ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟೀಲು ಮೇಳದ ಸೇವೆಯಾಟಕ್ಕೆ ಕಾಲಮಿತಿ ವಿರೋಧಿಸಿ ಪ್ರತಿಭಟನಾ ಜಾಥಾ ನ.6ರಂದು

ಮೇಳದ ತೀರ್ಮಾನದಿಂದ ಭಕ್ತರ ನಂಬಿಕೆಗೆ ಅಪಚಾರ– ಸಮಿತಿ ಆಕ್ರೋಶ
Last Updated 3 ನವೆಂಬರ್ 2022, 9:36 IST
ಅಕ್ಷರ ಗಾತ್ರ

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ (ಕಟೀಲು ಮೇಳ) ಸೇವೆಯಾಟಗಳನ್ನು ಸಂಜೆ 4.30ರಿಂದ ರಾತ್ರಿ 10ರವರೆಗೆ ಕಾಲಮಿತಿಗೆ ಒಳಪಡಿಸುವುದಕ್ಕೆ ಶ್ರೀ ಕಟೀಲು ಯಕ್ಷಸೇವಾ ಸಮನ್ವಯ ಸಮಿತಿ ವಿರೋಧ ವ್ಯಕ್ತಪಡಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಸಮಿತಿ ಸಂಚಾಲಕಅಶೋಕ ಕೃಷ್ಣಾಪುರ, ‘ಹರಕೆಯ ಸೇವೆಯಾಟವನ್ನು ಕಾಲಮಿತಿಗೆ ಒಳಪಡಿಸಿದರೆ ಭಕ್ತರ ಧಾರ್ಮಿಕ ನಂಬಿಕೆಗೆ ಚ್ಯುತಿ ಉಂಟಾಗಲಿದೆ. ಇದೇ 24ರಿಂದ ಮೇಳದ ತಿರುಗಾಟ ಆರಂಭವಾಗಲಿದೆ. ಯಕ್ಷಗಾನವನ್ನು ಕಾಲಮಿತಿಗೆ ಒಳಪಡಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿ ಇದೇ 6ರಂದು ಬಜಪೆಯಿಂದ ಕಟೀಲಿನವರೆಗೆ ‘ಕಟೀಲಮ್ಮನೆಡೆ ಭಕ್ತರ ನಡೆ’ ಜಾಥಾ ನಡೆಸಲಿದ್ದೇವೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದೇವೆ. ಬೆಳಿಗ್ಗೆ 8.30ಕ್ಕೆ ಆರಂಭವಾಗುವ ಈಪ್ರತಿಭಟನೆ ಜಾಥಾದಲ್ಲಿ 8 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.

‘ಕಟೀಲು ಮೇಳದ ಆಟಕ್ಕೆ ಕಾಲಮಿತಿ ನಿಗದಿ ಕೈಬಿಡುವಂತೆ ಈ ಕುರಿತು ಮೂರು ವಾರಗಳ ಹಿಂದೆಯೇ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌ ಅವರಿಗೆ,ಜಿಲ್ಲಾಧಿಕಾರಿಗೆ ಹಾಗೂ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಆದರೂ ಯಾವುದೇ ಕ್ರಮ ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕಟೀಲು ಮೇಳ ಇತರ ವಾಣಿಜ್ಯ ಉದ್ದೇಶದ ಮೇಳ ಅಲ್ಲ. ಈ ಮೇಳದ ಆಟ ಬೇರೆ ಮೇಳಗಳ ಆಟಗಳಿಗಿಂದ ವಿಭಿನ್ನ. ಇದರ ಸೇವೆಯಾಟ ಕರಾವಳಿಯ ಜನರ ಧಾರ್ಮಿಕ ನಂಬಿಕೆಯ ಪ್ರತೀಕ. ಕಷ್ಟ ಕಾರ್ಪಣ್ಯ ದೂರಮಾಡುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಭಕ್ತರು ಹರಕೆಯ ರೂಪದಲ್ಲಿ ಸೇವೆಯಾಟ ನಡೆಸುತ್ತಾರೆ. ಇದು ಕಲೆ, ಸಂಸ್ಕೃತಿ ಹಾಗೂ ಉತ್ಸವ ಪರಿಕಲ್ಪನೆಗಳನ್ನು ಮೀರಿದ ದೇವರ ಸೇವೆ’ ಎಂದರು.

‘ಊರಿನ ಹತ್ತು ಸಮಸ್ತರು ಸೇರಿ ಅಚಲ ಶ್ರದ್ಧೆಯಿಂದ ಈ ಮೇಳದ ಆಟವನ್ನು ಪ್ರತಿವರ್ಷವೂ ನಡೆಸುವ ಪರಿಪಾಟವೂ ಅನೇಕ ಕಡೆ ಹತ್ತಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಮೂಲ್ಕಿ ಅರಸು ಕಂಬಳದ ಸಂದರ್ಭದಲ್ಲಿ ಹತ್ತು ಸಮಸ್ತರು ಸೇರಿನಡೆಸುವ ಆಟಕ್ಕೆ 150 ವರ್ಷಗಳ ಇತಿಹಾಸ ಇದೆ. ಜೋಕಟ್ಟೆ ಕಾನದಲ್ಲಿ 73 ವರ್ಷಗಳಿಂದ ಹಾಗೂ ಕೃಷ್ಣಾಪುರದಲ್ಲಿ 56 ವರ್ಷಗಳಿಂದ ಪ್ರತಿ ವರ್ಷವೂ ರಾತ್ರಿ ಇಡೀ ಸೇವೆಯಾಟವನ್ನು ಏರ್ಪಡಿಸಲಾಗುತಿದೆ. ಕೆಲವೆಡೆ ಸೇವೆಯಾಟದ ಸಂದರ್ಭದಲ್ಲಿ 10 ಸಾವಿರಕ್ಕೂ ಅಧಿಕ ಮಂದಿಗೆ ಅನ್ನದಾನವೂ ನಡೆಯುತ್ತದೆ. ಇಡೀ ಗ್ರಾಮವೇ 20 ದಿನ ಶುದ್ಧಾಚಾರವನ್ನು ಪಾಲಿಸಿಕೊಂಡು ಆಟ ನಡೆಸುವ ಉದಾಹರಣೆಗಳೂ ಇವೆ. ಇಂತಹ ಸೇವೆಯಾಟವನ್ನು ಕಾಲಮಿತಿಗೆ ಒಳಪಡಿಸುವ ನಿರ್ಧಾರ ಭಕ್ತರಿಗೆ ಅತೀವ ನೋವುಂಟು ಮಾಡಿದೆ’ ಎಂದು ತಿಳಿಸಿದರು.

‘ಕಟೀಲು ದೇವಸ್ಥಾನದ ಗರ್ಭಗುಡಿಗೆ ಬಾಗಿಲು ಹಾಕಿದ ಬಂತರ ದೇವಿಯ ಸವಾರಿ ಆರಂಭವಾಗುತ್ತದೆ. ದೇವಿಯು ಪ್ರಸಾದವನ್ನು ಸ್ವೀಕರಿಸುವುದೇ ಬ್ರಾಹ್ಮೀ ಮುಹೂರ್ತದಲ್ಲಿ. ಆಟ ವೈಭವವನ್ನು ಪಡೆಯುವುದೇ ಮುಂಜಾವದಲ್ಲಿ ಎಂಬ ನಂಬಿಕೆ ಭಕ್ತರದು. ರಾತ್ರಿ 10 ಗಂಟೆ ಒಳಗೆ ಸೇವೆಯಾಟವನ್ನು ಮುಗಿಸಿದರೆ ಭಕ್ತರ ನಂಬಿಕೆಗೆ ಅಪಚಾರವಾಗುವುದಿಲ್ಲವೇ’ ಎಂದು ಅವರು ಪ್ರಶ್ನಿಸಿದರು.

‘ಶಬ್ದಮಾಲಿನ್ಯ ಉಂಟಾಗುವುದನ್ನು ತಡೆಯಲು ರಾತ್ರಿ 10ರ ನಂತರ ಧ್ವನಿವರ್ಧಕ ಬಳಸುವಂತಿಲ್ಲ ಎಂಬ ನಿಯಮ ಪಾಲನೆ ಮಾಡಲು ರಾತ್ರಿ 10ರ ಬಳಿಕ ಯಕ್ಷಗಾನ ನಡೆಸಲಾಗುತ್ತಿಲ್ಲ ಎಂಬ ಕಾರಣವನ್ನು ಮೇಳದವರು ಹೇಳುತ್ತಿದ್ದಾರೆ. 2000ರಿಂದಲೇ ಈ ನಿಯಮ ಇತ್ತು. ಸಾರ್ವಜನಿಕ ರಸ್ತೆಗಳ ಪಕ್ಕದಲ್ಲಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಸರ್ಕಾರವೇ ಸುಗ್ರೀವಾಜ್ಞೆ ಹೊರಡಿಸಿಲ್ಲವೇ. ಈ ರೀತಿ ಕೆಡವಿದ ಕಟ್ಟಡವನ್ನು ಸರ್ಕಾರವೇ ಮುಂದೆ ನಿಂತು ಮತ್ತೆ ನಿರ್ಮಿಸಿಲ್ಲವೇ. ಪ್ರಾಣಿ ಹಿಂಸೆಯ ಕಾರಣಕ್ಕೆ ಜಲ್ಲಿಕಟ್ಟು ಹಾಗೂ ಕಂಬಳ ಕ್ರೀಡೆಗಳಿಗೆ ಸುಪ್ರೀಂ ಕೋರ್ಟ್ ನಿಷೇಧ ಹೇರಿತ್ತು. ಇದಕ್ಕೆ ಜನರಿಂದ ವಿರೋಧ ಬಂದ ಬಳಿಕ ಷರತ್ತುಬದ್ಧವಾಗಿ ಈ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಯಿತು. ಕಾನೂನಿನಲ್ಲಿ ಮಾರ್ಪಾಡು ಮಾಡಿ ಯಕ್ಷಗಾನವನ್ನೂ ರಾತ್ರಿ ಇಡೀ ಪ್ರದರ್ಶಿಸಲು ಅವಕಾಶ ಕಲ್ಪಿಸಲಿ’ ಎಂದು ಅವರು ಒತ್ತಾಯಿಸಿದರು.

ಸಮಿತಿಯ ಅಧ್ಯಕ್ಷ ಲೋಕನಾಥ ಶೆಟ್ಟಿ, ‘ಡೇರೆ ಒಳಗೆ 50 ಡೆಸಿಬಲ್‌ಗಿಂತ ಕಡಿಮೆ ಶಬ್ದವನ್ನು ಹೊರಸೂಸುವ ಧ್ವನಿವರ್ಧಕ ಬಳಸಿ ರಾತ್ರಿಯೂ ಯಕ್ಷಗಾನ ಏರ್ಪಡಿಸಬಹುದು. ಅದರ ಸದ್ದು 200 ಮೀ.ಗಿಂತ ಜಾಸ್ತಿ ದೂರ ಕೇಳಿಸಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂತಹ ಮಾರ್ಪಾಡುಗಳೊಂದಿಗೆ ರಾತ್ರಿ ಇಡೀ ಯಕ್ಷಗಾನ ನಡೆಸಲಿ’ ಎಂದು ಸಲಹೆ ನೀಡಿದರು.

ಪಿ.ಸುಧಾಕರ ಕಾಮತ್‌, ‘ಸರ್ಕಾರ ಮನಸ್ಸು ಮಾಡಿದರೆ ನಿಯಮ ಸಡಿಲಿಸಿ ರಾತ್ರಿಯೂ ಯಕ್ಷಗಾನವನ್ನು ನಡೆಸುವುದಕ್ಕೆ ಅವಕಾಶ ಕಲ್ಪಿಸುವುದು ಕಷ್ಟವೇನಲ್ಲ’ ಎಂದರು.

ಸಮಿತಿಯ ಪದಾಧಿಕಾರಿಗಳಾದ ಕೃಷ್ಣಪ್ಪ ಪೂಜರು ಹಾಗೂ ಶರ್ಮಿಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT