ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲ ನಾಡಿಗೆ ಪ್ರವಾಸಿಗರ ಲಗ್ಗೆ

Published 6 ಮೇ 2023, 14:29 IST
Last Updated 6 ಮೇ 2023, 14:29 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿಯ ಬಿರುಬಿಸಿಲ ತಾಪ, ಚುನಾವಣೆಯ ಕಾವು ಇವೆಲ್ಲದರ ನಡುವೆಯೂ, ಕಡಲ ನಾಡು ಪ್ರವಾಸಿಗರ ಮನ ಗೆದ್ದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಧಾರ್ಮಿಕ ಕ್ಷೇತ್ರಗಳು, ಕಡಲ ತೀರಗಳು, ನದಿ ತಟಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಕಳೆದ ಎರಡು ತಿಂಗಳಲ್ಲಿ 660 ವಿದೇಶಿ ಪ್ರವಾಸಿಗರೂ ಸೇರಿದಂತೆ 48.45 ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡಿದ್ದಾರೆ.

ಇಲ್ಲಿಯ ಧಾರ್ಮಿಕ ಪ್ರವಾಸೋದ್ಯಮ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಪ್ರವಾಸೋದ್ಯಮ ಇಲಾಖೆ ಗುರುತಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ 38 ಪ್ರವಾಸಿ ತಾಣಗಳಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಗರಿಷ್ಠ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಈ ಸ್ಥಳಗಳಲ್ಲಿ ವಾಹನ ನಿಲುಗಡೆ, ವಸತಿ ಗೃಹಗಳು, ಹೋಟೆಲ್‌ಗಳಲ್ಲಿ ಕೊಠಡಿ ಪಡೆಯಲು ಹರಸಾಹಸ ಮಾಡಬೇಕಾಗಿದೆ.

ಮಕ್ಕಳಿಗೆ ಬೇಸಿಗೆ ರಜೆ ಇರುವುದರಿಂದ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.
ಮಾಣಿಕ್ಯ ಎನ್., ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮಾರ್ಚ್‌ನಲ್ಲಿ 5.48 ಲಕ್ಷ ಜನರು ಭೇಟಿ ನೀಡಿದ್ದರೆ, ಏಪ್ರಿಲ್‌ನಲ್ಲಿ 6.62 ಲಕ್ಷ ಭಕ್ತರು, ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಮಾರ್ಚ್‌ನಲ್ಲಿ 4.86 ಲಕ್ಷ ಜನರು, ಏಪ್ರಿಲ್‌ನಲ್ಲಿ 5.25 ಲಕ್ಷ ಪ್ರವಾಸಿಗರು, ಕಟೀಲು ದುರ್ಗಾಪರಮೇಶ್ವರಿ ದೇಗುಲಕ್ಕೆ ಮಾರ್ಚ್‌ನಲ್ಲಿ 3.11 ಲಕ್ಷ ಜನರು, ಏಪ್ರಿಲ್‌ನಲ್ಲಿ 5.12 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ.

‘ಮಂಗಳೂರು ಶಿಕ್ಷಣ ಮತ್ತು ವೈದ್ಯಕೀಯ ವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಇಲ್ಲಿ ಮಕ್ಕಳನ್ನು ಕಾಲೇಜಿಗೆ ಸೇರಿಸುವ ಪಾಲಕರು ವಾರಾಂತ್ಯಕ್ಕೆ ಮಕ್ಕಳ ಜತೆ ಸಮಯ ಕಳೆಯಲು ಹೋಂ ಸ್ಟೇಗಳಿಗೆ ಬರುತ್ತಾರೆ. ಫಿಸಿಯೊಥೆರಪಿ, ಮತ್ತಿತರ ದೀರ್ಘಕಾಲೀನ ಕಾಯಿಲೆಗಳಿಗೆ ಚಿಕಿತ್ಸೆಗಾಗಿ ಬರುವವರ ಕುಟುಂಬದವರು ಕಡಲ ತೀರದ ವಸತಿ ಗೃಹಗಳು, ಹೋಂ ಸ್ಟೇಗಳನ್ನು ನೆಚ್ಚಿಕೊಳ್ಳುತ್ತಾರೆ. ಮೀನೂಟ ಪ್ರಿಯರು, ಕರಾವಳಿಯ ಆಹಾರ ವೈವಿಧ್ಯವನ್ನು ಬಹಳಷ್ಟು ಜನರು ಇಷ್ಟಪಡುತ್ತಾರೆ. ಹೀಗಾಗಿ, ಹೋಂ ಸ್ಟೇಗಳಿಗೆ ಗ್ರಾಹಕರ ಕೊರತೆಯಿಲ್ಲ’ ಎನ್ನುತ್ತಾರೆ ಹೋಂ ಸ್ಟೇ ಮಾಲೀಕರೊಬ್ಬರು.

‘2022ರಲ್ಲಿ ಮಾರ್ಚ್‌, ಏಪ್ರಿಲ್‌ ತಿಂಗಳುಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಹೋಟೆಲ್ ಬುಕಿಂಗ್‌ಗಳು ಇದ್ದವು. ಈ ಬಾರಿಯೂ ಏಪ್ರಿಲ್‌, ಮೇ ತಿಂಗಳುಗಳು ಆಶಾಭಾವ ಮೂಡಿಸಿವೆ’ ಎಂದು ಮಂಗಳೂರಿನ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

‘ದೇವಾಲಯಗಳಿಗೆ ಬಂದ ಪ್ರವಾಸಿಗರು, ತಣ್ಣೀರು ಬಾವಿ, ಪಣಂಬೂರು, ಸುರತ್ಕಲ್ ಕಡಲ ತೀರಗಳಿಗೆ ಭೇಟಿ ನೀಡಿ, ಅಲೆಯ ಸೊಬಗನ್ನು ಆನಂದಿಸುತ್ತಾರೆ. ನಿತ್ಯವೂ ಕಡಲ ತೀರಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಕಯಾಕಿಂಗ್, ಸರ್ಫಿಂಗ್‌ನಂತಹ ವಾಟರ್ ಗೇಮ್ಸ್‌ಗಳಿಗಾಗಿಯೇ ಬರುವವರೂ ಇದ್ದಾರೆ’ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲೆಯ ಉಪನಿರ್ದೇಶಕ ಮಾಣಿಕ್ಯ ಎನ್.

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಜನದಟ್ಟಣೆ
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಜನದಟ್ಟಣೆ
ಉಡುಪಿಯ ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಒಂಟೆ ಸವಾರಿ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಉಡುಪಿಯ ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಒಂಟೆ ಸವಾರಿ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್

ಜಿಲ್ಲೆಗೆ ಭೇಟಿ ನೀಡಿದ ಪ್ರವಾಸಿಗರು

ತಿಂಗಳು: ಪ್ರವಾಸಿಗರ ಸಂಖ್ಯೆ : ವಿದೇಶಿ ಪ್ರವಾಸಿಗರು

ಜನವರಿ : 20,810,40 : 6,40

ಫೆಬ್ರುವರಿ : 20,756,39 : 000

ಮಾರ್ಚ್‌: 21,528,88 : 5,87

ಏಪ್ರಿಲ್ : 26,92,815: 79

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT