ಗುರುವಾರ , ಅಕ್ಟೋಬರ್ 6, 2022
23 °C
ಬೊಳ್ಳಿ ಸಂಭ್ರಮ; ಬಂಗಾರ್ದ ಕುರಲ್, ಅಮೃತದ ಐಸಿರೊ ಪುಸ್ತಕಗಳು ಪ್ರಕಟ; ಉಪನ್ಯಾಸಗಳು ಯುಟ್ಯೂಬ್‌ನಲ್ಲಿ ಲಭ್ಯ

ತುಳು ವೆಬಿನಾರ್‌ಗೆ ಶತಕದ ವೈಭವ

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ತುಳು ಭಾಷೆ, ಸಂಸ್ಕೃತಿ, ಆಚಾರ–ವಿಚಾರ, ಉಡುಗೆ–ತೊಡುಗೆ ಬಗ್ಗೆ ಮಾಹಿತಿ ಪ್ರಚುರಪಡಿಸುವುದಕ್ಕಾಗಿ ಕೊರೊನಾ ಕಾಲದಲ್ಲಿ ಆರಂಭಿಸಿದ ವೆಬಿನಾರ್ ಶತಕದ ಸಂಭ್ರಮದಲ್ಲಿದೆ. ಭಾನುವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಹಿತಿ ಬಿ.ಎ.ವಿವೇಕ ರೈ ಅವರು ವಿಶ್ವವ್ಯಾಪಿ ತುಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುವುದರೊಂದಿಗೆ ವೆಬಿನಾರ್‌ಗೆ ಸಂಬಂಧಿಸಿ ನೂರರ ಮೈಲಿಕಲ್ಲು ಸ್ಥಾಪನೆಯಾಗಲಿದೆ.

ಮಂಗಳೂರು ವಿಶ್ವವಿದ್ಯಾಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ವಿಶ್ವವಿದ್ಯಾಲಯ ಸಂಧ್ಯಾ ಕಾಲೇಜಿನ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ನೇತೃತ್ವದಲ್ಲಿ 2020ರ ಜೂನ್ 20ರಂದು ಮೊದಲ ವೆಬಿನಾರ್ ನಡೆದಿತ್ತು. ಮೊದಲ 50 ಕಾರ್ಯಕ್ರಮಗಳು ಝೂಮ್ ಆ್ಯಪ್‌ನಲ್ಲಿ ನಡೆದಿದ್ದವು. ನಂತರದ ಕಾರ್ಯಕ್ರಮಗಳು ಗೂಗಲ್ ಮೀಟ್‌ನಲ್ಲಿ ನಡೆದಿವೆ. 100ನೇ ಕಾರ್ಯಕ್ರಮ ‘ಗೇನದ ಗೆಜ್ಜೆ–ನೂದನೆ ಪಜ್ಜೆ’ (ಜ್ಞಾನದ ಗೆಜ್ಜೆ–ನೂರನೇ ಹೆಜ್ಜೆ) ಎಂಬ ಶೀರ್ಷಿಕೆಯಲ್ಲಿ ನಡೆಯಲಿದೆ.

ತುಳು ಸಂಸ್ಕೃತಿ, ಆಚರಣೆ, ನಂಬಿಕೆ, ವೈದ್ಯ, ಕೃಷಿ, ಆರಾಧನೆ, ಬದುಕು, ಜನಜೀವನ, ಉಡುಗೆ–ತೊಡುಗೆ, ಆಚಾರ ವಿಚಾರ, ಪ್ರದರ್ಶಕ ಕಲೆ, ಸಂಗೀತ, ಸಿನಿಮಾ, ಸಾಹಿತ್ಯ, ಪಳಂತುಳು (ಹಳೆಯ ತುಳು) ಮುಂತಾದ ವಿಷಯಗಳ ಬಗ್ಗೆ ವೆಬಿನಾರ್‌ನಲ್ಲಿ ಉಪನ್ಯಾಸ–ಚರ್ಚೆ ನಡೆದಿದೆ. ದೇಶದ ನಾನಾ ಭಾಗಗಳಲ್ಲಿ ಮತ್ತು ವಿದೇಶದಲ್ಲಿ ಇರುವ ತುಳು ಪಂಡಿತರು, ಚಿಂತಕರು ಭಾಗವಹಿಸಿದ್ದಾರೆ. ಪ್ರತಿ 25 ಕಾರ್ಯಕ್ರಮಗಳು ಮುಗಿದಾಗ ಉಪನ್ಯಾಸಗಳ ಸಂಕಲನ ಹೊರತರಲಾಗಿದೆ. ಮಂಗಳೂರು ವಿವಿ ಸಂಧ್ಯಾಕಾಲೇಜಿನ ಯು ಟ್ಯೂಬ್‌ ಚಾನಲ್‌ನಲ್ಲೂ ಉಪನ್ಯಾಸಗಳು ಲಭ್ಯವಿವೆ. ಹೀಗಾಗಿ ಇದೊಂದು ಶಾಶ್ವದ ಜ್ಞಾನ ಯೋಜನೆಯಾಗಿ ರೂಪುಗೊಂಡಿದೆ ಎಂಬುದು ತುಳು ಪೀಠದ ಸಂಯೋಜಕ, ಮಾಧವ ಎಂ.ಕೆ ಅವರ ವಿವರಣೆ.

ತುಳು ಮಾಹಿತಿ ಕಣಜ

ಪ್ರತಿ ಕಾರ್ಯಕ್ರಮದಲ್ಲೂ ತುಳುವಿಗೆ ಸಂಬಂಧಪಟ್ಟ ಉಪಯುಕ್ತ ಮಾಹಿತಿಗಳು ದಾಖಲಾಗಿವೆ. ಇದೆಲ್ಲವನ್ನು ಸಂಗ್ರಹಿಸಿಟ್ಟುಕೊಂಡಿರುವುದರಿಂದ ತುಳು ಮಾಹಿತಿ ಕಣಜವಾಗಿ ವೆಬಿನಾರ್ ಮಾರ್ಪಟ್ಟಿದೆ ಎಂದು ಮಾಧವ ಎಂ.ಕೆ ಅಭಿಪ್ರಾಯಪಟ್ಟರು.

‘ತುಳು ಅಧ್ಯಯನ ಪೀಠದಲ್ಲಿ ಧಾರಾಳ ಚಟುವಟಿಕೆ ನಡೆಯುತ್ತಿತ್ತು. ಕೊರೊನಾ ಕಾಲದಲ್ಲಿ ಇದಕ್ಕೆ ಹೊಡೆತ ಬಿತ್ತು. ಹೀಗಾಗಿ ವೆಬಿನಾರ್ ಆರಂಭಿಸುವ ಯೋಚನೆ ಬಂತು. ಪ್ರತಿ ಕಾರ್ಯಕ್ರಮದಲ್ಲೂ ಒಬ್ಬರು ಜನಪ್ರತಿನಿಧಿ ಅಥವಾ ಸಾರ್ವಜನಿಕ ವಲಯದ ವ್ಯಕ್ತಿ, ಒಬ್ಬರು ಸಾಮಾನ್ಯ ವ್ಯಕ್ತಿ, ಒಬ್ಬರು ತಜ್ಞ ಮತ್ತು ಒಬ್ಬರು ಶೈಕ್ಷಣಿಕ ವಲಯದ ವ್ಯಕ್ತಿಯನ್ನು ಕರೆಯಲಾಗುತ್ತಿತ್ತು’ ಎಂದು ಅವರು ತಿಳಿಸಿದರು.

‘ಮೊದಲ 25 ವೆಬಿನಾರ್‌ಗಳ ಉಪನ್ಯಾಸಗಳನ್ನು ಸಂಗ್ರಹಿಸಿ ಬೊಳ್ಳಿ ಸಂಭ್ರಮ (ಬೆಳ್ಳಿ ಸಂಭ್ರಮ), ನಂತರದ 25 ಉಪನ್ಯಾಸಗಳ ಸಂಗ್ರಹ ಬಂಗಾರ್ದ ಕುರಲ್ (ಚಿನ್ನದ ತೆನೆ), ನಂತರ ಅಮೃತದ ಐಸಿರೊ (ಅಮೃತದ ಸಮೃದ್ಧಿ) ಎಂಬ ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಕೊನೆಯ 75 ಉಪನ್ಯಾಸಗಳು ಗೇನದ ಗೆಜ್ಜೆ– ನೂದನೇ ಪಜ್ಜೆ ಎಂಬ ಹೆಸರಿನ ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳಲಿದೆ’ ಎಂದು ಅವರು ವಿವರಿಸಿದರು. 

ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ

ನೂರನೇ ವೆಬಿನಾರ್ ಬೆಳಿಗ್ಗೆ 10 ಗಂಟೆಗೆ ಗೂಗಲ್ ಮೀಟ್‌ನಲ್ಲಿ ನಡೆಯಲಿದೆ. ತುಳುತ ಪಸರ್ಮೆ ಲೋಕದೊರ್ಮೆ (ಜಗತ್ತಿನಾದ್ಯಂತ ಪಸರಿಸುತ್ತಿರುವ ತುಳು) ಎಂಬ ವಿಷಯದ ಬಗ್ಗೆ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ವಿಶೇಷ ಉಪನ್ಯಾಸ ನೀಡುವರು. ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಸ್‌.ಯಡಪಡಿತ್ತಾಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್‌ ಮತ್ತು ಮಂಗಳೂರು ವಿವಿ ಕುಲಸಚಿವ ಕಿಶೋರ್ ಕುಮಾರ್ ಪಿ.ಕೆ. ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಪಾಲ್ಗೊಳ್ಳಲು ಲಿಂಕ್‌: https://meet.google.com/jbt-ajwy-jwp 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.