು: ಸರಕು ಸಾಗಣೆಗೆ ಬಳಸುವ ಮೂರು ಸಣ್ಣಹಡಗುಗಳು ನಗರದ ಕಸಬಾ ಬೆಂಗ್ರೆಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಬೆಂಕಿ ದುರಂತದಲ್ಲಿ ಆಹುತಿಯಾಗಿವೆ. ಮನೆ ಮತ್ತು ಶೆಡ್‌ಗೂ ಬೆಂಕಿಯಿಂದ ಹಾನಿ ಉಂಟಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸತತ ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದರು. ಬೆಂಕಿ ನಂದಿಸುವ ಕಾರ್ಯಾಚರಣೆ ರಾ‌ತ್ರಿ 10 ಗಂಟೆವರೆಗೂ ಮುಂದುವರಿದಿತ್ತು.

‘ಲಕ್ಷದ್ವೀಪದ ನಿವಾಸಿಗಳಿಗೆ ಸೇರಿದವು ಎನ್ನೆಲಾದ ಅಲ್ ಮದಾತ್, ಅಲ್ ಜರೀರಾ, ನಜಾತ್ ಎಂಬ ಮೂರು ಹಡಗುಗಳನ್ನು ಕಸಬಾ ಬೆಂಗರೆಯ ನದಿ ಕಿನಾರೆಯಲ್ಲಿ ದುರಸ್ತಿ ಸಲುವಾಗಿ ಲಂಗರು ಹಾಕಲಾಗಿತ್ತು. ಸಂಜೆ 4.30ರ ಸುಮಾರಿಗೆ ಹಡಗೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳೀಯರು ಸೇರಿ ತಕ್ಷಣವೇ ಬೆಂಕಿ ನಂದಿಸುವ ಪ್ರಯತ್ನ ನಡೆಸಿದೆವು. ಅಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆಗಳು ಪಕ್ಕದಲ್ಲಿ ನಿಲ್ಲಿಸಿದ್ದ ಇನ್ನೆರಡು ಹಡಗುಗಳತ್ತಲೂ ಚಾಚಿಕೊಂಡವು. ‌ಅಗ್ನಿಶಾಮಕ ದಳಕ್ಕೆ ತಕ್ಷಣವೇ ಮಾಹಿತಿ ನೀಡಿದ್ದೆವು. ಅವರು ಸ್ಥಳಕ್ಕೆ ತಲುಪುವಷ್ಟರಲ್ಲಿ ಮೂರೂ ಹಡಗುಗಳಿಗೂ ಬೆಂಕಿ ವ್ಯಾಪಿಸಿತ್ತು’ ಎಂದು ಸ್ಥಳೀಯರು ಮಾಹಿತಿ ನೀಡಿದರು.

ಹಡಗುಗಳಲ್ಲಿ ಡೀಸೆಲ್ ತುಂಬಿತ್ತು. ಸಂಜೆ ಹೊತ್ತು ಪಡುವಣ ದಿಕ್ಕಿನಿಂದ ಗಾಳಿಯೂ ಜೋರಾಗಿಯೇ ಬೀಸುತ್ತಿತ್ತು. ಸ್ಥಳದಲ್ಲಿ ದಟ್ಟ ಹೊಗೆಯೂ ಆವರಿಸಿತ್ತು. ಹಾಗಾಗಿ ಬಾನೆತ್ತರಕ್ಕೆ ಹಬ್ಬಿದ್ದ ಬೆಂಕಿಯ ಜ್ವಾಲೆಯನ್ನು ಹತೋಟಿಗೆ ತರಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಅಗ್ನಿಶಾಮಕ ದಳದ ಜೊತೆ ಸ್ಥಳೀಯರೂ ಪಂಪ್ ಮೂಲಕ ನದಿ ನೀರನ್ನು ಹಾಯಿಸಿ ಬೆಂಕಿ ನಂದಿಸಲು ಪ್ರಯತ್ನ ಮಾಡಿದರು. ಆದರೂ ಹಡಗುಗಳನ್ನು ಉಳಿಸಿಕೊಳ್ಲಲು ಆಗಲಿಲ್ಲ.

‘ಬೆಂಕಿಯ ತೀವ್ರತೆಗೆ ಮೂರು ಹಡಗುಗಳು ಸಂಪೂರ್ಣ ಸುಟ್ಟು ಹೋಗಿವೆ. ಹಡಗುಗಳ ದುರಸ್ತಿಗಾಗಿ ತರಿಸಿದ್ದ ಲಕ್ಷಾಂತರ ರೂಪಾಯಿಯ ಸಾಮಗ್ರಿಗಳು ಕೂಡ ಬೆಂಕಿಗೆ ಆಹುತಿಯಾಗಿವೆ. ಪಕ್ಕದಲ್ಲಿದ್ದ ಶೆಡ್‌ನಲ್ಲಿ ಅನೇಕ ವ್ಯಾಪಾರಿಗಳು ಒಣಮೀನು ದಾಸ್ತಾನು ಇಡುತ್ತಿದ್ದರು. ಹಲವು ಮಂದಿ ಈ ಶೆಡ್‌ನಲ್ಲಿ ಕೆಲಸಕ್ಕಿದ್ದರು. ಬೆಂಕಿ ಅನಾಹುತದಿಂದ ಅವರಿಗೂ ನಷ್ಟ ಉಂಟಾಗಿದೆ’ ಎಂದು ಸ್ಥಳೀಯರು ‌ಮಾಹಿತಿ ನೀಡಿದರು.

ಈ ಹಡಗುಗಳಲ್ಲಿ ನಿಲ್ಲಿಸಿದ್ದ ಜಾಗದ ಸಮೀಪದಲ್ಲಿದ್ದ ಒಂದು ಮನೆಗೂ ಹಾನಿ ಉಂಟಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣವೇ ಮನೆಯ ಒಳಗಿದ್ದ ಸಾಮಗ್ರಿಗಳನ್ನು ಮನೆ ಮಂದಿ ಸುರಕ್ಷಿತ ಪ್ರದೇಶಕ್ಕೆ ಸಾಗಿಸಿದ್ದರು.

‘ಹಡಗುಗಳಲ್ಲಿ ಡೀಸೆಲ್ ಇದ್ದುದರಿಂದ ಹಾಗೂ ಗಾಳಿ ಜೋರಾಗಿ ಬೀಸುತ್ತಿದ್ದುದರಿಂದ ಬೆಂಕಿ ನಂದಿಸಲು ಹೆಚ್ಚು ಸಮಯ ತಗುಲಿತು. ಅಗ್ನಿಶಾಮಕ ದಳದ 5 ವಾಹನಗಳು ಹಾಗೂ ನವಮಂಗಳೂರು ಬಂದರು ಮಂಡಳಿ ಮತ್ತು ಎಂಆರ್‌ಪಿಎಲ್‌ನ ಮೂರು ವಾಹನಗಳು ಸೇರಿ ಒಟ್ಟು ಎಂಟು ಅಗ್ನಿಶಾಮಕ ವಾಹನಗಳನ್ನು ಬೆಂಕಿ ನಂದಿಸುವ ಕಾರ್ಯಾಚರಣೆಗೆ ಬಳಸಿದ್ದೇವೆ. ಘಟನೆಯಿಂದ ಯಾರಿಗೂ ಗಾಯ- ಅಪಾಯವಾಗಿಲ್ಲ. ಆದರೆ, ಭಾರಿ ಪ್ರಮಾಣದಲ್ಲಿ ಆಸ್ತಿ ನಷ್ಟವಾಗಿದೆ’ ಎಂದು ಮಂಗಳೂರಿನ ಮುಖ್ಯ ಅಗ್ನಿಶಾಮಕ ಅಧಿಕಾರಿ ತಿಪ್ಪೇಸ್ವಾಮಿ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

‘ಲಕ್ಷದ್ವೀಪಕ್ಕೆ ಸರಕು ಸಾಗಿಸುವ ಹಡಗುಗಳು’

ಕಟ್ಟಡ ನಿರ್ಮಾಣಕ್ಕೆ ಬಳಸುವ ಜಲ್ಲಿ– ಕಲ್ಲು, ಸಿಮೆಂಟ್, ಕಬ್ಬಿಣ ಹಾಗೂ ಆಹಾರ ಸಾಮಗ್ರಿಗಳು ನಗರದಿಂದ ಲಕ್ಷದ್ವೀಪ ಸಮೂಹ ರವಾನಿಸಲಾಗುತ್ತದೆ. ನಗರದ ಹಳೆ ಬಂದರಿನಿಂದ ಲಕ್ಷದ್ವೀಪಕ್ಕೆ ಸರಕು ಸಾಗಿಸಲು ಈ ಸಣ್ಣ ಹಡಗುಗಳನ್ನು ಬಳಸಲಾಗುತ್ತಿತ್ತು. ದುರಸ್ತಿ ಸಲುವಾಗಿ ಎರಡು ವರ್ಷಗಳಿಂದ ಇವು ಕಸಬಾ ಬೆಂಗ್ರೆಯಲ್ಲೇ ಲಂಗರು ಹಾಕಿದ್ದವು. ಇದರ ದುರಸ್ತಿ ಮಾಡುತ್ತಿದ್ದ ಕಾರ್ಮಿಕರು ದೀಪಾವಳಿಗಾಗಿ ಊರಿಗೆ ಮರಳಿದ್ದರು ಎಂದು ಸ್ಥಳೀಯರೊಬ್ಬರು ‘ಪ್ರಜಾವಾಣಿ‘ಗೆ ಮಾಹಿತಿ ನೀಡಿದರು.

****

ಹಡಗುಗಳ ಮಾಲೀಕರ ವಿವರಗಳು ಇನ್ನೂ ಲಭ್ಯವಾಗಿಲ್ಲ. ಈ ದುರ್ಘಟನೆಯಿಂದ ಒಟ್ಟು ಎಷ್ಟು ನಷ್ಟ ಉಂಟಾಗಿದೆ ಎಂಬುದನ್ನು ಇನ್ನಷ್ಟೇ ಅಂದಾಜು ಮಾಡಬೇಕಿದೆ.

–ತಿಪ್ಪೇಸ್ವಾಮಿ, ಮುಖ್ಯ ಅಗ್ನಿಶಾಮಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT