ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಟೀಲು ವಾದನದ ಸೊಬಗಿಗೆ ತನಿಯಾವರ್ತನಂ ರಂಗು

ವಿಠ್ಠಲ ರಾಮಮೂರ್ತಿ ಸನ್ಮಾನ ಸಮಿತಿ, ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕಛೇರಿ; ಉಪನ್ಯಾಸ ಕಾರ್ಯಕ್ರಮ
Last Updated 16 ಸೆಪ್ಟೆಂಬರ್ 2022, 4:54 IST
ಅಕ್ಷರ ಗಾತ್ರ

ಮಂಗಳೂರು: ಸೂಕ್ಷ್ಮ ನುಡಿಸಾಣಿಕೆಯ ಮೂಲಕ ರಾಗಾಲಾಪಗಳ ಮೋಹಕ ಪರಿಸರ ಸೃಷ್ಟಿಯಾದ ವೇದಿಕೆಯಲ್ಲಿ ತನಿಯಾವರ್ತನಂ ಲಯಲೋಕವನ್ನು ತೆರೆದಿರಿಸಿತು. ಒಂದು ತಾಸಿಗೂ ಹೆಚ್ಚು ಸಮಯ ನಡೆದ ಸಂಗೀತ ಕಛೇರಿ ಸಹೃದಯರು ರಸಸಾಗರದಲ್ಲಿ ಮಿಂದೇಳುವಂತೆ ಮಾಡಿತು.

ವಿಠಲ ರಾಮಮೂರ್ತಿ ಸನ್ಮಾನ ಸಮಿತಿ ಮತ್ತು ಮಣಿ ಕೃಷ್ಣಸ್ವಾಮಿ ಅಕಾಡೆಮಿ ನಗರದ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಉಪನ್ಯಾಸ ಮತ್ತು ಸಂಗೀತ ಕಚೇರಿಯಲ್ಲಿ ವಯಲಿನ್ ಮೂಲಕ ಸಂಗೀತ ಪ್ರಿಯರನ್ನು ರಂಜಿಸಿದವರು ಚೆನ್ನೈನ ವಿಠಲ ರಾಮಮೂರ್ತಿ. ಅವರಿಗೆ ಅಮೋಘ ವಾದ್ಯ ಸಹಕಾರ ನೀಡಿದ ಚೆನ್ನೈನ ವಿವಿಎಸ್ ಮುರಾರಿ, ಮುಷ್ಣಂ ರಾಜಾರಾವ್ ಮತ್ತು ಮೈಸೂರಿನ ಜಿ.ಎಸ್‌.ರಾಮಾನುಜಂ ಅವರು ಕಛೇರಿಯನ್ನು ಸ್ಮರಣೀಯವಾಗಿಸಿದರು.

‘ಪಕ್ಕವಾದ್ಯವಾಗಿ ವಯಲಿನ್ ವಾದನ ನಡೆದು ಬಂದ ದಾರಿ’ ಎಂಬ ವಿಷಯದ ಬಗ್ಗೆ ಅಚ್ಚಕನ್ನಡದಲ್ಲಿ ಉಪನ್ಯಾಸ ನೀಡಿದ ನಂತರ ವಾದ್ಯವನ್ನು ತೋಳಿಗೇರಿಸಿಕೊಂಡು ಕುಳಿತ ರಾಮಮೂರ್ತಿ ಅವರು ವರ್ಣದ ನಂತರ ಕಛೇರಿಗೆ ಪ್ರವೇಶಿಸಿದ್ದು ಮಾಯಾಮಾಳವಗೌಳ ರಾಗದ ಮೂಲಕ. ಸ್ವಾತಿ ತಿರುನಾಳರು ರಚಿಸಿದ ‘ದೇವದೇವ ಕಲಯಾಮಿತೆ’ ಕೃತಿಗೆ ವಿವಿಎಸ್ ಮುರಾರಿ ಅವರ ವಾಯಿಲಾ, ಅತ್ಯಮೋಘ ಸೊಬಗು ತುಂಬಿತು.

ಪಾಪನಾಸಂ ಶಿವನ್ ಅವರ ಕೃತಿ ‘ಪರಾತ್ಪರ ಪರಮಹೇಶ್ವರ’ವನ್ನು ನುಡಿಸಿದಾಗ ವಾಚಸ್ಪತಿ ರಾಗದ ಲಹರಿಯಲ್ಲಿ ಸಂಗೀತಪ್ರಿಯರು ತೇಲಿದರು. ಮುಷ್ಣಂ ರಾಜಾರಾವ್ ಅವರ ಮೃದಂಗ ಮತ್ತು ಜಿ.ಎಸ್‌.ರಾಮಾನುಜಂ ಅವರ ಘಟಂ ಈ ಸಂದರ್ಭದಲ್ಲಿ ಮೇಳೈಸಿತು. ಆನಂದ ಭೈರವಿ ರಾಗದಲ್ಲಿ ಶಾಮಾ ಶಾಸ್ತ್ರಿಗಳ ‘ಮರಿವೇರೆ’ ಕೃತಿಯ ನುಡಿಸಾಣಿಕೆಯ ಆರಂಭದಲ್ಲಿ ಆಲಾಪನದ ಸೊಗಸಿತ್ತು.

ಕಲ್ಯಾಣವಸಂತ ರಾಗದಲ್ಲಿ ಪುರಂದರ ದಾಸರ ‘ಇನ್ನೂ ದಯೆ ಬಾರದೆ’ ಪದವನ್ನು ಪ್ರಸ್ತುತಪಸಿಡಿದಾಗ ಸಭಾಂಗಣದಲ್ಲಿದ್ದವರು ರೋಮಾಂಚನಗೊಂಡರು. ನಂತರ ಕಛೇರಿಯ ಮುಖ್ಯಭಾಗಕ್ಕೆ ಪ್ರವೇಶಿಸಿದ ಕಲಾವಿದರು ಕಾಂಬೋಧಿ ರಾಗದಲ್ಲಿ ತ್ಯಾಗರಾಜರ ‘ಓ ರಂಗಸಾಯಿ’ ಕೃತಿಯ ಮೂಲಕ ಪುಳಕಗೊಳಿಸಿದರು. ಕಛೇರಿಯ ಈ ಭಾಗದ ಪ್ರಮುಖ ಅಂಗ ತನಿಯಾವರ್ತನಂ ಆಗಿತ್ತು. ಮುಷ್ಣಂ ರಾಜಾರಾವ್ ಮತ್ತು ರಾಮಾನುಜಂ ಅವರು ಅತ್ಯುತ್ಸಾಹದ ನುಡಿಸಾಣಿಕೆಯ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿದರು.

‘ವಯಲಿನ್ ಈಗ ಪಕ್ಕಾ ಪಕ್ಕವಾದ್ಯ’

ಮಹಾನ್ ಸಂಗೀತಜ್ಞರು ಅನೇಕ ವರ್ಷಗಳಿಂದ ನಡೆಸಿದ ಸಂಶೋಧನೆ ಮತ್ತು ಪ್ರಯತ್ನದ ಫಲವಾಗಿ ವಯಲಿನ್ ಈಗ ಪರಿಪೂರ್ಣ ಪಕ್ಕವಾದ್ಯವಾಗಿ ಬೆಳೆದು ನಿಂತಿದೆ ಎಂದು ವಿಠಲ ರಾಮಮೂರ್ತಿ ಅಭಿಪ್ರಾಯಪಟ್ಟರು.

‘ಐದು ದಶಕಗಳ ಹಿಂದೆ ಅಷ್ಟೊಂದು ಪಕ್ವವಾಗಿಲ್ಲದೇ ಇದ್ದ ವಯಲಿನ್‌ಗೆ ಮೈಸೂರಿನ ಚೌಡಯ್ಯ ಅವರು ಹೊಸ ಜೀವ ತುಂಬಿದರು. ಅವರು ಗಮಕಕ್ಕೆ ಆದ್ಯತೆ ನೀಡಿ ಈ ವಾದ್ಯವನ್ನು ಮುನ್ನೆಲೆಗೆ ತಂದರು. ನಾದವು ಸಮರ್ಪಕವಾಗಿ ಹೊರಡಲು ಅನುವಾಗುವಂತೆ ಏಳು ತಂತಿಗಳನ್ನು ಸೇರಿಸಿದ್ದು ವಯಲಿನ್‌ ನಡೆದು ಬಂದ ಹಾದಿಯಲ್ಲಿ ಮಹತ್ವದ ಘಟ್ಟ. ಇದು, ಪಕ್ಕವಾದ್ಯವಾಗಿ ಇದು ಬಳಕೆಯಾಗಲು ಕಾರಣವಾಯಿತು’ ಎಂದು ಅವರು ಹೇಳಿದರು.

‘ಲಾಲ್‌ಗುಡಿ ಜಯರಾಮನ್ ಮತ್ತಿತರರು ಈ ವಾದ್ಯಕ್ಕೆ ಮತ್ತಷ್ಟು ಖ್ಯಾತಿ ತಂದುಕೊಟ್ಟರು. ಅನೇಕ ಬದಲಾವಣೆಗಳ ಮೂಲಕ ಇದನ್ನು ನುಡಿಸುವುದು ಸುಲಭವಾಗಿದೆ. ಈಗ ಈ ವಾದ್ಯ ಇಲ್ಲದೆ ಸಂಗೀತ ಕಛೇರಿ ಇಲ್ಲ ಎಂಬ ಮಟ್ಟಕ್ಕೆ ಇದು ಬೆಳೆದಿದೆ’ ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT