ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೇದವ್ಯಾಸ ಕಾಮತ್‌ ವರ್ತನೆಯಿಂದ ಶಾಸಕ ಸ್ಥಾನದ ಘನತೆಗೆ ಧಕ್ಕೆ: ಐವನ್‌ ಡಿಸೋಜ

Published : 14 ಫೆಬ್ರುವರಿ 2024, 14:32 IST
Last Updated : 14 ಫೆಬ್ರುವರಿ 2024, 14:32 IST
ಫಾಲೋ ಮಾಡಿ
Comments

ಮಂಗಳೂರು: ‘ನಗರದ ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಧರ್ಮ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾದ ಪ್ರಕರಣದಲ್ಲಿ ಶಾಸಕ ವೇದವ್ಯಾಸ ಕಾಮತ್‌ ತಮ್ಮ ಸ್ಥಾನದ ಘನತೆಗೆ ಚ್ಯುತಿ ಉಂಟಾಗುವಂತೆ ನಡೆದುಕೊಂಡಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ ಆಗ್ರಹಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಈ ಘಟನೆ ಬಗ್ಗೆ ವಿಧಾನಸಭೆಯ ಹಕ್ಕುಬಾಧ್ಯತಾ ಸಮಿತಿಯಿಂದ ತನಿಖೆ ನಡೆಸಿ ಕಾಮತ್‌ ಅವರನ್ನು ಅನರ್ಹಗೊಳಿಸುವಂತೆ ವಿಧಾನಸಭಾಧ್ಯಕ್ಷರಿಗೆ ದೂರು ನೀಡುತ್ತೇವೆ. ಧಾರ್ಮಿಕ ಉದ್ದೇಶಕ್ಕಾಗಿ ಮಕ್ಕಳನ್ನು ಎತ್ತಿಕಟ್ಟಿದ ಅವರ ವಿರುದ್ಧ ಮಕ್ಕಳ ಹಕ್ಕುಗಳ ಆಯೋಗಕ್ಕೆ ಹಾಗೂ ಮಾನವ ಹಕ್ಕು ಆಯೋಗಕ್ಕೆ ಹಾಗೂ ಮುಖ್ಯಮಂತ್ರಿಗೆ ದೂರು ನೀಡುತ್ತೇವೆ. ಶಾಸಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಿದ್ದೇವೆ. ಅವರ ಶಾಸಕತ್ವ ರದ್ದಾಗುವವರೆಗೆ ಹೋರಾಟ ನಡೆಸಲಿದ್ದೇವೆ’ ಎಂದರು.

‘ಚುನಾಯಿತ ಜನಪ್ರತಿನಿಧಿಯಾಗಿರುವ ಕಾಮತ್‌, ಶಾಲೆಯ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕಿತ್ತು. ಮಕ್ಕಳನ್ನು ಬೀದಿಯಲ್ಲಿ ನಿಲ್ಲಿಸಿ ಗಲಾಟೆ ಮಾಡಿಸಿ, ಶಾಲಾ ಶಿಕ್ಷಕ ವರ್ಗದವರನ್ನು ಬೆದರಿಸಿದ್ದಾರೆ. ಅವಹೇಳನಕಾರಿಯಾಗಿ ಮಾತನಾಡಿ ಧರ್ಮಗಳ ಮಧ್ಯೆ ಕಂದಕ ಸೃಷ್ಟಿಸಿದ್ದಾರೆ. ಅಪ್ರಾಪ್ತ ವಿದ್ಯಾರ್ಥಿಗಳನ್ನು ಕರೆಯಿಸಿ, ಜೈಕಾರ ಹಾಕುವಂತೆ ಪ್ರಚೋದಿಸಿ ಮಕ್ಕಳ ಹಕ್ಕುಗಳ ಕಾಯ್ದೆ, ಮಾನವ ಹಕ್ಕುಗಳ ಕಾಯ್ದೆ ಉಲ್ಲಂಘಿಸಿದ್ದಾರೆ. ಅವರಿಗೆ ಶಾಸಕರಾಗಿ ಮುಂದುವರಿಯುವ ಅರ್ಹತೆ ಇಲ್ಲ’ ಎಂದು ಆರೋಪಿಸಿದರು.

‘ಕ್ರೈಸ್ತ ಶಾಲೆಗಳನ್ನು ಬಹಿಷ್ಕರಿಸುವಂತೆ ಶಾಸಕ ಭರತ್ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಶಾಲೆಯಲ್ಲಿ ಕಲಿಸುವ ಭಗಿನಿಯರು ಮನೆ ಮಠ ತೊರೆದು ಸಮಾಜಸೇವೆಗೆ ತಮ್ಮನ್ನು ಅರ್ಪಿಸಿಕೊಂಡವರು. 60 ವರ್ಷಗಳಲ್ಲಿ ಈ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಲಿತಿದ್ದಾರೆ. ಶಿಕ್ಷಕಿ ತಪ್ಪೆಸಗಿದ್ದರೆ ತನಿಖೆ ನಡೆಸಿ ಅವರ ವಿರುದ್ಧ ಕ್ರಮಕೈಗೊಳ್ಳಿ. ಆದರೆ ಎಲ್ಲ ಶಿಕ್ಷಕ ವರ್ಗದವರ ಮಾನಹಾನಿ ಮಾಡಿರುವುದು ಅಕ್ಷಮ್ಯ’ ಎಂದರು.

ಮಾಜಿ ಶಾಸಕ ಜೆ.ಆರ್.ಲೋಬೊ, ‘ಶಾಲೆಗೆ ಭೇಟಿ ನೀಡಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಒತ್ತಡ ಹಾಕಿ, ಅವರೇ ಆದೇಶವನ್ನು ಟೈಪ್‌ ಮಾಡಿಸಿಕೊಟ್ಟು ಪ್ರಾಂಶುಪಾಲರಿಂದ ಸಹಿ ಹಾಕಿಸಿದ್ದಾರೆ. ಈ ಕುರಿತು ತನಿಖೆ ಆಗಬೇಕು. ತನಿಖೆ ನಡೆಸುವ ಮುನ್ನವೇ ಶಿಕ್ಷಕಿಯನ್ನು ವಜಾ ಮಾಡುವ ಅವಶ್ಯಕತೆ ಏನಿತ್ತು’ ಎಂದು ಪ್ರಶ್ನಿಸಿದರು. ‌

‘ಶಾಲೆಯಲ್ಲಿ ಎಲ್ಲ ಧರ್ಮದವರಿಗೂ ಸಮಾನ ಶಿಕ್ಷಣ ನೀಡಲಾಗುತ್ತದೆ. ಕ್ರೈಸ್ತರು ನಡೆಸುವ ಶಾಲೆಗಳನ್ನು ಬಹಿಷ್ಕರಿಸುವಂತೆ ಕರೆ ಕೊಡಲು ಭರತ್‌ ಶೆಟ್ಟಿ ಯಾರು. ಮಂಗಳೂರಿನಲ್ಲಿ ಮೊದಲ ಸಲ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಆರಂಭಿಸಿದ್ದು ಸೇಂಟ್‌ ಜೆರೋಸಾ ಶಾಲೆ. ಆ ಶಾಲೆಯ ಕೊಡುಗೆ ಬಗ್ಗೆ ನಿನ್ನೆ ಮೊನ್ನೆ ಹುಟ್ಟಿದ ಇವರಿಗೇನು ಗೊತ್ತು’ ಎಂದರು.

ಕೆಪಿಸಿಸಿ ಉಪಾಧ್ಯಕ್ಷ ಪಿ.ವಿ. ಮೋಹನ್‌, ‘ವೇದವ್ಯಾಸ ಕಾಮತ್‌ ಅವರು ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ಯಾವ ರೀತಿ ನಡೆದುಕೊಂಡಿದ್ದಾರೆ, ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಏನು ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಮಂಗಳೂರಿನಲ್ಲಿ ಜನಪ್ರತಿನಿಧಿಗಳಾಗಿದ್ದ ಬಿಜೆಪಿಯ ಎನ್‌.ಯೋಗೀಶ್‌ ಭಟ್‌, ವಿ.ನಂಜಯ ಕುಮಾರ್‌ ಯಾವತ್ತೂ ಈ ರೀತಿ ವರ್ತಿಸಿರಲಿಲ್ಲ’ ಎಂದರು.

ಕಾಂಗ್ರೆಸ್‌ ಮುಖಂಡರಾದ ಇಬ್ರಾಹಿಂ ಕೋಡಿಜಾಲ್‌, ಎಂ.ಜಿ. ಹೆಗಡೆ, ಗಣೇಶ್ ಪೂಜಾರಿ, ಯು.ಟಿ.ಫರ್ಜಾನಾ, ಸಲೀಂ, ಸದಾಶಿವ ಉಳ್ಳಾಲ್‌, ಅಪ್ಪಿ, ಪಾಲಿಕೆ ಸದಸ್ಯ ಎ.ಸಿ. ವಿನಯರಾಜ್‌, ನವೀನ್‌ ಡಿಸೋಜ, ಶುಭೋದಯ ಆಳ್ವ, ಭಾಸ್ಕರ್ ಜೆ.ಅಬ್ದುಲ್ ಸಲೀಂ, ಮತ್ತಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT