ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕನ್ ಹಂಚಿಕೆ ಅವ್ಯವಸ್ಥೆ: ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು
Last Updated 19 ಮೇ 2021, 3:53 IST
ಅಕ್ಷರ ಗಾತ್ರ

ಪುತ್ತೂರು: ಕೋವಿಡ್ ನಿರೋಧಕ ಲಸಿಕೆ ನೀಡುವ ಸಂಬಂಧ ಟೋಕನ್ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ. ಸರದಿ ಸಾಲಿನಲ್ಲಿ ನಿಂತು ಪಡೆಯಬೇಕಾಗಿದ್ದ ಟೋಕನ್ ವ್ಯವಸ್ಥೆ, ಅವ್ಯವಸ್ಥೆಯಿಂದ ಕೂಡಿದೆ ಎಂದು ತಾಲ್ಲೂಕಿನ ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ಲಸಿಕೆ ಪಡೆಯಲು ಬಂದಿದ್ದ ಸಾರ್ವಜನಿಕರು ಆರೋಪಿಸಿದರು.

ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೋವ್ಯಾಕ್ಸಿನ್ ಒಟ್ಟು 120 ಡೋಸ್ ಬಂದಿತ್ತು. ಮೊದಲು ಲಸಿಕೆ ಪಡೆದುಕೊಂಡಿರುವವರಿಗೆ ಎರಡನೇ ಡೋಸ್ ಬಂದಿರುವ ಬಗ್ಗೆ ಆಸ್ಪತ್ರೆಯಿಂದ ತಿಳಿಸಲಾಗಿತ್ತು. ಎರಡನೇ ಡೋಸ್ ಪಡೆದುಕೊಳ್ಳಲು ಹಲವಾರು ಮಂದಿ ಆಸ್ಪತ್ರೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಟೋಕನ್ ವಿತರಣೆಯಲ್ಲಿ ಅವ್ಯವಸ್ಥೆ ಆಗಿದೆ ಎಂದು ಆರೋಪಿಸಿದ ಜನರು, ವೈದ್ಯರು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

‘ಸಾಲಿನಲ್ಲಿ ನಿಂತವರಿಗೆ ಆದ್ಯತೆ ನೀಡಿ ಟೋಕನ್ ನೀಡಿಲ್ಲ. ಬೇಕಾಬಿಟ್ಟಿ ವಿತರಿಸಲಾಗಿದೆ. ಆಸ್ಪತ್ರೆ ವ್ಯಾಪ್ತಿಯ ಹೊರಗಿನವರಿಗೂ ಲಸಿಕೆ ನೀಡಲಾಗಿದೆ. ಕೆಲವರು ತಮ್ಮ ಪ್ರಭಾವ ಬಳಸಿ, ದೂರದ ಊರುಗಳಿಂದ ಬಂದು ಲಸಿಕೆ ಪಡೆಯುತ್ತಿದ್ದಾರೆ’ ಎಂದು ದೂರಿದರು.

‘ಟೋಕನ್ ವಿತರಣೆಯಲ್ಲಿ ಶ್ರೀಮಂತರಿಗೆ ಮೊದಲ ಆದ್ಯತೆ ನೀಡಿ, ಬಡವರನ್ನು ಕಡೆಗಣಿಸಲಾಗಿದೆ. ಇದು ಸರಿಯಾದ ಕ್ರಮವಲ್ಲ’ ಎಂದು ನೆಟ್ಟಾಳ ಬಾಲಕೃಷ್ಣ ರೈ ಆಕ್ರೋಶ ವ್ಯಕ್ತಪಡಿಸಿದರು. ಕೋವಿಡ್ ಹರಡುವುದನ್ನು ನಿಯಂತ್ರಿಸಲು ಅಂತರ ಕಾಯ್ದುಕೊಳ್ಳ
ಬೇಕು ಎಂಬ ನಿಯಮವಿದ್ದರೂ, ಆಸ್ಪತ್ರೆಯಲ್ಲೇ ಈ ನಿಯಮ ಪಾಲನೆಯಾಗಲಿಲ್ಲ. ಬೇಕಾಬಿಟ್ಟಿಯಾಗಿ ಜನರು ಗುಂಪು ಸೇರುತ್ತಿರುವುದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದರು.

ಕೋವ್ಯಾಕ್ಸಿನ್ ಎರಡನೇ ಡೋಸ್ ನೀಡಲು 120 ಡೋಸ್ ಬಂದಿದೆ. ಟೋಕನ್ ಹಂಚಿಕೆಯಲ್ಲಿ ಸಮಸ್ಯೆ ಆಗಿಲ್ಲ. ಎಲ್ಲರಿಗೂ ಕ್ರಮಬದ್ಧವಾಗಿ ಟೋಕನ್ ನೀಡಲಾಗಿದೆ.

ಡಾ.ಭವ್ಯಾ ವೈದ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT