ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರದಿಂದ ಹಿಂದೂ ವಿರೋಧಿ ಧೋರಣೆ: ಆರೋಪ

ವಿಎಚ್‌ಪಿ ದಕ್ಷಿಣ ಪ್ರಾಂತದ ಸಭೆಯಲ್ಲಿ ಖಂಡನಾ ನಿರ್ಣಯ
Published 11 ಮಾರ್ಚ್ 2024, 5:50 IST
Last Updated 11 ಮಾರ್ಚ್ 2024, 5:50 IST
ಅಕ್ಷರ ಗಾತ್ರ

ಮಂಗಳೂರು: ‘ತಾನು ಅಲ್ಪಸಂಖ್ಯಾತರ ಪರ ಎಂಬುದನ್ನು ಹೆಜ್ಜೆ ಹೆಜ್ಜೆಗೂ ತೋರಿಸಿಕೊಡುವ ಮೂಲಕ ರಾಜ್ಯ ಸರ್ಕಾರವು ಹಿಂದೂ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ’ ಎಂದು ಆರೋಪಿಸಿರುವ ವಿಶ್ವ ಹಿಂದೂ ಪರಿಷತ್‌ (ವಿಹಿಂಪ), ಇದನ್ನು ಖಂಡಿಸುವ ನಿರ್ಣಯವನ್ನು ಇಲ್ಲಿ ನಡೆದ ದಕ್ಷಿಣ ಪ್ರಾಂತದ ಸಭೆಯಲ್ಲಿ ಭಾನುವಾರ ಕೈಗೊಂಡಿದೆ.

ಎರಡು ದಿನಗಳ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿಹಿಂಪ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್‌, ‘ಇಲ್ಲಿನ ಜೆರೋಸಾ ಶಾಲೆಯಲ್ಲಿ ಹಿಂದೂ ದೇವರಿಗೆ, ಹಿಂದೂ ಧರ್ಮಕ್ಕೆ ಅಪಮಾನ ಮಾಡಿದ ಶಿಕ್ಷಕಿಯನ್ನು ಬಂಧಿಸದೇ, ನ್ಯಾಯದ ಪರ ಇದ್ದ ಶಾಸಕರ ವಿರುದ್ಧ ಹಾಗೂ ಪ್ರತಿಭಟನೆ ನಡೆದ ಸ್ಥಳದಲ್ಲೇ ಇಲ್ಲದ ಇನ್ನೊಬ್ಬ ಶಾಸಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದು ಸರಿಯೇ’ ಎಂದು ಪ್ರಶ್ನಿಸಿದರು.

‘ಅಲ್ಪಸಂಖ್ಯಾತರಿಗೆ ಬಜೆಟ್‌ನಲ್ಲಿ ₹ 10 ಸಾವಿರ ಕೋಟಿ ರೂಪಾಯಿ ಮೀಸಲಿಡುತ್ತೇವೆ ಎಂದು ಹೇಳಿ ಹಿಂದೂ ಹಾಗೂ  ಅಲ್ಪಸಂಖ್ಯಾತರ ನಡುವೆ ವೈಮನಸ್ಸು ಮೂಡಿಸಲಾಗುತ್ತಿದೆ. ರಂಜಾನ್‌ಗೆ ಮುಸ್ಲಿಂ ವಿದ್ಯಾರ್ಥಿಗಳಿಗೆ ಬೇರೆಯೇ ನಿಯಮ ರೂಪಿಸುವ ಮೂಲಕ ಬೆಳೆಯುವ ಮಕ್ಕಳಲ್ಲೂ ಪ್ರತ್ಯೇಕತೆಯ ವಿಷ ಬೀಜ ಬಿತ್ತಲಾಗಿದೆ. ಸರ್ಕಾರದ ಇಂತಹ ತುಷ್ಟಿಕರಣ ನೀತಿಯಿಂದಾಗಿಯೇ ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗುವ ಹಾಗೂ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಆರೋಪಿಸಿದರು.

‘ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಪಶುಸಂಗೋಪನಾ ಇಲಾಖೆಯ 2 ಎಕರೆ ಜಾಗವನ್ನು ಅಲ್ಪಸಂಖ್ಯಾತರ ಇಲಾಖೆಗೆ ಹಸ್ತಾಂತರಿಸಬಾರದು. ಪರಿಶಿಷ್ಟ ಸಮುದಾಯಗಳಿಗೆ ಮೀಸಲಿಟ್ಟ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಬಾರದು ಎಂಬ ನಿರ್ಣಯವನ್ನೂ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.  

‘2024ರ ಧಾರ್ಮಿಕ ಮತ್ತು ದತ್ತಿ ತಿದ್ದುಪಡಿ ಮಸೂದೆಯ ಪ್ರಕಾರ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರನ್ನು ಸರ್ಕಾರವೇ ನೇಮಿಸಲಿದೆ. ಈ ಹಸ್ತಕ್ಷೇಪ ಕೈಬಿಟ್ಟು ವ್ಯವಸ್ಥಾಪನಾ ಸಮಿತಿಯೇ ಅಧ್ಯಕ್ಷರನ್ನು ಆಯ್ಕೆ ಮಾಡುವ ವಿಧಾನ ಮುಂದುವರಿಸಬೇಕು. ದೇವಸ್ಥಾನಗಳ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಹೊಣೆ. ಅದಕ್ಕಾಗಿ ದೇವಸ್ಥಾನದ ಹಣ ಬಳಸಬಾರದು. ದೇವಸ್ಥಾನದ ಆಸ್ತಿ ಅನ್ಯ ಉದ್ದೇಶ‌ಕ್ಕೆ ಉಪಯೋಗಿಸಬಾರದು’ ಎಂದು ಒತ್ತಾಯಿಸಿದರು.

ವಿಎಚ್‌ಪಿಯ ಕೇಂದ್ರೀಯ  ಸಮಿತಿಯ ಸಹಪ್ರಧಾನ ಕಾರ್ಯದರ್ಶಿ ಸ್ಥಾನು ಮಲಯನ್‌, ಪ್ರಾಂತ ಸಹಕಾರ್ಯದರ್ಶಿಗಳಾದ ಶರಣ್‌ ಪಂಪ್‌ವೆಲ್‌ ಹಾಗೂ ಸುರೇಶ್ ಬಿ.ಇ ಇದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT