ಮುಡಿಪು: ಮನಃಶಾಂತಿಯನ್ನು ಹುಡುಕಿಕೊಂಡು ಎಲ್ಲೆಲ್ಲೋ ಹೋಗುವುದಕ್ಕಿಂತ ನಮ್ಮೊಳಗೆ ಹಾಗೂ ಪರಿಸರದಲ್ಲಿ ಶಾಂತಿ ಸ್ಥಾಪಿಸಬೇಕು. ಪ್ರವಾಸೋದ್ಯಮ ದಿನವನ್ನು ಪ್ರೀತಿ, ಶಾಂತಿ, ಸೌಹಾರ್ದದಿಂದ ಆಚರಿಸೋಣ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಎಂಬಿಎ ಟೂರಿಸಂ ಆ್ಯಂಡ್ ಮ್ಯಾನೇಜ್‌ಮೆಂಟ್ ಹಾಗೂ ಪ್ರವಾಸೋದ್ಯಮ ಇಲಾಖೆ ಆಶ್ರಯದಲ್ಲಿ ಶುಕ್ರವಾರ ವಿವಿಯಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದು ಸೌಹಾರ್ದ ಮರೀಚಿಕೆಯಾಗಿದೆ. ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಕೆಲವು ಪ್ರವಾಸೋದ್ಯಮ ಕ್ಷೇತ್ರಗಳು ಅಶಾಂತಿಯ ಕಾರಣದಿಂದಲೇ ಸೊರಗಿ ಹೋಗುತ್ತಿವೆ. ಸೌಹಾರ್ದ ಸಮಾಜವನ್ನು ಕಟ್ಟುವುದರೊಂದಿಗೆ ಪ್ರವಾಸೋದ್ಯಮವನ್ನು ಬೆಳೆಸೋಣ ಎಂದರು.
ಅತಿಥಿಯಾಗಿ ಭಾಗವಹಿಸಿದ ದೈಜಿ ವಲ್ಡ್ ವಾಹಿನಿಯ ವಾಲ್ಟರ್ ನಂದಳಿಕೆ, ಪ್ರವಾಸೋದ್ಯಮ ಮತ್ತು ಶಾಂತಿ ಕುರಿತು ಮಾತನಾಡಿದರು.
ಮಂಗಳೂರು ವಿವಿ ಪ್ರಾಧ್ಯಾಪಕ ಪುಟ್ಟಣ್ಣ ಅವರು ಮಾತನಾಡಿ, ಪ್ರವಾಸೋದ್ಯಮವು ವಿಶ್ವದಲ್ಲೇ ಶ್ರೀಮಂತ ಉದ್ಯಮವಾಗಿದೆ. ಸುಸ್ಥಿರ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ ಮುನ್ನಡೆಯಬೇಕಿದೆ ಎಂದರು.
ಎಂಬಿಎ ವಿಭಾಗದ ಅಧ್ಯಕ್ಷ ಪ್ರೊ.ಶೇಖರ್ ಸ್ವಾಗತಿಸಿದರು. ಎಂಬಿಎ ಟೂರಿಸಂ ವಿಭಾಗದ ಸಂಯೋಜಕ ಪ್ರೊ.ಜೋಸೆಫ್ ಡಿ. ವಂದಿಸಿದರು. ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.