ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾರ್ವಜನಿಕ ಗಣೇಶೋತ್ಸವಕ್ಕೆ ಅನವಶ್ಯಕ ನಿಯಮ: ಶಾಸಕ ವೇದವ್ಯಾಸ ಕಾಮತ್ ಆರೋಪ

Published : 5 ಸೆಪ್ಟೆಂಬರ್ 2024, 4:27 IST
Last Updated : 5 ಸೆಪ್ಟೆಂಬರ್ 2024, 4:27 IST
ಫಾಲೋ ಮಾಡಿ
Comments

ಮಂಗಳೂರು: ‘ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ಕೋರಿದ ಆಯೋಜಕರಿಂದ ಅನವಶ್ಯಕ ಮಾಹಿತಿಗಳನ್ನು ಕೇಳುವ ಮೂಲಕ ಅವರನ್ನು ಸತಾಯಿಸಲಾಗುತ್ತಿದೆ’ ಎಂದು ಶಾಸಕ ಡಿ.ವೇದವ್ಯಾಸ ಕಾಮತ್‌ ಆರೋಪಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಕಾರ್ಯಕ್ರಮಲ್ಲಿ ಭಾಗವಹಿಸುವ  ಅತಿಥಿಗಳ, ಹೆಸರು, ಮೊಬೈಲ್ ಸಂಖ್ಯೆ, ವಿಳಾಸ ನೀಡಬೇಕು. ಟ್ಯಾಬ್ಲೊ ತಂಡದ ವಿವರ, ಅದನ್ನು ಯಾವ ವಾಹನದಲ್ಲಿ ಒಯ್ಯಲಾಗುತ್ತದೆ ಎಂಬ ದಾಖಲೆ ಹಾಗೂ ವಾಹನದ ಪರವಾನಗಿಯ ಪ್ರತಿಯನ್ನು ನೀಡಬೇಕು ಎಂದು ಪೊಲೀಸರು ಕೇಳುತ್ತಿದ್ದಾರೆ. ಅರ್ಥವಿಲ್ಲದ ಈ ನಿಯಮಗಳ  ಸಾರ್ವಜನಿಕ ಗಣೇಶೋತ್ಸವ ಆಯೋಜಕರಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ಹಿಂದೂ ಹಬ್ಬಗಳ ಮೇಲೆ ಏಕಿಷ್ಟು ಕೋಪವೋ ತಿಳಿಯದು. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಸರ್ಕಾರ ಬೆಲೆ ನೀಡಿ ಈ ನಿಯಮಗಳನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದರು.

‘ನಗರದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಧಿಡೀರ್ ಬದಲಾವಣೆ ಮಾಡಲಾಗಿದೆ. ಸ್ಟೇಟ್ ಬ್ಯಾಂಕ್‌ನಿಂದ ಹೊರಡುವ ಬಸ್‌ಗಳನ್ನು ಹಂಪನಕಟ್ಟೆವರೆಗೆ ಎಲ್ಲಿಯೂ ನಿಲ್ಲಿಸುವುದಕ್ಕೆ ಅವಕಾಶ ಇಲ್ಲ. ಲೇಡಿಗೋಷನ್ ಆಸ್ಪತ್ರೆ ಬಳಿಯ ಪ್ರಯಾಣಿಕರ ತಂಗುದಾಣ  ಉಪಯೋಗಕ್ಕಿಲ್ಲದಂತಾಗಿದೆ. ಇಲ್ಲಿ  ಪ್ರಯಾಣಿಕರು ಅಪಾಯ ಲೆಕ್ಕಿಸದೇ ಧಾವಂತದಲ್ಲಿ ಬಸ್ ಹತ್ತುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಮಣಿದು ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ಮೌಖಿಕ ಆದೇಶವೇ ಈ ಮಾರ್ಪಾಡುಗಳಿಗೆ ಕಾರಣ. ಈ ಬದಲಾವಣೆಗೆ ಮುನ್ನ ಜನಪ್ರತಿನಿಧಿಗಳ ಅಭಿಪ್ರಾಯ ಪಡೆಯುವ ಸೌಜನ್ಯವನ್ನೂ ತೋರಿಲ್ಲ’ ಎಂದರು.

‘ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಎದುರಿದ್ದ ಪ್ರಯಾಣಿಕರ ತಂಗುದಾಣವನ್ನು   ಅಂಗಡಿ ವ್ಯಾಪಾರಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ರಾತೋರಾತ್ರಿ ತೆರವುಗೊಳಿಸಲಾಗಿದೆ.  ಇದರಿಂದಾಗಿ ವಿದ್ಯಾರ್ಥಿಗಳು, ವೆನ್ಲಾಕ್ ಆಸ್ಪತ್ರೆಗೆ ಬರುವವರು ಸೇರಿದಂತೆ ನೂರಾರು ಮಂದಿಗೆ  ಸಮಸ್ಯೆಯಾಗಿದೆ. ಈ ಪ್ರಯಾಣಿಕರ ತಂಗುದಾಣವನ್ನು ಮರುಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.

‘ನಗರದಲ್ಲಿ ವಾಹನ ದಟ್ಟಣೆ ಸಮಸ್ಯೆ ಮಿತಿ ಮೀರಿದೆ. ಅದನ್ನು ಬಗೆಹರಿಸಲು  ಉಸ್ತುವಾರಿ ಸಚಿವರು, ಜಿಲ್ಲಾಡಳಿತ, ಪೊಲೀಸ್‌ ಇಲಾಖೆ, ಜನಪ್ರತಿನಿಧಿಗಳು ಹಾಗೂ ಸ್ಥಳೀಯರು ಒಟ್ಟಾಗಿ ಚರ್ಚಿಸಿ ಕ್ರಮವಹಿಸಬೇಕು’ ಎಂದರು.

‘ಸ್ವಯಂಘೋಷಿತ ಆಸ್ತಿ ತೆರಿಗೆ ಹೆಚ್ಚಳವು ಬಿಜೆಪಿ ಆಡಳಿತದ ಪಾಲಿಕೆ ಕುರಿತು  ನಕಾರಾತ್ಮಕ ಭಾವನೆ ಮೂಡಿಸುವ ಪ್ರಯತ್ನ. ಈ ಕುರಿತ ಆದೇಶವನ್ನು ಸರ್ಕಾರ ಹಿಂಪಡೆಯಬೇಕು’ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ನಗರದ ದಕ್ಷಿಣ ಮಂಡಲದ ಬಿಜೆಪಿ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೇಶ್, ಬಿಜೆಪಿ ಜಿಲ್ಲಾ ಘಟಕದ ಖಜಾಂಚಿ ಸಂಜಯ್ ಪ್ರಭು, ಪ್ರಮುಖರಾದ ರವಿಶಂಕರ್ ಮಿಜಾರ್, ನಿತಿನ್ ಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT