ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಪ್ಪಿನಂಗಡಿ: ನದಿ ತಟದಲ್ಲಿದೆ ಶಿಥಿಲ ದೋಣಿ

Published 29 ಮೇ 2024, 5:57 IST
Last Updated 29 ಮೇ 2024, 5:57 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ನೇತ್ರಾವತಿ ಹಾಗೂ ಕುಮಾರಧಾರ ನದಿಗಳ ಸಂಗಮ ಕ್ಷೇತ್ರವಾಗಿರುವ ಉಪ್ಪಿನಂಗಡಿಯು ನೆರೆ ಪೀಡಿತ ಪ್ರದೇಶವಾಗಿರುವುದರಿಂದ ರಕ್ಷಣೆಗಾಗಿ ದೋಣಿಯ ವ್ಯವಸ್ಥೆ ಕಲ್ಪಿಸಬೇಕು ಎಂಬ ಹಲವು ವರ್ಷಗಳ ಬೇಡಿಕೆಗೆ ಅನುಗುಣವಾಗಿ 2014ರಲ್ಲಿ ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ಪ್ರಾಕೃತಿಕ ವಿಕೋಪ ನಿರ್ವಹಣಾ ಪ್ರಾಧಿಕಾರವು ನೇತ್ರಾವತಿ ನದಿ ತಟದ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿ ವ್ಯವಸ್ಥೆ ಮಾಡಿದ್ದ ದೋಣಿಯೊಂದು ಶಿಥಿಲಾವಸ್ಥೆಯಲ್ಲಿದೆ.

ನೆರೆ, ಪ್ರವಾಹ ಸಂದರ್ಭದಲ್ಲಿ ರಕ್ಷಣೆಗಾಗಿ ಕೆಲವು ಸಮಯ ಬಳಕೆಯಾಗಿದ್ದ ಈ ದೋಣಿಯ ಅಸಮರ್ಪಕ ನಿರ್ವಹಣೆಯಿಂದ ಶಿಥಿಲಗೊಂಡಿದೆ. ಮರ ಮತ್ತು ಫೈಬರ್‌ನಿಂದ ನಿರ್ಮಿಸಿರುವ ಈ ದೋಣಿಗೆ ಸೀಮೆ ಎಣ್ಣೆ ಚಾಲಿತ ಒಬಿಎಂ ಯಂತ್ರ ಅಳವಡಿಸಲಾಗಿದೆ.

2014ರಲ್ಲಿ ತಂದಿರಿಸಿದ ಈ ದೋಣಿಗೆ ಎರಡು ವರ್ಷ ಅಂಬಿಗನ ವ್ಯವಸ್ಥೆ ಮಾಡಿರಲಿಲ್ಲ. 2016ರಿಂದ ಗೃಹ ರಕ್ಷಕ ದಳದವರನ್ನೊಳಗೊಂಡ ಪ್ರಾಕೃತಿಕ ವಿಕೋಪ ತಂಡ ರಚನೆ ಬಳಿಕ ಅಂಬಿಗನ ನೇಮಕ ಮಾಡಲಾಯಿತು. 2018ರಲ್ಲಿ ಒಬಿಎಂ ಯಂತ್ರವೂ ದುರಸ್ತಿಗೆ ಬಂತು. ಆಗ ಗೃಹ ರಕ್ಷಕ ಇಲಾಖೆಯವರು ದುರಸ್ತಿ ಮಾಡಿಸಿದ್ದರು. ಬಳಿಕ ಮಾರುಕಟ್ಟೆಯಲ್ಲಿ ಸೀಮೆಎಣ್ಣೆಯ ಸಿಗದೆ ಇದ್ದಾಗ ದೋಣಿ ಉಪಯೋಗಿಸದಂತಾಯಿತು. 2020ರಲ್ಲಿ ಅದರ ಒಂದೊಂದು ಭಾಗಗಳು ಕಳಚಿಕೊಳ್ಳಲಾಂಭಿಸಿತು. ಈಗ ಸಂಪೂರ್ಣವಾಗಿ ಶಿಥಿಲವಾಗಿದೆ.

ಕಂದಾಯ ಇಲಾಖೆಯ ನಿರ್ಲಕ್ಷ್ಯ: ದ.ಕ. ಜಿಲ್ಲಾಡಳಿತ ಈ ದೋಣಿಯನ್ನು ಇಲ್ಲಿಗೆ ಒದಗಿಸಿದ ಬಳಿಕ ಅದನ್ನು ಯಾವುದೇ ಇಲಾಖೆಯ ಸುಪರ್ದಿಗೆ ಒಪ್ಪಿಸಿರಲಿಲ್ಲ. ಅದರ ನಿರ್ವಹಣೆಗೆ ಒತ್ತು ನೀಡಿರಲಿಲ್ಲ. ಇದಕ್ಕೆ ಇಲಾಖೆ ಅಂಬಿಗನನ್ನು ನೇಮಿಸಿದ್ದರೂ, ಅವರಿಗೆ ಮಳೆಗಾಲದಲ್ಲಿ ವರ್ಷದ ಮೂರು ತಿಂಗಳು ಮಾತ್ರ ಕೆಲಸ. ಬಳಕೆಯಲ್ಲಿದ್ದಾಗ ಅವರು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿದ್ದರು. ಅವರ ನಿಧನಾನಣತರ ಗೃಹ ರಕ್ಷಕ ದಳದವರನ್ನೊಳಗೊಂಡ ಪ್ರಾಕೃತಿಕ ವಿಕೋಪ ತಂಡ ಈ ಕೆಲಸ ಮಾಡುತ್ತಿದ್ದರು. ಮಳೆಗಾಲದಲ್ಲಿ ಮಾತ್ರ ಕೆಲಸ ಇದ್ದ ಕಾರಣ ಬಳಿಕ ಯಾರೂ ನಿರ್ವಹಣೆ ಮಾಡಿಲ್ಲ.

ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಮಾಡಿ ಖರೀದಿಸಲಾದ ಈ ದೋಣಿಯಲ್ಲಿ ಮಳೆ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿವೆ. ಕಂದಾಯ ಇಲಾಖೆಯವರು ಈ ಬಾರಿಯಾದರೂ ದೋಣಿಯನ್ನು ವಿಲೇವಾರಿ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT