ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಟ್ಲ: ಬೇಸಿಗೆ ಎದುರಿಸಲು ಪ.ಪಂ. ಸಜ್ಜು

ಒಡೆದ ಪೈಪ್‌ಗಳು, ಅಸಮರ್ಪಕ ನೀರು ಪೂರೈಕೆ: ಸಾರ್ವಜನಿಕರ ಆಕ್ಷೇಪ
ಸಂಧ್ಯಾ ಹೆಗಡೆ
Published 16 ಫೆಬ್ರುವರಿ 2024, 5:34 IST
Last Updated 16 ಫೆಬ್ರುವರಿ 2024, 5:34 IST
ಅಕ್ಷರ ಗಾತ್ರ

ವಿಟ್ಲ: ಕಳೆದ ವರ್ಷ ಬೇಸಿಗೆಯಲ್ಲಿ ಜಲಕ್ಷಾಮ ಎದುರಿಸಿದ್ದ ವಿಟ್ಲ ಪಟ್ಟಣ ಪಂಚಾಯಿತಿಯು ಈ ಬಾರಿ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸಲು ಸಿದ್ಧತೆ ಮಾಡಿಕೊಂಡಿದೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 18 ವಾರ್ಡ್‌ಗಳಿದ್ದು, ಕಳೆದ ವರ್ಷ ಮಾರ್ಚ್‌ 27ರಿಂದ ಜೂನ್‌ ತಿಂಗಳವರೆಗೆ 16 ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿತ್ತು. ಪ್ರತಿದಿನ 3,000 ಲೀಟರ್ ಸಾಮರ್ಥ್ಯದ ಎರಡು ಪಿಕಪ್ ವಾಹನಗಳಲ್ಲಿ ವಾರ್ಡ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿತ್ತು. 1,000ಕ್ಕೂ ಹೆಚ್ಚು ಟ್ರಿಪ್ ನೀರು ನೀಡಲಾಗಿದೆ. ಹೀಗಾಗಿ, ಈ ಬಾರಿ ಮುನ್ನೆಚ್ಚರಿಕೆವಹಿಸಿ, ಜಲಮೂಲಗಳನ್ನು ಭದ್ರಗೊಳಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

60 ಕೊಳವೆಬಾವಿಗಳು, 20 ತೆರೆದ ಬಾವಿಗಳನ್ನು ಬಳಸಿ ಪಟ್ಟಣಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ. ಈ ವರ್ಷ ಹೊಸದಾಗಿ ಸೇರಾಜೆ, ನೆಲ್ಲಿಗುಡ್ಡೆಯಲ್ಲಿ ಎರಡು ಕೊಳವೆಬಾವಿ ಕೊರೆಯಲಾಗಿದೆ. ಕೆಲವು ದಿನಗಳ ಹಿಂದೆ ಮಳೆಯಾದ ಕಾರಣ ಈ ಬಾರಿ ಮಾರ್ಚ್‌ವರೆಗೆ ನೀರಿನ ಸಮಸ್ಯೆ ಬರಲಾರದು. ಬಹುತೇಕ ಮನೆಗಳಲ್ಲಿ ತೆರೆದಬಾವಿ ಇದೆ. ಮನೆಗಳ ಬಾವಿ ನೀರು ಬತ್ತಿ ಹೋದರೆ, ಪಟ್ಟಣ ಪಂಚಾಯಿತಿಯಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಮುಖ್ಯಾಧಿಕಾರಿ ಗೋಪಾಲ ನಾಯ್ಕ ತಿಳಿಸಿದರು.

ನೀರಿನ ಸಮಸ್ಯೆ ಎದುರಾಗಬಹುದಾದ ಸ್ಥಳಗಳ ಪಟ್ಟಿ ಮಾಡಲಾಗಿದೆ. ಮೇಗಿನಪೇಟೆ, ಒಕ್ಕುಡ ದರ್ಭೆ, ಸೇರಾಜೆ, ಸೀಗೆಬಲ್ಲೆ, ವಿಟ್ಲ ಪೇಟೆ ಇವಿಷ್ಟು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದರೆ, ಟ್ಯಾಂಕರ್ ಮೂಲಕ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಕಟ್ಟಗಳು ಜಲ ತಿಜೋರಿ ಇದ್ದಂತೆ. ಹಳ್ಳ, ತೊರೆಗಳಿಗೆ ಕಟ್ಟ ನಿರ್ಮಿಸಿದರೆ, ಬೇಸಿಗೆಯಲ್ಲಿ ಕೃಷಿಭೂಮಿ, ಸುತ್ತಲಿನ ಬಾವಿಗಳಿಗೆ ನೀರಿನ ಸಮಸ್ಯೆಯಾಗುವುದಿಲ್ಲ. ಪಟ್ಟಣದ ಸುತ್ತಮುತ್ತ ಕಲ್ಲಕಟ್ಟ, ಕೂಟೇಲು, ವಕ್ಕೆತ್ತೂರು, ಬಳಂತಿಮೊಗರು ಸೇರಿ ಒಟ್ಟು ನಾಲ್ಕು ಕಡೆಗಳಲ್ಲಿ ಕಟ್ಟ ನಿರ್ಮಿಸಲಾಗಿದೆ. ಎರಡು ಕಡೆಗಳಲ್ಲಿ ಜಲಮಂಡಳಿ ನೆರವಾದರೆ, ಇನ್ನೆರಡು ಕಡೆಗಳಲ್ಲಿ ರೈತರೇ ನಿರ್ಮಿಸಿದ್ದಾರೆ ಎಂದು ಅವರು ವಿವರಿಸಿದರು.

ಪಟ್ಟಣದಲ್ಲಿ ರಸ್ತೆ ಕೆಲಸ, ಕೇಬಲ್‌ ಕಾಮಗಾರಿ ವೇಳೆ ನೀರಿನ ಪೈಪ್‌ಲೈನ್ ತುಂಡಾಗಿದ್ದು, ಅದರ ದುರಸ್ತಿ ಸರಿಯಾಗಿಲ್ಲ. ಹೀಗಾಗಿ, ಅನೇಕ ಮನೆಗಳಿಗೆ ಪಂಚಾಯಿತಿ ನೀರು ಸಿಗುತ್ತಿಲ್ಲ ಎಂದು ಮೇಗಿನಪೇಟೆಯ ಆಯೇಷಾ ಹೇಳಿದರು.

ಬೇಸಿಗೆಯಲ್ಲಿ ನೀರು ಇರುವುದಿಲ್ಲ. ಈಗ ನೀರಿನ ಸಂಗ್ರಹ ಇದ್ದರೂ ಪಟ್ಟಣ ಪಂಚಾಯಿತಿಯಿಂದ ಸರಿಯಾಗಿ ಸರಬರಾಜು ಆಗುವುದಿಲ್ಲ ಎಂದು ಅಶ್ವಿನಿ ಆರೋಪಿಸಿದರು.

ಪೂರಕ ಮಾಹಿತಿ: ಮಹಮ್ಮದ್ ಅಲಿ

ವಿಟ್ಲ ಹೊರವಲಯದಲ್ಲಿ ತೋಟದ ನಡುವೆ ನಿರ್ಮಿಸಿರುವ ಕಟ್ಟ ನೀರನ್ನು ಹಿಡಿದಿಟ್ಟುಕೊಂಡಿದೆ
ವಿಟ್ಲ ಹೊರವಲಯದಲ್ಲಿ ತೋಟದ ನಡುವೆ ನಿರ್ಮಿಸಿರುವ ಕಟ್ಟ ನೀರನ್ನು ಹಿಡಿದಿಟ್ಟುಕೊಂಡಿದೆ

ಕೇಬಲ್ ಅಳವಡಿಕೆ ಕಾರಣಕ್ಕೆ ಕೆಲವು ಕಡೆಗಳಲ್ಲಿ ಪೈಪ್‌ಗಳಿಗೆ ತೊಂದರೆಯಾಗಿದ್ದರೂ ದೂರ ಬಂದ ತಕ್ಷಣ ಅದನ್ನು ಸರಿಪಡಿಸಿ ನೀರು ಪೂರೈಕೆ ಮಾಡಲಾಗುತ್ತದೆ. - ಗೋಪಾಲ ನಾಯ್ಕ ಪ.ಪಂ. ಮುಖ್ಯಾಧಿಕಾರಿ

ಮುರಿದ ಚರಂಡಿ ಸ್ಲ್ಯಾಬ್‌ಗಳು ಪಟ್ಟಣದಲ್ಲಿ ಚರಂಡಿ ಅವ್ಯವಸ್ಥೆ ಅಸಮರ್ಪಕವಾಗಿದ್ದು ಅಲ್ಲಲ್ಲಿ ಚರಂಡಿ ಸ್ಲ್ಯಾಬ್ ಮುರಿದಿದೆ. ಇಕ್ಕಟ್ಟಾದ ಪೇಟೆಯಲ್ಲಿ ಪಾದಚಾರಿಗಳು ನಡೆದುಕೊಂಡು ಹೋಗುವಾಗ ಮುರಿದ ಸ್ಲ್ಯಾಬ್‌ಗಳಿಂದ ಅಪಾಯವಾಗುವ ಸಾಧ್ಯತೆ ಇದೆ. ತೆರೆದ ಚರಂಡಿಯ ಕಾರಣಕ್ಕೆ ಸೊಳ್ಳೆಯ ಕಾಟವೂ ಜೋರಾಗಿದೆ. ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷ– ಉಪಾಧ್ಯಕ್ಷರಿಲ್ಲದೆ ಎರಡು ವರ್ಷಗಳು ಕಳೆದಿವೆ. ಮೀಸಲಾತಿ ಆಕ್ಷೇಪಿಸಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಆಡಳಿತಾಧಿಕಾರಿ ಮತ್ತು ಮುಖ್ಯಾಧಿಕಾರಿ ಆಡಳಿತ ನಿರ್ವಹಣೆ ಮಾಡುತ್ತಿದ್ದಾರೆ. ಪಟ್ಟಣದ ಅಭಿವೃದ್ಧಿ ಗೌಣವಾಗಿದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರು ಬೇಸರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT